Site icon Vistara News

Govt Jobs: ನಿರುದ್ಯೋಗಿಗಳಿಗೆ ಗುಡ್‌ನ್ಯೂಸ್‌; ಶೀಘ್ರ ವಿವಿಧ ಹುದ್ದೆಗಳ ಭರ್ತಿಗೆ ಮುಂದಾದ ಸರ್ಕಾರ

vidhana soudha

vidhana soudha

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಬಿದ್ದಿದೆ. ಇದೀಗ ಸರ್ಕಾರ ಈ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿರುವುದು ನಿರುದ್ಯೋಗಿಗಳ ಮೊಗದಲ್ಲಿ ನಗು ಮೂಡಿಸಿದೆ. 2024ರಲ್ಲಿ ಸರ್ಕಾರ ಯಾವೆಲ್ಲ ಹುದ್ದೆಗಳನ್ನು ಭರ್ತಿ ಮಾಡಬಹುದು, ಯಾವೆಲ್ಲ ಇಲಾಖೆಗಳ ಹುದ್ದೆಗಳಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಆಗಿದೆ ಮುಂತಾದ ವಿವರ ಇಲ್ಲಿದೆ (Govt Jobs).

ಗ್ರಾಮ ಆಡಳಿತಾಧಿಕಾರಿಗಳ ನೇಮಕ

ರಾಜ್ಯ ಸರ್ಕಾರ ವಿಲೇಜ್‌ ಅಕೌಂಟೆಂಟ್‌ ಹುದ್ದೆಯನ್ನು ಗ್ರಾಮ ಆಡಳಿತಾಧಿಕಾರಿ ಎಂದು ಮರು ನಾಮಕರಣ ಮಾಡಿದೆ. ಶೀಘ್ರ 750 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಹಿಂದೆ ವಿಲೇಜ್‌ ಅಕೌಂಟೆಂಟ್‌ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪಿಯುಸಿ ಅಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತಿತ್ತು. ಇದೀಗ ಈ ವಿಧಾನವನ್ನು ಬದಲಾಯಿಸಲು ಸರ್ಕಾರ ಮುಂದಾಗಿದ್ದು, ರಾಜ್ಯ ಮಟ್ಟದಲ್ಲಿ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಮೆರಿಟ್‌ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಥವಾ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಸಾರಿಗೆ ಇಲಾಖೆಯಲ್ಲಿ ನೇಮಕಾತಿ

ಸಾರಿಗೆ ಇಲಾಖೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇವೆ. 2016ರ ನಂತರ ಸಾರಿಗೆ ಇಲಾಖೆಯಲ್ಲಿ ಸರ್ಕಾರಿ ಹುದ್ದೆಗಳ ನೇಮಕ ಆಗಿಲ್ಲ. ಇದೀಗ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, ಅಗತ್ಯ ಸಿಬ್ಬಂದಿ ಪೂರೈಸುವ ನಿಟ್ಟಿನಲ್ಲಿ ಮುಂದಿನ ವರ್ಷ 9,000 ಸಾರಿಗೆ ಸಿಬ್ಬಂದಿ ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ಉಪನೋಂದಣಿ ಕಚೇರಿಗೆ ಸಿಬ್ಬಂದಿ ಆಯ್ಕೆ

ರಾಜ್ಯದ 256 ಉಪನೋಂದಣಿ ಕಚೇರಿಗಳಿಗೆ ಒಟ್ಟು 1,145 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 455 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಈ ಬಗ್ಗೆ ಮಾತನಾಡಿ, ಆರ್ಥಿಕ ಇಲಾಖೆ ಜತೆ ಚರ್ಚಿಸಿ ಹೆಚ್ಚುವರಿ ಹುದ್ದೆಗಳ ಭರ್ತಿಗೆ ಅನುಮತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ಪಿಡಿಒಗಳ ನೇಮಕ

ಗ್ರಾಮಗಳ ಅಭಿವೃದ್ಧಿಯಲ್ಲಿ ಪಿಡಿಒ(ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ)ಗಳ ಪಾತ್ರ ಮುಖ್ಯ. ಸದ್ಯ ಹಲವು ಕಡೆಗಳಲ್ಲಿ ಈ ಹುದ್ದೆಗಳು ಖಾಲಿ ಇವೆ. ಅಂಕಿ ಅಂಶದ ಪ್ರಕಾರ ಪಿಡಿಒ-150, ಪಂಚಾಯತ್‌ ಕಾರ್ಯದರ್ಶಿ ಗ್ರೇಡ್‌-1 135, ಪಂಚಾಯತ್‌ ಕಾರ್ಯದರ್ಶಿ ಗ್ರೇಡ್‌ 2- 343, ದ್ವಿತೀಯ ದರ್ಜೆ ಲೆಕ್ಕ ಸಹಾಯಕ -105 ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಸಿದ್ಧಗೊಂಡಿದೆ ಎನ್ನಲಾಗಿದೆ.

ಪೊಲೀಸ್‌ ಇಲಾಖೆಯಲ್ಲಿ ನೇಮಕಾತಿ

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಬರೋಬ್ಬರಿ 20,000 ಹುದ್ದೆಗಳು ಖಾಲಿ ಇವೆ. ಈ ಪೈಕಿ ಕೆಲವೊಂದು ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರಬೀಳಲಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹುದ್ದೆಗಳ ಭರ್ತಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒಟ್ಟು 2,439 ನಿಲಯ ಪಾಲಕರು / ನಿಲಯ ಮೇಲ್ವಿಚಾರಕರ ಹುದ್ದೆಗಳು ಮಂಜೂರಾಗಿದ್ದು, 1250 ಹುದ್ದೆಗಳು ಖಾಲಿ ಇವೆ. ಇದರ ಜತೆಗೆ ಹೆಚ್ಚುವರಿ 188 ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ 41 ಅಭ್ಯರ್ಥಿಗಳ ಪಟ್ಟಿ ಸ್ವೀಕರಿಸಲಾಗಿದೆ. ಇವರಿಗೆ ನೇಮಕಾತಿ ಆದೇಶ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಉಳಿದ 1,006 ಹುದ್ದೆಗಳಿಗೆ ನೇರ ನೇಮಕಾತಿ ಕೋಟಾದಡಿ ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಕೆಎಎಸ್‌ ಹುದ್ದೆಗಳ ನೇಮಕಾತಿ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕೆಎಎಸ್‌ (ಕರ್ನಾಟಕ ನಾಗರಿಕ ಸೇವೆ) ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 656 ಹುದ್ದೆಗಳ ಪೈಕಿ 504 ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಕಾರಾಗೃಹ ಇಲಾಖೆ, ವಾಣಿಜ್ಯ ತೆರಿಗೆಗಳ ಇಲಾಖೆ, ಖಜಾನೆ ಇಲಾಖೆ, ಅಬಕಾರಿ ಇಲಾಖೆ, ಸಹಕಾರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳಿಂದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದ್ದಾರೆ.

ವಾರ್ಡನ್‌ ಹುದ್ದೆಗಳು

ನೇರ ನೇಮಕಾತಿ ಕೋಟಾದಡಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ 232 ವಾರ್ಡನ್‌ ಹುದ್ದೆಗಳ ಭರ್ತಿ ಕುರಿತು ಆರ್ಥಿಕ ಇಲಾಖೆಯ ಸಹಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆಯಿಂದ ಹುದ್ದೆಗಳ ಭರ್ತಿ

ರಾಜ್ಯದ ಅರಣ್ಯ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ACF), ವಲಯ ಅರಣ್ಯಾಧಿಕಾರಿ (RFO) ಮತ್ತು ಉಪ ವಲಯ ಅರಣ್ಯ ಅಧಿಕಾರಿ (DRFO) ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ. 

ಇದನ್ನೂ ಓದಿ: Government Job: 504 ಗೆಜೆಟೆಡ್‌ ಹುದ್ದೆಗಳಿಗೆ ಶೀಘ್ರ ನೇಮಕ; ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ?

Exit mobile version