ನವ ದೆಹಲಿ: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ೮ನೇ ವೇತನ ಆಯೋಗವನ್ನು (8th Pay Commission) ರಚಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧುರಿ ರಾಜ್ಯಸಭೆಗೆ ಸೋಮವಾರ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಮುಂದಿನ ವೇತನ ಆಯೋಗ ಯಾವಾಗ ರಚನೆಯಾಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಇದರೊಂದಿಗೆ ೨೦೨೨ರಲ್ಲಿ ೮ನೇ ವೇತನ ಆಯೋಗ ರಚನೆಯ ಪ್ರಶ್ನೆ ಅಪ್ರಸ್ತುತವಾಗಿದೆ. ಹೊಸ ವೇತನ ಆಯೋಗ ಸ್ಥಾಪನೆಯಾದ ಬಳಿಕ ಅದರ ಶಿಫಾರಸುಗಳು ಜಾರಿಯಾಗಲು ಎರಡು ವರ್ಷ ಬೇಕಾಗುತ್ತದೆ. ಹೀಗಾಗಿ ಬಹುಶಃ ೨೦೨೬ರ ವೇಳೆಗೆ ಹೊಸ ವೇತನ ಆಯೋಗ ರಚನೆಯಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ೭ನೇ ವೇತನ ಆಯೋಗವನ್ನು ೨೦೧೪ರ ಫೆಬ್ರವರಿ ೨೮ರಂದು ರಚಿಸಿತ್ತು. ಹಾಗೂ ಇದರ ಶಿಫಾರಸುಗಳು ೨೦೧೬ರ ಜನವರಿ ೧ರಿಂದ ಜಾರಿಯಾಗಿತ್ತು.
ಎಂಟನೇ ವೇತನ ಆಯೋಗದ ಶಿಫಾರಸುಗಳನ್ನು ೨೦೨೬ರ ಜನವರಿ ೧ರಿಂದ ಜಾರಿಯಾಗುವಂತೆ ನೋಡಿಕೊಳ್ಳುವ ಸಲುವಾಗಿ ಹೊಸ ಆಯೋಗ ರಚನೆಯ ಪ್ರಸ್ತಾಪ ಸರ್ಕಾರದ ಮುಂದೆ ಇದೆಯೇ ಎಂಬ ಪ್ರಶ್ನೆಗೆ ಸಚಿವ ಪಂಕಜ್ ಚೌಧುರಿ ಉತ್ತರಿಸುತ್ತಾ, ಈ ವರ್ಷ ಅಂಥ ಪ್ರಸ್ತಾಪ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದಿದ್ದಾರೆ.
೬ ತಿಂಗಳಿಗೊಮ್ಮೆ ತುಟ್ಟಿಭತ್ಯೆ ಪರಿಷ್ಕರಣೆ ( Dearness allowances): ಹಣದುಬ್ಬರ ಅಥವಾ ಬೆಲೆ ಏರಿಕೆಯ ಪರಿಣಾಮ, ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ವೇತನದ ನೈಜ ಮೌಲ್ಯ ಕಡಿಮೆಯಾಗದಂತೆ ನೋಡಿಕೊಳ್ಳಲು, ಹಣದುಬ್ಬರಕ್ಕೆ ತಕ್ಕಂತೆ ತುಟ್ಟಿಭತ್ಯೆಯನ್ನು ನೀಡಲಾಗುತ್ತದೆ. ಹಾಗೂ ಅದನ್ನು ಪ್ರತಿ ೬ ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಸಚಿವರು ವಿವರಿಸಿದರು. ಅಕ್ರೋಯ್ಡ್ ಸೂತ್ರದ (Aykroyd formula) ಪ್ರಕಾರವೂ ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ಪರಿಗಣಿಸಿ ವೇತನ ಪರಿಷ್ಕರಣೆಯ ಶಿಫಾರಸು ಸಲ್ಲಿಕೆಯಾಗುತ್ತದೆ.
ಏನಿದು ವೇತನ ಆಯೋಗ?: ಸರ್ಕಾರಿ ಉದ್ಯೋಗಿಗಳ ವೇತನದ ಸ್ವರೂಪಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಶಿಫಾರಸು ನೀಡುವ ಕೆಲಸವನ್ನು ವೇತನ ಆಯೋಗ ಮಾಡುತ್ತದೆ. ೧೯೪೬ರ ಜನವರಿಯಲ್ಲಿ ಮೊದಲ ವೇತನ ಆಯೋಗ ರಚನೆಯಾಗಿತ್ತು. ಬಳಿಕ ೧೦ ವರ್ಷಕ್ಕೊಮ್ಮೆ ಕೇಂದ್ರ ಸರ್ಕಾರ ವೇತನ ಆಯೋಗವನ್ನು ರಚಿಸಿದೆ. ಸಾಮಾನ್ಯವಾಗಿ ಶಿಫಾರಸು ಸಲ್ಲಿಸಲು ೧೮ ತಿಂಗಳಿನ ಕಾಲಾವಕಾಶ ನೀಡಲಾಗುತ್ತದೆ. ಹೊಸದಿಲ್ಲಿಯಲ್ಲಿ ಇದರ ಪ್ರಧಾನ ಕಚೇರಿ ಇದೆ.