ನವ ದೆಹಲಿ: ನೀವು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (artificial intelligence) ಮತ್ತು ಮೆಶೀನ್ ಲರ್ನಿಂಗ್ (machine learning) ಕಲಿತುಕೊಂಡರೆ ಮುಂದಿನ ಭವಿಷ್ಯದ ದಿನಗಳಲ್ಲಿ ಉದ್ಯೋಗಾವಕಾಶ ಸಿಗುವ ಸಾಧ್ಯತೆಗಳು ಹೆಚ್ಚು ಎಂದು ವರ್ಲ್ಡ್ ಎಕನಾಮಿಕ್ ಫೋರಮ್ (World Economic Forum) ತಿಳಿಸಿದೆ. ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಮುಂದಿನ 5 ವರ್ಷಗಳಲ್ಲಿ ಈ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಲ್ಲಿ 22% ಏರಿಕೆಯಾಗಲಿದೆ ಎಂದು ಫೋರಮ್‌ನ ವರದಿ ತಿಳಿಸಿದೆ.
ವರ್ಲ್ಡ್ ಎಕನಾಮಿಕ್ ಫೋರಮ್‌ನ ಭವಿಷ್ಯದ ಉದ್ಯೋಗಗಳು ಕುರಿತ ವರದಿಯಲ್ಲಿ 61% ಭಾರತೀಯ ಕಂಪನಿಗಳು ತಂತ್ರಜ್ಞಾನವನ್ನು ಹೆಚ್ಚು ಅಳವಡಿಸಿಕೊಳ್ಳಲು ನಿರ್ಧರಿಸಿವೆ. ಡಿಜಿಟಲೀಕರಣದ ಬಳಕೆ ಹೆಚ್ಚಲಿದೆ. ಇದು ಉದ್ಯೋಗಾವಕಾಶಗಳನ್ನೂ ವಿಸ್ತರಿಸಲಿದೆ ಎಂದು ವರದಿ ತಿಳಿಸಿದೆ. ಭಾರತ ಮತ್ತು ಚೀನಾದಲ್ಲಿ ಪ್ರತಿಭಾವಂತರಿಗೆ ಉದ್ಯೋಗಾವಕಾಶಗಳೂ ಹೆಚ್ಚಲಿದೆ. ಸಾಮಾಜಿಕ ವಲಯದ ಉದ್ಯೋಗಗಳೂ ವೃದ್ಧಿಸಲಿದೆ.
ಮುಂದಿನ 2027ರ ವೇಳೆಗೆ 6.9 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ. 8.3 ಕೋಟಿ ಉದ್ಯೋಗಗಳು ನಿರ್ಮೂಲನೆಯಾಗಲಿದೆ ಎಂದು ವರದಿ ತಿಳಿಸಿದೆ. ಸಮೀಕ್ಷೆಯಲ್ಲಿ 45 ದೇಶಗಳ 803 ಕಂಪನಿಗಳನ್ನು ಸಂದರ್ಶಿಸಲಾಗಿತ್ತು.
ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶಗಳು ಮತ್ತು ಸವಾಲುಗಳು ಇವೆ. ಒಂದೆಡೆ ಹೊಸ ಉದ್ಯೋಗ ಸೃಷ್ಟಿಯಾದರೆ ಮತ್ತೊಂದು ಕಡೆ ಹಳೆ ಉದ್ಯೋಗಗಳು ನಶಿಸಲಿವೆ. 2027ರ ವೇಳೆಗೆ ಪ್ರತಿ 10 ಕಾರ್ಮಿಕರಲ್ಲಿ 6 ಮಂದಿಗೆ ಸೂಕ್ತ ತರಬೇತಿಯ ಅವಶ್ಯಕತೆ ಇರುತ್ತದೆ.
ದೇಶದಲ್ಲಿ 40 ಲಕ್ಷ ಸ್ಟಾರ್ಟಪ್‌ಗಳು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ಭಾರತದಲ್ಲಿ ಸ್ಟಾರ್ಟಪ್ ಸಂಸ್ಕೃತಿ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಇದು ಬಿಂಬಿಸಿದೆ. ಭಾರತ ಈಗ ವಿಶ್ವದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಸೌರಮಾನ ಯುಗಾದಿಯ ಸಂದರ್ಭ 70,000 ಯುವಜನತೆಗೆ ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ ಉದ್ಯೋಗ ಲಭಿಸಿದೆ. ಎನ್‌ಡಿಎ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಸರ್ಕಾರಿ ಉದ್ಯೋಗಗಳ ವಿತರಣೆ ಚುರುಕಾಗಿದೆ. ಮಧ್ಯಪ್ರದೇಶದಲ್ಲಿ ಬುಧವಾರ ಒಂದೇ ದಿನ 22 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ ಎಂದು ಪ್ರಧಾನಿ ಮೋದಿಯವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಭಾರತವು 15,000 ಕೋಟಿ ರೂ.ಗೂ ಹೆಚ್ಚು ರಕ್ಷಣಾ ಸಾಧನಗಳನ್ನು ರಫ್ತು ಮಾಡಿದೆ. ಹಲವಾರು ದಶಕಗಳಿಂದ ಭಾರತವು ರಕ್ಷಣಾ ಶಸ್ತ್ರಾಸ್ತ್ರಗಳಿಗೆ ಆಮದನ್ನೇ ಅವಲಂಬಿಸಿತ್ತು. ಆದರೆ ಈಗ ರಫ್ತು ಮಾಡುವ ಮಟ್ಟಕ್ಕೂ ಬೆಳೆದಿದೆ. 300ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳ ಆಮದನ್ನು ಸಂಪೂರ್ಣ ನಿಲ್ಲಿಸಿ, ಸ್ಥಳೀಯವಾಗಿಯೇ ತಯಾರಿಸಲಾಗುತ್ತಿದೆ. ನಾನಾ ವಲಯಗಳಲ್ಲಿ ದ್ರೋನ್ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿದೆ. 2014ರ ತನಕ 74 ಏರ್ ಪೋರ್ಟ್‌ಗಳು ಇದ್ದರೆ, ಈಗ 148 ಏರ್ ಪೋರ್ಟ್‌ಗಳು ಇವೆ ಎಂದು ಪ್ರಧಾನಿ ಮೋದಿ ವಿವರಿಸಿದ್ದಾರೆ.