ಆನೇಕಲ್: ಅವನು ಸರ್ಕಾರಿ ಕೆಲಸ ಕೊಡಿಸುವ ಏಜೆಂಟ್! ಅವಳು ಕೆಲಸ ಕೊಡೋ ಅಧಿಕಾರಿ! ಇಬ್ಬರೂ ಸೇರಿ ಹತ್ತಾರು ಮಂದಿಯ ತಲೆಯನ್ನು ಚೆನ್ನಾಗಿ ಸವರಿ ಕೋಟಿ ಕೋಟಿ (Government job Scam) ರೂ. ವಸೂಲಿ ಮಾಡಿದ್ದರು. ಜನ ತಿರುಗಿಬೀಳುತ್ತಿದ್ದಂತೆಯೇ ಗೋವಾಗೆ ಪರಾರಿಯಾಗಿದ್ದರು. ಈಗ ಆನೇಕಲ್ ಪೊಲೀಸರು ಅವರಿಬ್ಬರನ್ನು ಹಿಡಿದುಕೊಂಡು ಬಂದು ವಿಚಾರಣೆ (Fraud Case) ನಡೆಸಿದ್ದಾರೆ.
ಇದು ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಂಚನೆಯ ಪ್ರಕರಣ. ಹೀಗೆ ವಂಚನೆ ಮಾಡಿದವನು ಮಂಜುನಾಥ್, ಅವನ ಮಾಸ್ಟರ್ ಪ್ಲ್ಯಾನ್‌ನಲ್ಲಿ ಸರ್ಕಾರಿ ಅಧಿಕಾರಿಯ ಪಾತ್ರ ನಿರ್ವಹಿಸಿ ಗತ್ತು ತೋರಿದವಳು ಗೀತಾ!
ತಿಪಟೂರಿನ ಅರಳಗುಪ್ಪೆ ಮೂಲದ ಮಂಜುನಾಥ್ ಕೆಲ ವರ್ಷಗಳಿಂದ ಹೆಬ್ಬಗೋಡಿ ಸಮೀಪದ ವಿದ್ಯಾನಗರ ಲೇಔಟ್ ನಲ್ಲಿ ವಾಸವಿದ್ದ. ಅವನು ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವರಿಗೆ ವಂಚನೆ ಮಾಡಿದ್ದಾನೆ. ವಂಚಕ ಮಂಜುನಾಥನಿಗೆ ಸಾಥ್ ನೀಡಿದ್ದು ಗೀತಾ ಎಂಬ ಮಹಿಳೆ ಹಾಗೂ ಪುಟ್ಟಸ್ವಾಮಿ.
ಇವನ ವಂಚನೆ ಸ್ಟೈಲ್ ಕೇಳಿದ್ರೆ ಬೆಚ್ಚಿ ಬೀಳ್ತೀರಿ!
ಮಂಜುನಾಥ್ ಸರ್ಕಾರಿ ಕೆಲಸ ಕೊಡಿಸೋದಾಗಿ ವಂಚನೆ ಮಾಡುತ್ತಾನೆ. ಅವನ ಪ್ರಧಾನ ಟಾರ್ಗೆಟ್ ಎಪಿಎಂಸಿ ಕೆಲಸ. ಹುಸ್ಕೂರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅವರಿಂದ ಹಣ ಪಡೆದ ಮಂಜುನಾಥ ಅವರಿಗೆ ಕೆಲಸ ಸಿಕ್ಕಿಯೇ ಬಿಟ್ಟಿತು ಎಂಬಂತೆ ನಂಬಿಸುತ್ತಿದ್ದ.
ಹಣ ಪಡೆದ ಬಳಿಕ ಅವನು ಅರ್ಜಿದಾರರನ್ನು ಕರೆದುಕೊಂಡು ಹೋಗುತ್ತಿದ್ದುದು ಒಬ್ಬ ಎಪಿಎಂಸಿ ಅಧಿಕಾರಿಯ ಬಳಿಗೆ. ಆ ಎಪಿಎಂಸಿ ಅಧಿಕಾರಿಯೇ ಗೀತಾ! ಈಕೆ ಅಧಿಕಾರಿಯೇನಲ್ಲ. ಆದರೆ, ಅಧಿಕಾರಿಯ ಖದರು ಇರುವ ಸ್ಟೈಲಿಷ್ ಮಹಿಳೆ. ಅವಳನ್ನು ನೋಡಿದ ಕೂಡಲೇ ಎಪಿಎಂಸಿ ಅಧಿಕಾರಿ ಎಂದು ಫೀಲ್ ಮಾಡಿಕೊಳ್ಳುವ ಉದ್ಯೋಗಾಕಾಂಕ್ಷಿಗಳು ಕೆಲಸ ಸಿಕ್ಕಿಯೇ ಬಿಟ್ಟಿತು ಎಂದು ಖುಷಿಪಡುತ್ತಿದ್ದರು. ಏನಾದರೂ ಬಾಕಿ ಉಳಿಸಿಕೊಂಡಿದ್ದರೆ ಅದನ್ನೂ ಕೊಟ್ಟುಬಿಡುತ್ತಿದ್ದರು.
ಇವನ ಪ್ರಮುಖ ಟಾರ್ಗೆಟ್ ಕೂಲಿ ನಾಲಿ ಮಾಡುತ್ತಿದ್ದ ಜನರೇ. ಈ ಉದ್ಯೋಗಗಳಿಗೆ ಹೆಚ್ಚು ವಿದ್ಯಾಭ್ಯಾಸ ಬೇಡ ಎಂದು ಹೇಳುತ್ತಿದ್ದ ಈತ ಅವರನ್ನು ನಂಬಿಸುತ್ತಿದ್ದ. ಒಂದೊಳ್ಳೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂಬ ಕಾರಣಕ್ಕೆ ಅವರು ಹಣ ಕೊಡಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಉದ್ಯೋಗಗಳ ಆಧಾರದಲ್ಲಿ ಲಕ್ಷಾಂತರ ರೂ. ವಸೂಲಿ ಮಾಡುತ್ತಿದ್ದ. ಹೀಗೆ ಅವನು ಮಾಡಿದ ವಂಚನೆಯ ಮೊತ್ತವೇ ಒಂದು ಕೋಟಿಗೂ ಅಧಿಕ!
ಅಪಾಯಿಂಟ್‌ಮೆಂಟ್ ಆರ್ಡರ್ ಕೊಡುತ್ತಿದ್ದ!
ಹುಸ್ಕೂರು, ಮೈಸೂರು, ಯಶವಂತಪುರ ಸೇರಿದಂತೆ ಬೇರೆ ಬೇರೆ ಕಡೆಗಳ ಎಪಿಎಂಸಿಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಮಂಜುನಾಥ. ಅವನ ಬಳಿ ಬಿಲ್ ಕಲೆಕ್ಟರ್, ಡ್ರೈವರ್, ಆಫೀಸ್ ವರ್ಕ್ ಮೊದಲಾದ ಕೆಲಸಗಳು ಇದ್ದವು. ಮುಗ್ದ ಹಳ್ಳಿಯ ಜನರನ್ನೇ ಟಾರ್ಗೆಟ್ ಮಾಡುತ್ತಿದ್ದ ವಂಚಕ ಮಂಜುನಾಥ್ ಹಣ ಪಡೆದು ಎಲ್ಲರಿಗೂ ಅಪಾಯಿಂಟ್ ಅರ್ಡರ್ ಕೊಟ್ಟುಬಿಡುತ್ತಿದ್ದ!
ಅಪಾಯಿಂಟ್‌ಮೆಂಟ್ ಆರ್ಡರ್‌ನಲ್ಲಿ ರಾಜು ಸಿ ಆರ್ ಎಂದು ಸಹಿ ಮಾಡಿ ಸೀಲ್ ಹಾಕುತ್ತಿದ್ದ!
ಕೆಲಸ ಸಿಕ್ಕಿತು.. ಹಾಗಿದ್ದರೆ ಮುಂದೇನು?
ಅಪಾಯಿಂಟ್‌ಮೆಂಟ್ ಆರ್ಡರ್ ಸಿಕ್ಕಿದ ಕೂಡಲೇ ಎಲ್ಲರಿಗೂ ಖುಷಿಯಾಗುತ್ತಿತ್ತು. ಆದರೆ, ಇದನ್ನು ಯಾರಿಗೂ ತೋರಿಸಬೇಡಿ ಎನ್ನುತ್ತಿದ್ದ ಮಂಜುನಾಥ್. ಯಾಕೆಂದರೆ ಇದು ಹಣ ಕೊಟ್ಟು ಪಡೆದ ಉದ್ಯೋಗವಾಗಿರುವುದರಿಂದ ಸಮಸ್ಯೆ ಆಗಬಹುದು ಎಂದು ಹೇಳುತ್ತಿದ್ದ. ಹೀಗಾಗಿ ಕೆಲಸ ಪಡೆದವರು ತಮಗೆ ಉದ್ಯೋಗ ಆಗಿದೆ ಎಂದು ಯಾರಿಗೂ ಹೇಳುತ್ತಲೇ ಇರಲಿಲ್ಲ.
ಕೆಲವರು ಸ್ವಲ್ಪ ಸಮಯದ ನಂತರ ಯಾವಾಗ ಆಫೀಸಿಗೆ ಹೋಗಬೇಕು ಎಂದು ಪದೇಪದೆ ಕೇಳಿದರೆ ಇನ್ನು ಸ್ವಲ್ಪ ದಿನ ನಿಮಗೆ ವರ್ಕ್ ಫ್ರಂ ಹೋಮ್ ಎನ್ನುತ್ತಿದ್ದ!
ಅವನೆಷ್ಟು ಬುದ್ಧಿವಂತನೆಂದರೆ ಅವನು ಯಾರಿಗೂ ಸಂಶಯ ಬಾರದಂತೆ ಎಪಿಎಂಸಿಯಲ್ಲಿನ ಕೆಲವು ಪುಸ್ತಕಗಳನ್ನು ಇಟ್ಟುಕೊಂಡಿದ್ದ. ಕೆಲವಯ ದಿನಗಳ ಕಾಲ ವರ್ಕ್ ಫ್ರಮ್ ಹೋಮ್ ಕೆಲಸ ಮಾಡಿ ಎಂದು ಹೇಳುತಿದ್ದ ಆತ ತಾನು ನೀಡುತ್ತಿದ್ದ ಬುಕ್ ಗಳಲ್ಲಿ ಪ್ರತಿನಿತ್ಯ ಎಂಟ್ರಿ ಮಾಡಲು ತಿಳಿಸುತ್ತಿದ್ದ.
ವರ್ಕ್ ಫ್ರಂ ಹೋಮ್‌ನ ಖುಷಿಯಲ್ಲಿರುವ ಅವರಿಗೆ ಸಂಬಳ ಮುಂದಿನ ತಿಂಗಳು ಎಂದೆಲ್ಲ ತಲೆ ಸವರುತ್ತಿದ್ದ. ಆದರೆ, ಈಗ ಕೆಲವು ತಿಂಗಳಿನಿಂದ ಸಂಬಳವೇ ಬಂದಿಲ್ಲ ಎಂದಾದಾಗ ಅನುಮಾನ ಬಂದಿದೆ. ಅವರೆಲ್ಲ ಮಂಜುನಾಥನ ಬೆನ್ನು ಬಿದ್ದಿದ್ದಾರೆ.
ಹೀಗೆ ಬೆನ್ನು ಬಿದ್ದಾಗ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ ಮಂಜುನಾಥ. ಅದೇ ಹೊತ್ತಿಗೆ ಎಪಿಎಂಸಿ ಅಧಿಕಾರಿ ಗೀತಾಳನ್ನು ಹುಡುಕಿಕೊಂಡು ಹೋದರೆ ಆಕೆಯೂ ನಾಪತ್ತೆ! ಮೋಸ ಹೋದ ಜನರಿಂದ ಹೆಬ್ಬಗೋಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ಮೇಲೆ ಪೊಲೀಸರು ಹುಡುಕಲು ಶುರು ಮಾಡಿದ್ದಾರೆ. ಈಗ ಅವರಿಬ್ಬರೂ ಗೋವಾದಲ್ಲಿ ಇರುವುದು ಗೊತ್ತಾಗಿ ಅಲ್ಲಿಂದ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಹೆಂಡತಿಗೇ ವಂಚನೆ ಮಾಡಿ 3 ಲಕ್ಷ ರೂ. ಪೀಕಿಸಿದ್ದ
ಅಂದಹಾಗೆ ಈ ಮಂಜುನಾಥ ಅದ್ಯಾವ ಪರಿ ಮೋಸಗಾರ ಎಂದರೆ ಮೊದಲಿಗೆ ತನ್ನ ಪತ್ನಿಗೇ ಕೆಲಸ ಕೊಡೊಸೋದಾಗಿ ವಂಚಿಸಿದ್ದ! ಆಕೆಗೆ ಸರಕಾರಿ ಕೆಲಸ ಕೊಡಿಸಲು ಆಕೆಯ ತವರು ಮನೆಯಿಂದ 3 ಲಕ್ಷ ರೂ. ಹಣವನ್ನು ಪಡೆದಿದ್ದ. ಆಕೆಗೂ ನಕಲಿ ಆರ್ಡರ್ ಕಾಪಿ ನೀಡಿದ್ದ. ಮಾತ್ರವಲ್ಲ ಆಕೆಯ ಸಂಬಂಧಿಕರಿಗೂ ಕೆಲಸ ಕೊಡಿಸೋದಾಗಿ ಗಾಳ ಹಾಕಿದ್ದ!