ಬೆಂಗಳೂರು: ರಾಜ್ಯ ಸರ್ಕಾರ ವಿಲೇಜ್ ಅಕೌಂಟೆಂಟ್ (Village Accountant) ಹುದ್ದೆಯನ್ನು ಗ್ರಾಮ ಆಡಳಿತಾಧಿಕಾರಿ (Village Administrative Officer) ಎಂದು ಮರು ನಾಮಕರಣ ಮಾಡಿದೆ. ಇದೀಗ ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಭರ್ತಿಗೆ ಮಹತ್ವದ ತೀರ್ಮಾನ ಕೈಗೊಂಡಿದೆ. ಶೀಘ್ರ ಬರೋಬ್ಬರಿ 750 ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಸರ್ಕಾರ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ (Job Alert).
ಆಯ್ಕೆ ಹೇಗೆ?
ಹಿಂದೆ ವಿಲೇಜ್ ಅಕೌಂಟೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪಿಯುಸಿ ಅಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತಿತ್ತು. ಇದೀಗ ಈ ವಿಧಾನವನ್ನು ಬದಲಾಯಿಸಲು ಸರ್ಕಾರ ಮುಂದಾಗಿದೆ. ರಾಜ್ಯ ಮಟ್ಟದಲ್ಲಿ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಮೆರಿಟ್ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಪ್ರಸ್ತುತ 9 ಸಾವಿರ ಗ್ರಾಮ ಆಡಳಿತಾಧಿಕಾರಿಗಳಿದ್ದು, ಇನ್ನೂ ಒಂದೂವರೆ ಸಾವಿರದಷ್ಟು ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ಇದೆ. ಮೊದಲ ಹಂತದಲ್ಲಿ ಸುಮಾರು 750 ಹುದ್ದೆಗಳ ಭರ್ತಿಗೆ ಕಂದಾಯ ಇಲಾಖೆ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಮಕಾತಿ ಅಧಿಸೂಚನೆ ಶೀಘ್ರದಲ್ಲಿಯೇ ಹೊರ ಬೀಳುವ ಸಾಧ್ಯತೆ ಇದೆ.
ಪರೀಕ್ಷೆ ಹೇಗೆ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪೈಕಿ ಯಾವುದಾದರೂ ಒಂದು ಸಂಸ್ಥೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ನಂತರ ಜಿಲ್ಲಾ ಮಟ್ಟದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ರ‍್ಯಾಂಕ್ ಆಧಾರದಲ್ಲಿ ಆಯ್ಕೆ
ಪರೀಕ್ಷೆ ಬಳಿಕ ಅಭ್ಯರ್ಥಿಗಳ ರ‍್ಯಾಂಕ್ ಪಟ್ಟಿ ಬಿಡುಗಡೆಯಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಅಗ್ರಸ್ಥಾನ ಪಡೆದವರಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗುತ್ತದೆ. ಮೀಸಲಾತಿಗೆ ಅನುಗುಣವಾಗಿ ಹುದ್ದೆಗಳ ಭರ್ತಿ ನಡೆಯಲಿದೆ. 18-35 ವರ್ಷ ವಯೋಮಾನದ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅನುಕೂಲಗಳೇನು?
ಪಿಯುಸಿ ಅಂಕಗಳ ಬದಲು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡಿದರೆ, ಪರೀಕ್ಷೆಗೆ ಓದುವ ಮೂಲಕ ಮೊದಲೇ ಈ ಹುದ್ದೆಯ ಕುರಿತು ಮೊದಲೇ ಜ್ಞಾನ ಮೂಡಲಿದೆ. ಪರೀಕ್ಷೆಗಾಗಿ ಸಾಕಷ್ಟು ಓದುವುದರಿಂದ ಪಂಚಾಯತ್ ರಾಜ್ ವ್ಯವಸ್ಥೆ, ಗ್ರಾಮ ಪಂಚಾಯತ್ ಕಾರ್ಯಗಳು, ನಿರ್ವಹಣೆ, ಯೋಜನೆಗಳು, ಅನುಷ್ಠಾನದ ಕುರಿತು ಹೆಚ್ಚು ಜ್ಞಾನ ಪಡೆದಂತಾಗುತ್ತದೆ. ಮುಂದೆ ಹುದ್ದೆಗೆ ಆಯ್ಕೆಯಾಗುವವರು ಸುಲಲಿತವಾಗಿ ಕಾರ್ಯ ನಿರ್ವಹಿಸಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.
ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ನೀಡಿದ್ದ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು ಖಾಲಿ ಇರುವ ಪಿಡಿಒ ಹುದ್ದೆಗಳ ಸಂಖ್ಯೆ 660. ಜತೆಗೆ ಕಾರ್ಯದರ್ಶಿ 350 ಮತ್ತು ಕಾರ್ಯದರ್ಶಿ ಗ್ರೇಡ್-2 415 ಹುದ್ದೆಗಳಿವೆ. ಪಿಡಿಒ 150, ಕಾರ್ಯದರ್ಶಿ ಗ್ರೇಡ್-1 135, ಕಾರ್ಯದರ್ಶಿ ಗ್ರೇಡ್-2, ದ್ವಿತೀಯ ದರ್ಜೆ ಲೆಕ್ಕ ಸಹಾಯಕ 105 ಹುದ್ದೆಗಳು ಖಾಲಿ ಇದ್ದು, ಶೀಘ್ರ ಭರ್ತಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಶೀಘ್ರ ಅರಣ್ಯ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿಗೆ ಕ್ರಮ
ರಾಜ್ಯದ ಅರಣ್ಯ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ACF), ವಲಯ ಅರಣ್ಯಾಧಿಕಾರಿ (RFO) ಮತ್ತು ಉಪ ವಲಯ ಅರಣ್ಯ ಅಧಿಕಾರಿ (DRFO) ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಸದಸ್ಯ ಗೋಪಾಲಕೃಷ್ಣ ಬೇಳೂರು ಅವರ ಪ್ರಶ್ನೆಗೆ ಲಿಖಿತವಾಗಿ ಉತ್ತರ ಲಭಿಸಿದ್ದು, ಬಾಕಿ ಉಳಿದಿರುವ ಹುದ್ದೆಗಳನ್ನು ಅರಣ್ಯ ಇಲಾಖೆ ಹೊರತಾಗಿ ವಿವಿಧ ಇಲಾಖೆ / ಸಂಸ್ಥೆಗಳ ಮೂಲಕ ಭರ್ತಿ ಮಾಡಬೇಕಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Job Alert: ಅಪ್ರೆಂಟಿಸ್ ಟ್ರೈನಿಂಗ್; ಬೆಸ್ಕಾಂನಲ್ಲಿ 400 ಮಂದಿಗೆ ಅವಕಾಶ; ಇಂದೇ ಅರ್ಜಿ ಸಲ್ಲಿಸಿ