ನವದೆಹಲಿ: ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಕೆಲ ರಾಷ್ಟ್ರಗಳಲ್ಲಿ ಹಿಂಜರಿತದ ಪರಿಣಾಮದಿಂದಾಗಿ ಫೇಸ್‌ಬುಕ್, ಮೈಕ್ರೋಸಾಫ್ಟ್, ಟ್ವಿಟರ್ ಸೇರಿ ಜಾಗತಿಕ ಕಂಪನಿಗಳೇ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದವು. ಆದರೆ, ಭಾರತದಲ್ಲಿ ಆರ್ಥಿಕ ಹಿಂಜರಿತ ಉಂಟಾಗದ ಕಾರಣ ಈಗ ಐಟಿ ಕಂಪನಿಗಳು (IT Companies) ಸಾವಿರಾರು ಉದ್ಯೋಗಿಗಳನ್ನು ನೇಮಕ (IT Recruitment 2023) ಮಾಡಿಕೊಳ್ಳಲು ಮುಂದಾಗಿವೆ ಎಂದು ತಿಳಿದುಬಂದಿದೆ.
ಹೌದು, ದೇಶಾದ್ಯಂತ ಐಟಿ ಕಂಪನಿಗಳು ಡಿಸೆಂಬರ್ ವೇಳೆಗೆ 50 ಸಾವಿರ ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳಲಿವೆ ಎಂದು ಎಜುಕೇಷನ್ ಟೆಕ್ನಾಲಜಿ (EdTech) ಪ್ಲಾಟ್‌ಫಾರ್ಮ್ ಆಗಿರುವ ಟೀಮ್ ಲೀಸ್ (Team Lease) ಸಮೀಕ್ಷೆಯಿಂದ ತಿಳಿದುಬಂದಿದೆ. ಇದರಿಂದಾಗಿ, ಈಗಷ್ಟೇ ಪದವಿ ಮುಗಿಸಿದ 50 ಸಾವಿರ ಯುವಕ-ಯುವತಿಯರಿಗೆ ಐಟಿ ಕಂಪನಿಗಳಲ್ಲಿ ಉದ್ಯೋಗ ದೊರೆಯಲಿದೆ. ಐಟಿ ಹಾಗೂ ನಾನ್ ಐಟಿ ಕಂಪನಿಗಳಲ್ಲಿ ಫ್ರೆಶರ್‌ಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಕೃತಕ ಬುದ್ಧಿಮತ್ತೆ ವರದಾನ
ಒಂದೆಡೆ, ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನವು ಜಗತ್ತಿನಾದ್ಯಂತ ಜನರ ಉದ್ಯೋಗ ಕಸಿಯಲಿದೆ ಎಂಬ ಆತಂಕ, ವರದಿ, ತಜ್ಞರ ಎಚ್ಚರಿಕೆ ಬೆನ್ನಲ್ಲೇ ಯುವಕರು ಉದ್ಯೋಗ ಗಿಟ್ಟಿಸಿಕೊಳ್ಳಲು ಕೃತಕ ಬುದ್ಧಿಮತ್ತೆ ನೆರವಾಗುತ್ತಿದೆ. ಭಾರತದಲ್ಲಿ ಕ್ಲೌಡ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ ಸೇರಿ ಹಲವು ನೂತನ ತಂತ್ರಜ್ಞಾನಗಳ ಅಳವಡಿಕೆಗೆ ಐಟಿ ಕ್ಷೇತ್ರವು ತೆರೆದುಕೊಂಡಿದೆ. ಹಾಗಾಗಿ, 50 ಸಾವಿರಕ್ಕೂ ಅಧಿಕ ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ತೀರ್ಮಾನಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: JOB News : ಉದ್ಯೋಗ ಆಕಾಂಕ್ಷಿಗಳಿಗೆ GOOD NEWS, ಸದ್ಯವೇ ನಡೆಯಲಿದೆ 20000 ಪೊಲೀಸ್ ಹುದ್ದೆಗಳಿಗೆ ನೇಮಕಾತಿ
ಡಿಸೆಂಬರ್ ಅಂತ್ಯದ ವೇಳೆಗೆ ಸ್ಟಾರ್ಟಪ್ ಕಂಪನಿಗಳು ಸೇರಿ ಎಲ್ಲ ಕಂಪನಿಗಳು ಶೇ.73ರಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದು, ಇವರಲ್ಲಿ ಶೇ.65ರಷ್ಟು ಫ್ರೆಶರ್‌ಗಳಿಗೆ ಆದ್ಯತೆ ನೀಡುತ್ತಿವೆ. ಅದರಲ್ಲೂ, ಕೊರೊನಾ ಬಿಕ್ಕಟ್ಟಿನ ವೇಳೆಯಲ್ಲಿ ಹೆಚ್ಚಿನ ಸಂಬಳ ಇರುವ ನೌಕರರನ್ನು ಕೆಲಸದಿಂದ ವಜಾಗೊಳಿಸಿದ್ದು ಹಾಗೂ ಆರ್ಥಿಕ ಹಿಂಜರಿತದ ಭೀತಿಯಿಂದ ನೌಕರರನ್ನು ವಜಾಗೊಳಿಸಲಾಗಿದೆ. ಇದರಿಂದಾಗಿ ಹೆಚ್ಚಿನ ನೌಕರರ ಅವಶ್ಯಕತೆ ಇದೆ ಎಂದು ಹೇಳಲಾಗುತ್ತಿದೆ.