ಬೆಂಗಳೂರು: ಉದ್ಯೋಗ ಹುಡುಕುತ್ತಿರುವವರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಕರ್ನಾಟಕ ಲೋಕಸೇವಾ ಆಯೋಗ (KPSC) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವೃಂದದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ (Panchayat Development Officer Recruitment 2024). ಉಳಿಕೆ ಮೂಲ ವೃಂದ ಹಾಗೂ ಹೈದರಾಬಾದ್ ಕರ್ನಾಟಕ ವೃಂದದಲ್ಲಿ ಒಟ್ಟು 247 ಹುದ್ದೆಗಳಿವೆ. ಹೀಗಾಗಿ ಎರಡು ವೃಂದಗಳಿಗೆ ಪ್ರತ್ಯೇಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತರು ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಏಪ್ರಿಲ್ 15ರಂದು ಆರಂಭವಾಗಲಿದ್ದು, ಕೊನೆಯ ದಿನ ಮೇ 15 (Job Alert).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಉಳಿಕೆ ಮೂಲ ವೃಂದದಲ್ಲಿ 150 ಮತ್ತು ಹೈದರಾಬಾದ್ ಕರ್ನಾಟಕ ವೃಂದದಲ್ಲಿ 97 ಹುದ್ದೆಗಳಿವೆ. ಅಭ್ಯರ್ಥಿಗಳು ಭಾರತದ ಕಾನೂನಿನ್ವಯ ಸ್ಥಾಪಿತವಾದ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ವಯೋಮಿತಿ ಮತ್ತು ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ. ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ಇದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂ., ಇತರ ಹಿಂದುಳಿದ ಎಲ್ಲ ವರ್ಗದ ಅಭ್ಯರ್ಥಿಗಳು 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳು 50 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇನ್ನು ಅರ್ಜಿ ಶುಲ್ಕ ಸಲ್ಲಿಸುವವರು ಆನ್‌ಲೈನ್ ಮೂಲಕ ಪಾವತಿಸಬೇಕು. ಇದಕ್ಕಾಗಿ ನೆಟ್ ಬ್ಯಾಂಕಿಂಗ್, ಡೆಬಿಡ್, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ವಿಧಾನವನ್ನು ಬಳಬಹುದು.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 37,900 ರೂ. – 70,850 ರೂ. ಮಾಸಿಕ ವೇತನವಿದೆ.
ಸ್ಪರ್ಧಾತ್ಮಕ ಪರೀಕ್ಷೆಯ ವಿಧಾನ
ಎರಡು ಪತ್ರಿಕೆಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪತ್ರಿಕೆ-1ರಲ್ಲಿ ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಕುರಿತ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ. ಪತ್ರಿಕೆ-2ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯಕ್ಕೆ ಸಂಬಂಧಿಸಿದ 100 ಪ್ರಶ್ನೆಗಳು ಇರುತ್ತವೆ. ಇದು ಕೂಡ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳಾಗಿರುತ್ತವೆ. ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕಗಳಿದ್ದು ಗಮನಿಸಿ ಉತ್ತರಿಸುವುದು ಮುಖ್ಯ. ಪ್ರಶ್ನೆ ಪತ್ರಿಕೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿರುತ್ತದೆ. ಪರೀಕ್ಷೆಗಳನ್ನು ಆಯೋಗ ನಿಗದಿಪಡಿಸಿದ ಯಾವುದೇ ಕೇಂದ್ರದಲ್ಲಿ ನಡೆಸಲಾಗುವುದು.
ಪಿಡಿಒ ಉಳಿಕೆ ಮೂಲವೃಂದದ ನೇಮಕಾತಿಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಪಿಡಿಒ ಉಳಿಕೆ ಹೈದರಾಬಾದ್ ಕರ್ನಾಟಕ ನೇಮಕಾತಿಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ವಿವರಗಳಿಗೆ: 080-30574957 / 30574901 ನಂಬರ್ ಸಂಪರ್ಕಿಸಿ.
ಇದನ್ನೂ ಓದಿ: Job Alert: ಪದವೀಧರರಿಗೆ ಗುಡ್‌ನ್ಯೂಸ್; ಕೆಪಿಎಸ್‌ಸಿಯಿಂದ 50 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ