Site icon Vistara News

Job Alert: ಡಿಪ್ಲೋಮಾ ಪದವೀಧರರಿಗೆ ಗುಡ್‌ನ್ಯೂಸ್‌; ರೈಲ್ವೇ ನೇಮಕಾತಿ ಮಂಡಳಿಯಿಂದ 9,000 ಹುದ್ದೆ ಭರ್ತಿ

railway job

railway job

ಬೆಂಗಳೂರು: ದೇಶದಲ್ಲಿ ಅತೀ ಹೆಚ್ಚು ಉದ್ಯೋಗ ಒದಗಿಸುವ ಸಂಸ್ಥೆಗಳಲ್ಲಿ ಭಾರತೀಯ ರೈಲ್ವೇಯೂ ಒಂದು. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ರೈಲ್ವೇ ಇಲಾಖೆಯಲ್ಲಿ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಕನಸು. ಸದ್ಯ ಈ ಕನಸು ನನಸಾಗುವ ಹಂತದಲ್ಲಿದೆ. ರೈಲ್ವೇ ನೇಮಕಾತಿ ಮಂಡಳಿ (Railway Recruitment Board) ದೇಶಾದ್ಯಂತ ಇರುವ ಬರೋಬ್ಬರಿ 9,000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ (RRB Recruitment 2024). ಟೆಕ್ನಿಷಿಯನ್‌ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್‌ 9ರಂದು ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಕೊನೆಯ ದಿನ ಏಪ್ರಿಲ್‌ 8 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಟೆಕ್ನಿಷಿಯನ್‌ ಗ್ರೇಡ್‌-I ಸಿಗ್ನಲ್‌ (Technician Grade I signal)-1,100 ಹುದ್ದೆ ಮತ್ತು ಟೆಕ್ನಿಷಿಯನ್‌ ಗ್ರೇಡ್‌- III ಸಿಗ್ನಲ್‌ (Technician Grade III signal)-7,900 ಹುದ್ದೆಗಳಿವೆ. ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಡಿಪ್ಲೋಮಾ ತೇರ್ಗಡೆಯಾಗಿರಬೇಕು ಅಥವಾ ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಕೆಗೆ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 33 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಮಾಜಿ ಯೋಧರು ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಎಸ್‌ಸಿ / ಎಸ್‌ಟಿ, ಮಾಜಿ ಯೋಧರು, ಪಿಡಬ್ಲ್ಯುಬಿಡಿ, ಮಹಿಳೆಯರು, ತೃತೀಯ ಲಿಂಗಿಗಳು, ಆರ್ಥಿಕವಾಗಿ ದುರ್ಬಲರಾಗಿರುವವರು 250 ರೂ. ಮತ್ತು ಉಳಿದ ವರ್ಗದ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕವಾಗಿ ಪಾವತಿಸಬೇಕು.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ವಿವಿಧ ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೊದಲಿಗೆ ಕಂಪ್ಯೂಟರ್‌ ಆಧಾರಿತ ಪರೀಕ್ಷೆ (Computer based test-CBT) ಸ್ಟೇಜ್‌ -I, II ನಡೆಯಲಿದೆ. ಬಳಿಕ ಡಾಕ್ಯುಮೆಂಟ್‌ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಆಯೋಜಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಸಿಬಿಟಿ I ಆನ್‌ಲೈನ್‌ ಪರೀಕ್ಷೆಯಾಗಿದ್ದು ಇದರಲ್ಲಿ ಸಾಮಾನ್ಯ ಜ್ಞಾನ, ಗಣಿತ, ರೀಸನಿಂಗ್‌, ಮೂಲ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಸಿಬಿಟಿ IIರಲ್ಲಿ ಸಾಮಾನ್ಯ ಜ್ಞಾನ, ಗಣಿತ, ರೀಸನಿಂಗ್‌, ಮೂಲ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಜತೆಗೆ ನಿಮ್ಮ ಟೆಕ್ನಿಕಲ್‌ ಜ್ಞಾನವನ್ನೂ ಪರೀಕ್ಷಿಸಲಾಗುತ್ತದೆ. ಈ ಎರಡೂ ಹಂತಗಳನ್ನು ದಾಟಿದವರ ಪ್ರಮಾಣ ಪತ್ರವನ್ನು ವಿವರವಾಗಿ ಪರಿಶೀಲಿಸಲಾಗುತ್ತದೆ. ಮುಂದಿನ ಹಂತದಲ್ಲಿ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದವರಿಗೆ ಟೆಕ್ನೀಷಿಯನ್‌ ಗ್ರೇಡ್‌ 1 ಸಿಗ್ನಲ್‌-29,200 ರೂ. ಮತ್ತು ಟೆಕ್ನೀಷಿಯನ್‌ ಗ್ರೇಡ್‌ 3 ಸಿಗ್ನಲ್‌-19,900 ರೂ. ಮಾಸಿಕ ವೇತನ ದೊರೆಯಲಿದೆ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಅಂಚೆ ಇಲಾಖೆಯಲ್ಲಿದೆ ಬರೋಬ್ಬರಿ 98,083 ಹುದ್ದೆ; 10ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಿ

Exit mobile version