Site icon Vistara News

IT sector crisis : ಟಿಸಿಎಸ್‌, ಇನ್ಫಿ, ವಿಪ್ರೊದಲ್ಲಿ ಭಾರಿ ಬೆಂಚ್‌ ಬಿಕ್ಕಟ್ಟು ಕಾಡುತ್ತಿದೆಯೇ? ಮುಂದೇನು?

IT sector crisis Is there a huge bench crisis in TCS Infi Wipro

ಬೆಂಗಳೂರು: ಭಾರತದ ಐಟಿ ಉದ್ದಿಮೆಯಲ್ಲಿ ದಿಗ್ಗಜ ಕಂಪನಿಗಳಾದ ಟಿಸಿಎಸ್‌, ಇನ್ಫೋಸಿಸ್‌, ವಿಪ್ರೊ ಮತ್ತು ಇತರ ಕಂಪನಿಗಳಲ್ಲಿ ಭಾರಿ ಬೆಂಚ್‌ ಬಿಕ್ಕಟ್ಟು (IT sector crisis) ಉಂಟಾಗಿದೆ ಎಂದು ವರದಿಯಾಗಿದೆ. ಅಂದರೆ ಉದ್ಯೋಗಿಗಳಾಗಿ ಕಂಪನಿಯಲ್ಲಿ ಉಳಿದುಕೊಂಡಿದ್ದರೂ, ಅವರಿಗೆ ಮಾಡಲು ಕೆಲಸ ಇಲ್ಲದ ಪರಿಸ್ಥಿತಿ. ಟಿಸಿಎಸ್‌, ಇನ್ಫೋಸಿಸ್‌, ವಿಪ್ರೊ ಮತ್ತು ಇತರ ಐಟಿ ಕಂಪನಿಗಳಲ್ಲಿ ಈ ಬೆಂಚ್‌ ಬಿಕ್ಕಟ್ಟು ತೀವ್ರವಾಗಿದೆ ಎಂಬ ವರದಿಗಳು ಸಂಚಲನ ಸೃಷ್ಟಿಸಿವೆ.

ಭಾರತೀಯ ಐಟಿ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್‌ (Infosys) ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (Tata Consultancy Services) ಜಾಗತಿಕ ಆರ್ಥಿಕ ಮಂದಗತಿಯ ನಡುವೆ ಅನೇಕ ಸವಾಲುಗಳನ್ನು ಎದುರಿಸಿವೆ. ಆದರೆ ಉದ್ಯೋಗಿಗಳನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಇರುತ್ತಿರುವುದು ಸಂಕೀರ್ಣ ಸಮಸ್ಯೆಯಾಗಿ ಪರಿಣಮಿಸಿದೆ. ಮಾರುಕಟ್ಟೆಯಲ್ಲಿನ ಬೇಡಿಕೆ ಕುಸಿತದ ಪರಿಣಾಮ ಈ ಕಂಪನಿಗಳಲ್ಲಿ 20% ಉದ್ಯೋಗಿಗಳಿಗೆ ಕೆಲಸ ಇಲ್ಲವಾಗಿದೆ. ಐಟಿ ಕಂಪನಿಗಳಲ್ಲಿ ಅಂಥ ಉದ್ಯೋಗಿಗಳನ್ನು ಬೆಂಚ್‌ನಲ್ಲಿರುವವರು ಎನ್ನುತ್ತಾರೆ. ಈ ಬೆಂಚ್‌ ಸೈಜ್‌ ಹೆಚ್ಚಿದಷ್ಟೂ ಕಂಪನಿಗೆ ಹೊರೆಯಾಗುತ್ತದೆ. ಇತ್ತೀಚಿನ ತ್ರೈಮಾಸಿಕ ಫಲಿತಾಂಶಗಳಲ್ಲಿ ಪ್ರಮುಖ ಐಟಿ ಕಂಪನಿಗಳ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇದ್ದಿರಲಿಲ್ಲ.

ಇನ್ಫೋಸಿಸ್‌ನ ಸಿಎಫ್‌ಒ ನೀಲಾಂಜನ್‌ ರಾಯ್‌ ಪ್ರಕಾರ, ಬೇಡಿಕೆಯ ಕೊರತೆಯಿಂದಾಗಿ ಕಂಪನಿಯಲ್ಲಿ ಬೆಂಚ್‌ ಸೈಜ್‌ 20%ಕ್ಕೆ ಏರಿಕೆಯಾಗಿದೆ. ಅಂದರೆ ಕಂಪನಿಯಲ್ಲಿ ಒಟ್ಟು ಉದ್ಯೋಗಿಗಳಲ್ಲಿ 20% ಮಂದಿಗೆ ಕೆಲಸವಿಲ್ಲ. ಟಿಸಿಎಸ್‌ನಲ್ಲೂ ಇದೇ ಟ್ರೆಂಡ್‌ ಇದೆ. ಮುಂಬರುವ ತ್ರೈಮಾಸಿಕಗಳಲ್ಲಿ ಪರಿಸ್ಥಿತಿ ಕ್ರಮೇಣ ಸುಧಾರಿಸುವ ವಿಶ್ವಾಸ ಇದೆ ಎನ್ನುತ್ತಾರೆ ಇನ್ಫೋಸಿಸ್‌ ಸಿಎಫ್‌ಒ ನೀಲಾಂಜನ್‌ ರಾಯ್.‌

ಹಾಗಾದರೆ ಐಟಿ ಕಂಪನಿಗಳಲ್ಲಿ ಬೆಂಚ್‌ (bench) ಎಂದರೇನು?

ಐಟಿ ಕಂಪನಿಗಳಲ್ಲಿ (Bench) ಬೆಂಚ್‌ನಲ್ಲಿ ಇರುವವರು ಎಂದರೆ, ಕಂಪನಿಯ ಪೇರೋಲ್‌ನಲ್ಲಿ ಇರುವವರು (payroll) ಆದರೆ ಕಂಪನಿಯ ಸಕ್ರಿಯ ಯೋಜನೆಗಳಲ್ಲಿ ಈಗ ಕೆಲಸ ಮಾಡುತ್ತಿರುವುದಿಲ್ಲ.

ಇನ್ಫೋಸಿಸ್‌ನಲ್ಲಿ 2022-23ರ ನಾಲ್ಕನೇ ತ್ರೈಮಾಸಿಕದಲ್ಲಿ, ಅಂದರೆ 2023ರ ಜನವರಿ-ಮಾರ್ಚ್‌ ಅವಧಿಯಲ್ಲಿ 20% ಉದ್ಯೋಗಿಗಳು ಎಂದರೆ 68,646 ಸಿಬ್ಬಂದಿ ಆಗುತ್ತದೆ. ಅಷ್ಟು ಮಂದಿ ಕಂಪನಿಯ ಯಾವುದೇ ಪ್ರಾಜೆಕ್ಟ್‌ನಲ್ಲಿ ಸದ್ಯ ಕೆಲಸ ಮಾಡುತ್ತಿಲ್ಲ. ಆದರೆ ಕಂಪನಿ ಅವರಿಗೆ ವೇತನ ನೀಡುತ್ತಿದೆ. ಸಾಕಷ್ಟು ಪ್ರಾಜೆಕ್ಟ್‌ ಇಲ್ಲದಿರುವುದು ಹಾಗೂ ಕೌಶಲ ಇಲ್ಲದಿರುವುದು ಕೂಡ ಬೆಂಚ್‌ ಗಾತ್ರ ಹೆಚ್ಚಲು ಕಾರಣವಾಗುತ್ತದೆ.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಐಟಿ ಕಂಪನಿಗಳು ಭರಪೂರ ನೇಮಕಾತಿ ಮಾಡಿದ್ದವು. ಆಗ ಮಾರುಕಟ್ಟೆಯಲ್ಲಿ ಬೇಡಿಕೆಯೂ ಅದೇ ಪ್ರಮಾಣದಲ್ಲಿ ಇತ್ತು. ಆದರೆ ಈಗ ಬೇಡಿಕೆ ಮಂದಗತಿಯಲ್ಲಿದೆ. ಪ್ರಸಕ್ತ ಜಾಗತಿಕ ಬಿಕ್ಕಟ್ಟು ಭಾರತದ ದಿಗ್ಗಜ ಐಟಿ ಕಂಪನಿಗಳನ್ನು ಬಾಧಿಸಿದೆ. ಟಿಸಿಎಸ್‌, ಇನ್ಫೋಸಿಸ್‌, ವಿಪ್ರೊದದಲ್ಲಿ ಬೆಂಚ್‌ ಬಿಕ್ಕಟ್ಟು ಬಿಗಡಾಯಿಸಲು ಇದೇ ಕಾರಣ ಎನ್ನುತ್ತಾರೆ ಸಿಐಇಎಲ್‌ ಕಂಪನಿಯ ಸಿಇಒ ಆದಿತ್ಯ ನಾರಾತಣ್‌ ಮಿಶ್ರಾ.

ಸಿಬ್ಬಂದಿ ಬಲದ ಪೂರ್ಣ ಪ್ರಮಾಣದ ಬಳಕೆಗೆ ಐಟಿ ಕಂಪನಿಗಳು (employee utilisation) ಯತ್ನಿಸುತ್ತವೆ. ಹೀಗಾಗಿ ಬೆಂಚ್‌ನಲ್ಲಿ ಸಾಧ್ಯವಾದಷ್ಟು ಕಡಿಮೆ ಸಿಬ್ಬಂದಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ಒಂದು ವೇಳೆ ಹಲವಾರು ತಿಂಗಳುಗಳ ಕಾಲ ಬೆಂಚ್‌ನಲ್ಲಿರುವವರ ಸಂಖ್ಯೆ ಹೆಚ್ಚಿದರೆ, ಸಾಮೂಹಿಕ ಉದ್ಯೋಗ ಕಡಿತಕ್ಕೆ ಕಾರಣವಾಗಲಿದೆ. ಜಾಗತಿಕ ಮಟ್ಟದಲ್ಲಿ ಐಟಿ ಕಂಪನಿಗಳಲ್ಲಿ ಸಾಮೂಹಿಕ ಉದ್ಯೋಗ ಕಡಿತ ಈಗಾಗಲೇ ಸಂಭವಿಸಿದೆ. ಅಕ್ಸೆಂಚರ್‌ 19000 ಉದ್ಯೋಗ ಕಡಿತ ಮಾಡಿದೆ. ಸೇಲ್ಸ್‌ ಫೋರ್ಸ್‌ 8000, ಐಬಿಎಂ 3,900 ಉದ್ಯೋಗ ಕಡಿತ ಮಾಡಿವೆ.

ಮುಂದೇನಾಗಬಹುದು?

ಹಾಗಾದರೆ ಭಾರತದ ಐಟಿ ಕಂಪನಿಗಳಲ್ಲಿಯೂ ಮುಂಬರುವ ತಿಂಗಳುಗಳಲ್ಲಿ ಸಾಮೂಹಿಕ ಉದ್ಯೋಗ ಕಡಿತ ಸಂಭವಿಸಲಿದೆಯೇ? ಜಾಗತಿಕ ಮಟ್ಟದಲ್ಲಿ ಕೋವಿಡ್‌ ಸಂದರ್ಭ ಭಾರಿ ಸಂಖ್ಯೆಯಲ್ಲಿ ಉದ್ಯೋಗ ನೇಮಕಾತಿ ನಡೆದಿತ್ತು. ಅದೇ ರೀತಿ ಈಗ ಉದ್ಯೋಗ ಕಡಿತ ಆಗಿದೆ. ಆದರೆ ಭಾರತದಲ್ಲಿ ಐಟಿ ಕಂಪನಿಗಳು ಜಾಗತಿಕ ಮಟ್ಟದ ರೀತಿಯಲ್ಲಿ ನೇಮಕ ಮಾಡಿರಲಿಲ್ಲ. ಹೀಗಾಗಿ ಉದ್ಯೋಗ ಕಡಿತ ಸೀಮಿತವಾಗಿರಬಹುದು ಎನ್ನುತ್ತಾರೆ ತಜ್ಞರು.

Exit mobile version