ಬೆಂಗಳೂರು: ನೀವು ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್ ನ್ಯೂಸ್. ಕರ್ನಾಟಕ ಲೋಕಸೇವಾ ಆಯೋಗ (KPSC)ವು ಹೈದರಾಬಾದ್-ಕರ್ನಾಟಕ ವೃಂದದಲ್ಲಿನ ಖಾಲಿ ಇರುವ ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 50 ಹುದ್ದೆಗಳಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಏಪ್ರಿಲ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಕೊನೆಯ ದಿನ ಮೇ 14 (Job Alert).
ಹುದ್ದೆಗಳ ವಿವರ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು / ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು-19, ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಕಾರ್ಖಾನೆಗಳ ಸಹಾಯಕ ನಿರ್ದೇಶಕರು-2, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಎಂಜಿನಿಯರ್ (ಸಿವಿಲ್)-8, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಭೂ ದಾಖಲೆ ಸಹಾಯಕ ನಿರ್ದೇಶಕರು-3, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರು-3 ಮತ್ತು ಅಂತರ್ಜಲ ನಿರ್ದೇಶನಾಲಯದ ಭೂ ವಿಜ್ಞಾನಿ-15 ಹುದ್ದೆಗಳು ಸೇರಿ ಒಟ್ಟು 50 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ವಯೋಮಿತಿ
ಅರ್ಜಿ ಸಲ್ಲಿಕೆಗೆ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ) ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಲಭ್ಯ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಸಾಮಾನ್ಯ ವಿಭಾಗಕ್ಕೆ ಸೇರಿದ ಅಭ್ಯರ್ಥಿಗಳು 300 ರೂ., ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ)ಗೆ ಸೇರಿದ ಅಭ್ಯರ್ಥಿಗಳು 150 ರೂ. ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 50 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಅರ್ಜಿ ಶುಲ್ಕ ಸಲ್ಲಿಸುವವರು ಆನ್‌ಲೈನ್ ವಿಧಾನವನ್ನು ಬಳಸುವುದು ಕಡ್ಡಾಯ.
ಆಯ್ಕೆ ವಿಧಾನ
ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ದಾಖಲಾತಿಗಳ ಪರಿಶೀಲನೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಜತೆಗೆ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯ. ಸ್ಪರ್ಧಾತ್ಮಕ ಪರೀಕ್ಷೆ ತಲಾ 300 ಅಂಕಗಳ ಎರಡು ಪತ್ರಿಕೆಯನ್ನು (ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆ) ಒಳಗೊಂಡಿದೆ. ಪ್ರಶ್ನೆಗಳು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಇರಲಿದೆ. ತಪ್ಪಾದ ಅಂಕಕ್ಕೆ ನೆಗೆಟಿವ್ ಅಂಕ ಇರುವುದರಿಂದ ಎಚ್ಚರಿಕೆಯಿಂದ ಉತ್ತರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Job Alert: ಪದವೀಧರರಿಗೆ ಗುಡ್‌ನ್ಯೂಸ್; 93 ಬ್ಯಾಂಕ್ ಸಹಾಯಕ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ