Site icon Vistara News

Fraud Case: ಸರ್ಕಾರಿ ಕೆಲಸಕ್ಕೆಂದು ಕಂಡ ಕಂಡವರ ಬಳಿ ಹೋಗ್ಬೇಡಿ; ಫೇಕ್‌ ಅಪಾಯಿಂಟ್ಮೆಂಟ್‌ ಆರ್ಡರ್‌ ಕೊಡ್ತಾರೆ!

Fake appointment letter

ಬೆಂಗಳೂರು: ಉದ್ಯೋಗಾಕಾಂಕ್ಷಿಗಳನ್ನು ಹುಡುಕಿ ಸರ್ಕಾರಿ ಕೆಲಸ (Govt Job) ಕೊಡಿಸುವ ನೆಪದಲ್ಲಿ ವಂಚನೆ ಮಾಡಿರುವ (Fraud Case) ಘಟನೆ ನಡೆದಿದೆ. ಬೆಸ್ಕಾಂನಲ್ಲಿ (Bescom) ಕಿರಿಯ ಸಹಾಯಕ ಹುದ್ದೆಗಾಗಿ ನಕಲಿ ನೇಮಕಾತಿ ಪತ್ರವನ್ನು ನೀಡಿದವನು ಸೇರಿ ಏಳು ಮಂದಿಯನ್ನು ಹೈಗ್ರೌಂಡ್ಸ್‌ ಪೊಲೀಸರು (Highgrounds Police) ಬಂಧಿಸಿದ್ದಾರೆ. ನಕಲಿ ನೇಮಕಾತಿ ಪತ್ರ ತಂದಿದ್ದ ವೆಂಕಟೇಶ್‌ ವೈಭವ್‌ ಸೇರಿ ಪ್ರಜ್ವಲ್‌, ಪ್ರವೀಣ್‌, ಪ್ರದೀಪ್‌ ಹಾಗೂ ಪುರುಷೋತ್ತಮ್, ಲೋಹಿತ್‌, ಶಿವಪ್ರಸಾದ್, ವಿಜಯ್ ಕುಮಾರ್ ಶಿವಲಿಂಗಪ್ಪ ಬಂಧಿತ ಆರೋಪಿಗಳಾಗಿದ್ದಾರೆ.

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ವೆಂಕಟೇಶ್ ವೈಭವ್ ಎಂಬಾತ ಬೆಸ್ಕಾಂನ ಕಿರಿಯ ಸಹಾಯಕ ಹುದ್ದೆಗೆ ಆಯ್ಕೆಯಾಗಿರುವ ನೇಮಕಾತಿ ಪತ್ರ ತಂದಿದ್ದ. ಈ ನೇಮಕಾತಿ ಪತ್ರವನ್ನು ನೋಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರೇ ದಂಗಾಗಿದ್ದರು. ಯಾಕೆಂದರೆ ಇದು ಅಸಲಿ ನೇಮಕಾತಿ ಪತ್ರವಾಗಿರದೇ ನಕಲಿ ಆಗಿತ್ತು.

ವೆಂಕಟೇಶ್ ವೈಭವ್, ಅಸಲಿ ನೇಮಕಾತಿ ಪತ್ರ ಎಂದು ತಿಳಿದು ಕೆಲಸಕ್ಕೆ ವರದಿ ಮಾಡಿಕೊಳ್ಳಲು ಬಂದಿದ್ದರು. ಅಧೀಕ್ಷಕ ಎಂಜಿನಿಯರ್ ಸಹಿ ಮಾಡಿರುವ ನೇಮಕಾತಿ ಪತ್ರ ಕಂಡು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅನುಮಾನಗೊಂಡಿದ್ದರು. ನೇಮಕಾತಿ ಪತ್ರದಲ್ಲಿ ನಕಲಿ ಸೀಲ್ ಮತ್ತು ನಕಲಿ ಸಹಿ ಇರುವುದು ಗಮನಿಸಿದರು.

ಬಳಿಕ ಅಧೀಕ್ಷಕ ಎಂಜಿನಿಯರ್‌ ತಮ್ಮಲ್ಲಿಗೆ ಕರೆಸಿ ಪರಿಶೀಲಿಸಿದಾಗ ನಕಲಿ ನೇಮಕಾತಿ ಪತ್ರ ಎಂಬುದು ತಿಳಿದು ಬಂದಿದೆ. ಈ ಸಂಬಂಧ ವೆಂಕಟೇಶ್‌ ವೈಭವ್‌ನನ್ನು ವಿಚಾರಿಸಿದಾಗ, ಈತನ ಬಳಿ 20 ಲಕ್ಷ ರೂ. ಪಡೆದು ನೇಮಕಾತಿ ಪತ್ರ ನೀಡಿ, ಕೆಲಸಕ್ಕೆ ಸೇರಿಕೊಳ್ಳುವಂತೆ ಹೇಳಿ ಕಳುಹಿಸಿದ್ದನ್ನು ವಿವರಿಸಿದ್ದಾನೆ. ಸರ್ಕಾರಿ ಕೆಲಸ ಸಿಕ್ಕ ಖುಷಿಗೆ ಬೆಸ್ಕಾಂ ಕಚೇರಿಗೆ ಬಂದಾಗ, ಇದು ಅಸಲಿ ಅಲ್ಲ ನಕಲಿ ಎಂದು ತಿಳಿದು ಬಂದಿದೆ.

ಈ ಸಂಬಂಧವನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆಗಿಳಿದ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಉದ್ಯೋಗಾಕಾಂಕ್ಷಿಗಳನ್ನೇ ಟಾರ್ಗೆಟ್‌ ಮಾಡುವ ಈ ಆರೋಪಿಗಳು ಅವರಿಗೆ ಸರ್ಕಾರಿ ಉದ್ಯೋಗವನ್ನು ಕೊಡಿಸುವುದಾಗಿ ಹೇಳಿ ಲಕ್ಷ ಲಕ್ಷ ಪಡೆದು ವಂಚಿಸಿದ್ದಾರೆ.

ಇದನ್ನೂ ಓದಿ: Video Viral: ಅಯ್ಯೋ ಭಗವಂತ, ಆನೆ ಓಡೋಡಿ ಬಂದೇ ಬಿಡ್ತು, ಇನ್ನೇನು ಗತಿ?; ವಿಚಾರವಾದಿ ಭಗವಾನ್ ಜಸ್ಟ್‌ ಸೇವ್‌!

ಬಂಧಿತ ಪ್ರಜ್ವಲ್‌, ಮಧ್ಯವರ್ತಿಗಳಿಂದ ಹಣ ಪಡೆದು ಕೆಲಸ ಕೊಡಿಸುವ ನೆಪದಲ್ಲಿ ನಕಲಿ ನೇಮಕಾತಿ ಆದೇಶಗಳನ್ನು ಸೃಷ್ಟಿಸಿ, ಆದೇಶ ಪತ್ರಿಗಳನ್ನು ನೀಡುತ್ತಿದ್ದ. ಪ್ರವೀಣ್‌ ಎಂಬುವವನು ಮಧ್ಯವರ್ತಿಗಳಿಂದ ಹಣ ಪಡೆದು ಪ್ರಜ್ವಲ್‌ಗೆ ನೀಡಿ, ಆದೇಶ ಪತ್ರಿಗಳನ್ನು ಪಡೆದುಕೊಳ್ಳುತ್ತಿದ್ದ. ಪ್ರದೀಪ್‌, ಪುರುಷೋತ್ತಮ್‌ ಹಾಗೂ ಲೋಹಿತ್‌ ಎಲ್ಲರೂ ಮಧ್ಯವರ್ತಿಗಳಾಗಿದ್ದು ಕಮಿಷನ್‌ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು, ಎಲ್ಲ ಆರೋಪಿಗಳನ್ನು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version