ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಯುವಕರ ಮನಗೆಲ್ಲಲು ಮುಂದಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, 18,567 ಜನರಿಗೆ ಉದ್ಯೋಗ ಸೃಷ್ಟಿ (Employment Generation) ಮಾಡುವ ಸಾಮರ್ಥ್ಯದ ಬೃಹತ್ ಮೊತ್ತದ ಹೂಡಿಕೆಗೆ ಅನುಮತಿ ನೀಡಿದೆ.
ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿಯ (SLSWCC) 137ನೇ ಸಭೆಯಲ್ಲಿ ವಿವಿಧೆಡೆ ಕೈಗಾರಿಕೆ ಸ್ಥಾಪಿಸುವ 59 ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದೆ.
50 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಮಾಡಲು ಇಚ್ಛಿಸಿರುವ 11 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಪ್ರಸ್ತಾವನೆಗಳನ್ನು ಸಮಿತಿ ಒಪ್ಪಿತು. ಈ ಪ್ರಸ್ತಾವನೆಯ ಮೊತ್ತವು 2,186 ಕೋಟಿ ರೂ. ಆಗಲಿದ್ದು, 10,559 ಜನರಿಗೆ ಉದ್ಯೋಗ ನೀಡುವ ಅಂದಾಜಿದೆ.
ಅದೇ ರೀತಿ 15- 50 ಕೋಟಿ ರೂ.ವರೆಗೆ ಹೂಡಿಕೆ ಇಚ್ಛೆ ವ್ಯಕ್ತಪಡಿಸಿರುವ 46 ಯೋಜನೆಗಳನ್ನೂ ಸಮಿತಿ ಪರಿಗಣಿಸಿತು. ಈ ಪ್ರಸ್ತಾವನೆಗಳ ಮೂಲಕ 1049.19 ಕೋಟಿ ರೂ. ಹೂಡಿಕೆ ಆಗಲಿದ್ದು, 8,008 ಜನರಿಗೆ ಉದ್ಯೋಗ ದೊರಕುವ ಸಾಧ್ಯತೆಯಿದೆ.
ಹೆಚ್ಚುವರಿ ಹೂಡಿಕೆಗೆ ಮುಂದಾದ ಎರಡು ಕಂಪನಿಗಳ ಪ್ರಸ್ತಾವನೆ ಸೇರಿ 219.50 ಕೋಟಿ ರೂ. ಹೂಡಿಕೆಗೂ ಒಪ್ಪಿಗೆ ನೀಡಲಾಯಿತು. ಎಲ್ಲವೂ ಸೇರಿ ಕಂಪನಿಗಳು 3455.39 ರೂ. ಹೂಡಿಕೆ ಮಾಡಲಿವೆ.
ಒಪ್ಪಿಗೆ ಪಡೆದ ಕೆಲವು ಯೋಜನೆಗಳು
ಕಂಪನಿ | ಹೂಡಿಕೆ (ಕೋಟಿ ರೂ.) | ಉದ್ಯೋಗ | |
1 | ಮೈಸೂರು ಸ್ಟೀಲ್ ಲಿಮಿಟೆಡ್, ಮೈಸೂರು | 405.43 | 200 |
2 | NIDEC ಇಂಡಸ್ಟ್ರಿಯಲ್ ಆಟೋಮೇಷನ್ ಲಿಮಿಟೆಡ್, ಬೆಂಗಳೂರು | 350 | 730 |
3 | ಸಿಲೋನ್ ಬೆವರೇಜ್ ಕ್ಯಾನ್ ಪ್ರೈ. ಲಿಮಿಟೆಡ್, ಚೆನ್ನೈ | 256.3 | 200 |
4 | ಬಾಲಾಜಿ ವೇಫರ್ಸ್ ಪ್ರೈ. ಲಿ., ಅಹಮದಾಬಾದ್ | 251.25 | 7467 |
5 | ಮಂಜುಶ್ರೀ ಟೆಕ್ನೊ ಪಾರ್ಕ್, ಬೆಂಗಳೂರು | 153 | 500 |
6 | ಕ್ಷೀರೋದ ಇಂಡಿಯನ್ ಪ್ರೈ. ಲಿ., ಬೆಂಗಳೂರು | 138 | 160 |
7 | ಮಹಾಮಾನ್ ಇಸ್ಪಾತ್ ಪ್ರೈ. ಲಿ., ಬಳ್ಳಾರಿ | 90 | 90 |
8 | ಎ.ಸಿ.ಆರ್. ಪ್ರಾಜೆಕ್ಟ್ಸ್ ಪ್ರೈ. ಲಿ., ಬೆಂಗಳೂರು | 85 | 350 |
9 | ನಿಯೋಬೀ ಸಲ್ಯೂಷನ್ ಪ್ರೈ. ಲಿ., ಬೆಂಗಳೂರು | 50 | 563 |
10 | ಅಭಯ್ ಆಗ್ರೊ ಫುಡ್ಸ್ ಪ್ರೈ. ಲಿ., ಕೊಪ್ಪಳ | 32.65 | 35 |