Site icon Vistara News

ವಿಸ್ತಾರ Job Tips | 10 ಲಕ್ಷ ಸರ್ಕಾರಿ ಹುದ್ದೆಗಳಿಗೆ ನೇಮಕ; ಅರ್ಜಿ ಸಲ್ಲಿಸಲು ನೀವು ಸಿದ್ಧರಿದ್ದೀರಾ?

Job news

karnataka government jobs

ರಾಮಸ್ವಾಮಿ ಹುಲಕೋಡು, ಬೆಂಗಳೂರು
ಕೇಂದ್ರ ಸರ್ಕಾರದ ಉದ್ಯೋಗಿಯಾಗಬೇಕೆಂಬ ಕನಸು ಹೊತ್ತವರಿಗೆ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಮುಂದಿನ ೧೮ ತಿಂಗಳು ಬಹಳ ಮುಖ್ಯ. ಏಕೆಂದರೆ ಈ ಅವಧಿಯಲ್ಲಿ ಖಾಲಿ ಇರುವ ೧೦ ಲಕ್ಷ ಹುದ್ದೆಗಳಿಗೆ ಸಮರೋಪಾದಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಇತ್ತೀಚೆಗೆ ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ನೇಮಕ ನಡೆಯಲಿದೆ. ಇಷ್ಟೊಂದು ಮಂದಿಗೆ ಕೇಂದ್ರ ಸರ್ಕಾರದ ಉದ್ಯೋಗ ಪಡೆಯಲು ಒಮ್ಮೆಲೆ ಅವಕಾಶ ದೊರೆಯುತ್ತಿರುವುದು ದೇಶದ ಇತಿಹಾಸದಲ್ಲಿಯೇ ಇದು ಮೊದಲು. ಈ ಅವಕಾಶವನ್ನು ಅರ್ಹರೆಲ್ಲರೂ ಬಳಸಿಕೊಳ್ಳಬಹುದಾಗಿದೆ.

ʼʼಸರ್ಕಾರಿ ಹುದ್ದೆಗಳಿಗೆ ಸರಿಯಾಗಿ ನೇಮಕವೇ ನಡೆಯುತ್ತಿಲ್ಲ. ನೇಮಕ ಮಾಡಿಕೊಂಡಿದ್ದರೆ ನನ್ನ ಜೀವನ ಸೆಟಲ್‌ ಆಗುತ್ತಿತ್ತು… ʼʼ ಎಂದು ಇದುವರೆಗೆ ಗೊಣಗುತ್ತಿದ್ದವರೆಲ್ಲಾ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಜೀವನದ ಕನಸು ಈಡೇರಿಸಿಕೊಳ್ಳಬಹುದು.

ಸವಾಲಿನದ ದಾರಿ

ಕೇಂದ್ರ ಸರ್ಕಾರಿ ಹುದ್ದೆಗಳಿಗೆ ನೇಮಕವಾಗಬೇಕೆಂದರೆ ಅದೇನು ಸುಲಭವಲ್ಲ. ನೇಮಕ ಪ್ರಕ್ರಿಯೆಯಲ್ಲಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು, ಸಂದರ್ಶನ, ಕೌಶಲ ಪರೀಕ್ಷೆಗಳನ್ನು ಎದುರಿಸಬೇಕು. ಇದಕ್ಕೆ ಸಾಕಷ್ಟು ಸಿದ್ಧತೆ ನಡೆಸಬೇಕಿರುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಿದ್ಧತೆ ಇಲ್ಲದೆ ಯಾವುದೇ ಉದ್ಯೋಗವನ್ನು ಪಡೆಯುವುದು ಕಷ್ಟಸಾಧ್ಯ.

ಉದ್ಯೋಗದ ಕುರಿತು ಸ್ಪಷ್ಟತೆ ಇರಲಿ

ಈಗ ಕೇಂದ್ರ ಸರ್ಕಾರಿ ನೌಕರಿ ಪಡೆಯುವ ಅವಕಾಶವಂತೂ ಬಂದಿದೆ. ಆದರೆ ನಿಮಗೆ ನಾನು ಯಾವ ಹುದ್ದೆಗೆ ಪ್ರಯತ್ನಿಸಬೇಕು? ಅದಕ್ಕೆ ಯಾವ ಪರೀಕ್ಷೆ ಬರೆಯಬೇಕು? ಇದಕ್ಕೆ ನಾನು ಯಾವ ರೀತಿ ಸಿದ್ಧವಾಗಿರಬೇಕೆಂಬ ಸ್ಪಷ್ಟತೆ ಮೊದಲು ಇರಬೇಕಾಗುತ್ತದೆ.

ನಿಮ್ಮ ವಿದ್ಯಾರ್ಹತೆ, ದೈಹಿಕ ಸಾಮರ್ಥ್ಯ, ವಯಸ್ಸು ಎಲ್ಲವನ್ನೂ ನೋಡಿಕೊಂಡು ನೀವು ಕೇಂದ್ರ ಸರ್ಕಾರದ ಯಾವ ಇಲಾಖೆಯಲ್ಲಿನ ಯಾವೆಲ್ಲಾ ಹುದ್ದೆಗಳಿಗೆ ಪ್ರಯತ್ನಿಸಬಹುದು ಎಂಬ ಮಾಹಿತಿಯನ್ನು ಮೊದಲಿಗೆ ಸಂಗ್ರಹಿಸಿಕೊಳ್ಳಿ. ಈ ಹುದ್ದೆಗೆ ಹೇಗೆ ನೇಮಕ ಮಾಡಿಕೊಳ್ಳಲಾಗುತ್ತದೆ? ನೇಮಕಾತಿ  ಪ್ರಾಧಿಕಾರ ಯಾವುದು (ಯುಪಿಎಸ್‌ಸಿ/ಎಸ್‌ಎಸ್‌ಸಿ/ಆರ್‌ಆರ್‌ಬಿ ಇತ್ಯಾದಿ) ಎಂಬುದನ್ನು ತಿಳಿದುಕೊಳ್ಳಿ. ಅದರ ವೆಬ್‌ಸೈಟಿಗೆ ಭೇಟಿ ನೀಡಿ, ಹಿಂದಿನ ನೋಟಿಫಿಕೇಷನ್‌ (ಅಧಿಸೂಚನೆ) ಇದ್ದರೆ ಡೌನ್‌ಲೋಡ್‌ ಮಾಡಿಕೊಂಡು, ನೇಮಕ ಹೇಗೆ ನಡೆಯುತ್ತದೆ ಎಂಬ ಮಾಹಿತಿ ಸಂಗ್ರಹಿಸಿಕೊಳ್ಳಿ.

ಅನೇಕ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ ಕುರಿತು ಗೊಂದಲವಿರುತ್ತದೆ. ಇದನ್ನು ಮೊದಲೇ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಸರಿಯಾದ ಮಾಹಿತಿ ನಿಮಗೆ ಲಭ್ಯವಾಗದಿದ್ದರೆ ತಜ್ಞರನ್ನು ಸಂಪರ್ಕಿಸಿ, ( ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವವರು, ಕರಿಯರ್‌ ಮಾರ್ಗದರ್ಶಕರು) ಅವರಿಂದ ಸ್ಪಷ್ಟವಾದ ಮಾಹಿತಿ ಪಡೆದುಕೊಳ್ಳಿ. ನೀವು ಈ ರೀತಿ ಸರಿಯಾದ ಮಾಹಿತಿ ಪಡೆದುಕೊಳ್ಳದಿದ್ದರೆ, ನಿಮ್ಮ ಶ್ರಮ ವ್ಯರ್ಥವಾಗಬಹುದು, ಅವಕಾಶವೂ ಕೈ ತಪ್ಪಬಹುದು.

ಯಾವೆಲ್ಲಾ ಹುದ್ದೆಗಳಿಗೆ ನೇಮಕ ನಡೆಯಬಹುದು?
ಭಾರತೀಯ ಸೇನಾಪಡೆ : ಇಲ್ಲಿ ಸೈನಿಕ ಹುದ್ದೆಗಳಿಂದ, ಕಮಾಂಡರ್‌ ಹುದ್ದೆಗಳವರೆಗೆ ಹಲವಾರು ವಿಭಾಗಗಳಲ್ಲಿ ನೇಮಕ ನಡೆಯಲಿದೆ. ಸುಮಾರು ೨.೨೫ ಲಕ್ಷ ಹುದ್ದೆಗಳು ಖಾಲಿ ಇವೆ.
ರಕ್ಷಣಾ ಇಲಾಖೆ : ಅರೆ ಸೇನಾಪಡೆ, ಗುಪ್ತಚರ ಇಲಾಖೆ, ಆಂತರಿಕ ಭದ್ರತೆ ಮತ್ತಿತರ ಜವಾಬ್ದಾರಿಯಿರುವ ಈ ಇಲಾಖೆಯಲ್ಲಿ ಕ್ಲರ್ಕ್‌ ಹುದ್ದೆಗಳಿಂದ ಅಧಿಕಾರಿ ಹುದ್ದೆಗಳವರೆಗೆ ಖಾಲಿ ಇರುವ ೨.೫ ಲಕ್ಷ ಹುದ್ದೆಗಳಿಗೆ ನೇಮಕ ನಡೆಯಲಿದೆ.
ರೈಲ್ವೇ ಸಚಿವಾಲಯ : ಜವಾನ ಹುದ್ದೆಯಿಂದ ಹಿಡಿದು ಎಂಜಿನಿಯರ್‌ ಹುದ್ದೆಯವರೆಗೆ, ಲೊಕೊಪೈಲಟ್‌ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕ ನಡೆಯಲಿದೆ. ಸದ್ಯದ ಮಾಹಿತಿ ಪ್ರಕಾರ ಸುಮಾರು ೨.೬೦ ಲಕ್ಷ ಹುದ್ದೆಗಳು ಖಲಿ ಇವೆ.
ಗೃಹ ಸಚಿವಾಲಯ : ಇಲ್ಲಿ ಕ್ಲರ್ಕ್‌ ಹುದ್ದೆಗಳಿಂದ ಹಿಡಿದು ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳವರೆಗೆ ವಿವಿಧ ಹುದ್ದೆಗಳಿಗೆ ನೇಮಕ ನಡೆಯಲಿದೆ. ಸುಮಾರು ೧.೩೦ ಲಕ್ಷ ಹುದ್ದೆಗಳು ಖಾಲಿ ಇವೆ.
ಅಂಚೆ ಇಲಾಖೆ : ಪೋಸ್ಟ್‌ ಮ್ಯಾನ್‌ ಹುದ್ದೆಯಿಂದ ಹಿಡಿದು ಅಧಿಕಾರಿ ಹುದ್ದೆಗಳವರೆಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಒಟ್ಟು ಒಂದು ಲಕ್ಷ ಹುದ್ದೆಗಳು ಖಾಲಿ ಇವೆ.
ಕಂದಾಯ ಇಲಾಖೆ : ಎಲ್ಲ ವೃಂದದ ಹುದ್ದೆಗಳಿಗೂ ನೇಮಕ ನಡೆಯಲಿದೆ. ಸುಮಾರು ೭೫ ಸಾವಿರ ಹುದ್ದೆಗಳು ಖಾಲಿ ಇವೆ
ರಾಷ್ಟ್ರೀಕೃತ ಬ್ಯಾಂಕ್‌: ಆಫೀಸ್‌ ಅಸಿಸ್ಟೆಂಟ್‌ ಹುದ್ದೆಗಳಿಂದ ಹಿಡಿದು ಮ್ಯಾನೇಜರ್‌ ಹುದ್ದೆಗಳವರೆಗೆ ನೇಮಕ ನಡೆಯಲಿದೆ. ಸದ್ಯ ೪೧ ಸಾವಿರ ಹುದ್ದೆಗಳು ಖಾಲಿ ಇವೆ.

ಹುದ್ದೆ ಆಯ್ಕೆಮಾಡುವಾಗ ಹುಷಾರು!

ಸರ್ಕಾರ ಮುಂದಿನ ೧೮ ತಿಂಗಳಿನಲ್ಲಿ ೧೦ ಲಕ್ಷ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕೆಂದರೆ ಒಂದರ ಹಿಂದೊಂದರಂತೆ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಬೇಕಿರುತ್ತದೆ. ಈ ಸಂದರ್ಭದಲ್ಲಿ ನೀವು ಗೊಂದಲಕ್ಕೆ ಬಿದ್ದು, ನಿಮಗೆ ಇಷ್ಟವಿಲ್ಲದ ಹುದ್ದೆಗೆ ಅರ್ಜಿ ಸಲ್ಲಿಸಬೇಡಿ.

ನಿಮ್ಮ ವಿದ್ಯಾರ್ಹತೆ, ಆಸಕ್ತಿಗಳಿಗೆ ತಕ್ಕದಾದ ಹುದ್ದೆಯನ್ನು ಆಯ್ಕೆಮಾಡಿಕೊಳ್ಳಿ. ಈ ಹುದ್ದೆಗೆ ಎಷ್ಟು ವೇತನ ನೀಡಲಾಗುತ್ತಿದೆ, ಇದು ನಿಮ್ಮ  ನಿರೀಕ್ಷೆಯಷ್ಟಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಹುದ್ದೆಗೆ ನೇಮಕವಾದರೆ ಯಾವೆಲ್ಲಾ ಕೆಲಸ ಮಾಡಬೇಕಾಗುತ್ತದೆ, ಇದಕ್ಕೆ ಅಗತ್ಯವಾಗಿರುವ ಕೌಶಲ ನಿಮಗಿದೆಯೇ ಎಂಬುದನ್ನು ಯೋಚಿಸಿ. ಒಂದು ವೇಳೆ ಕೆಲಸಕ್ಕಾಗಿ ಬೇರೆ ಊರಿಗೆ ಹೋಗಬೇಕಾಗಿ ಬಂದರೆ ನಾನು ಸಿದ್ಧನಿದ್ದೇನೆಯೇ ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ… ಹೀಗೆ ಎಲ್ಲ ರೀತಿಯಿಂದಲೂ ಯೋಚಿಸಿಯೇ ನಿಮಗೆ ಸೂಕ್ತವಾದ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಿ.

ಕೆಲವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಷ್ಟ ಎಂದುಕೊಂಡು ತಾವು ಹೊಂದಿರುವ ವಿದ್ಯಾರ್ಹತೆಗಗಿಂತ ಕಡಿಮೆ ವಿದ್ಯಾರ್ಹತೆ ನಿಗದಿಪಡಿಸಲಾದ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೆ. ಕೊನೆಗೆ ಹುದ್ದೆಯನ್ನೂ ಪಡೆದುಕೊಂಡು, ಕೆಲಸ ಮಾಡುವಾಗ “ಅಯ್ಯೋ… ಅಷ್ಟು ಓದಿರುವ ನಾನು ಈ ಕೆಲಸ ಮಾಡಬೇಕಾಯಿತಲ್ಲಾʼʼ ಎಂದು ಕೊರಗುತ್ತಾರೆ. ಇದಕ್ಕೆ ನೀವು ಅವಕಾಶ ಮಾಡಿಕೊಳ್ಳಬೇಡಿ.

ಇನ್ನು ಕೆಲವರು, “ನನಗೆ ಸರ್ಕಾರಿ ಹುದ್ದೆ ಬೇಕು, ಹುದ್ದೆ ಯಾವುದಾದರೇನುʼʼ ಎಂಬ ಮನಸ್ಥಿತಿಯಿಂದ ಸಿಕ್ಕ ಸಿಕ್ಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಒಂದರ ಹಿಂದೊಂದರಂತೆ ಪರೀಕ್ಷೆ ಬರೆಯುತ್ತಾರೆ. ಸರ್ಕಾರಿ ಹುದ್ದೆಗೆ ಫೋಕಸ್‌ ಆದ ಸಿದ್ಧತೆ ಇಲ್ಲದಿದ್ದರೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅರ್ಹತೆ ಪಡೆಯುವುದು ಕಷ್ಟ. ಹೀಗಾಗಿ ನೀವು ಈ ವಿಷಯದಲ್ಲಿ ಎಚ್ಚರಿಕೆ ವಹಿಸಿ, ಸ್ಪಷ್ಟ ತೀರ್ಮಾನಕ್ಕೆ ಬಂದೇ ಮುಂದುವರಿಯಿರಿ.

ಇದನ್ನೂ ಓದಿ| Agneepath | ನೀವೂ ʼಅಗ್ನಿಪಥ್‌ʼನಲ್ಲಿ ಸಾಗಿ ಸೇನೆ ಸೇರಬೇಕೇ? ನೇಮಕ ಹೇಗೆ ನಡೆಯುತ್ತದೆ ಗೊತ್ತೆ?

ಒಂದು ವೇಳೆ ಮುಂದೆ ನಡೆಯಲಿರುವ ನೇಮಕ ಪ್ರಕ್ರಿಯೆಯ ಸಮಯದಲ್ಲಿ ನಿಮ್ಮ ಕನಸಿನ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸದೇ ಇರಬಹುದು, ನಿಮ್ಮ ಸಾಮರ್ಥ್ಯಕ್ಕೆ ತಕ್ಕದಾದ ಹುದ್ದೆಗಳು ಖಾಲಿ ಇಲ್ಲದೇ ಇರಬಹುದು, ಇದಕ್ಕಾಗಿ ನೀವು ನಿರಾಶರಾಗಬೇಡಿ. ನೀವು ಮಾಡಬಹುದಾದ, ನಿಮ್ಮ ಅರ್ಹತೆಗೆ ತಕ್ಕವಾಗಿರದೇ ಇದ್ದರೂ ನೀವು ಕೆಲಸ ಮಾಡಬಹುದಾದ ಹುದ್ದೆಗೆ ನೇಮಕ ನಡೆಯುತ್ತಿದ್ದರೆ, ಅದಕ್ಕೆ ಅರ್ಜಿ ಸಲ್ಲಿಸಿ. ಮುಂದೆ ಅವಕಾಶ ಸೃಷ್ಟಿಯಾದಾಗ ನಿಮ್ಮ ಕನಸಿನ ಹುದ್ದೆಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಸಿಕ್ಕ ಕೆಲಸವನ್ನು ಹೊಸ ತನದಿಂದ ನೋಡುವ ಮೂಲಕ ಅದನ್ನು ಆಸಕ್ತಿದಾಯಕವಾಗಿಸಿಕೊಳ್ಳಬಹುದು.

ನಿಮ್ಮದೇ ನಿರ್ಧಾರವಾಗಿರಲಿ

ನಿಮಗೆ ಒಳ್ಳೆಯ ಕೆಲಸ ಸಿಕ್ಕಿ, ನಿಮ್ಮ ಜೀವನ ಚೆನ್ನಾಗಿರಬೇಕೆಂಬ ಆಸೆ ನಿಮ್ಮ ಪೋಷಕರಿಂದ ಹಿಡಿದು, ಕಾಲೇಜಿನ ಉಪನ್ಯಾಸಕರ ವರೆಗೆ ಎಲ್ಲರಿಗೂ ಇರುತ್ತದೆ. ಹೀಗಾಗಿ ಉದ್ಯೋಗ ಆಯ್ಕೆಯ ಸಂದರ್ಭದಲ್ಲಿ ಅವರೆಲ್ಲರೂ ನಿಮಗೆ ಸಲಹೆ ನೀಡುತ್ತಲೇ ಇರುತ್ತಾರೆ.

ಇವರೆಲ್ಲರೂ ನಿಮ್ಮ ಆಸಕ್ತಿ, ಸಾಮರ್ಥ್ಯವನ್ನು ಗುರುತಿಸಿಯೇ ಸಲಹೆ ನೀಡುತ್ತಿರುತ್ತಾರೆಂದೇನೂ ಅಲ್ಲ. ಅವರ ಮನಸ್ಸಿನಲ್ಲಿ ʼನಿಮಗೊಂದು ಒಳ್ಳೆಯ ಕೆಲಸ ಸಿಗಲಿʼ ಎಂದಷ್ಟೇ ಇರುತ್ತದೆ. ಹೀಗಾಗಿ ನಿಮ್ಮ ಉದ್ಯೋಗದ ಕುರಿತು ನೀವೇ ಅಂತಿಮ ತೀರ್ಮಾನಕ್ಕೆ ಬರಬೇಕಿರುತ್ತದೆ. ಇದಕ್ಕೆ ಮೊದಲಿಗೆ ನೀವು ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಕೆಲಸ ಮಾಡಿ. ನನ್ನ ಆಸಕ್ತಿ ಏನು, ಕನಸೇನು, ನನ್ನ ಜೀವನ ಹೇಗಿರಬೇಕು ಎಂಬೆಲ್ಲಾ ಪ್ರಶ್ನೆಗಳನ್ನು ನಿಮಗೇ ನೀವೇ ಕೇಳಿಕೊಳ್ಳುತ್ತಾ, ನಿಮ್ಮನ್ನು ನೀವೇ ಅರಿಯಿರಿ. ಆಗ ನಿಮ್ಮಿಷ್ಟದಂತೆಯೇ ಎಲ್ಲವೂ ನಡೆಯುತ್ತದೆ.

ಬೆಸ್ಟ್‌ ಆಫ್‌ ಲಕ್‌!

Exit mobile version