Site icon Vistara News

Job News: ಗುಡ್‌ನ್ಯೂಸ್‌; ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಶೀಘ್ರ 12,000 ಉದ್ಯೋಗಿಗಳ ನೇಮಕ

Job News

Job News

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್‌ ಎನಿಸಿಕೊಂಡಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank of India) ಬರೋಬ್ಬರಿ 12,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಮಾಹಿತಿ ತಂತ್ರಜ್ಞಾನ (Information Technology) ಮತ್ತು ಇತರ ವಿಭಾಗಗಳಲ್ಲಿ ಈ ನೇಮಕಾತಿ ನಡೆಲಿದೆ ಎಂದು ಅಧ್ಯಕ್ಷ ದಿನೇಶ್‌ ಖರಾ (Dinesh Khara) ಮಾಹಿತಿ ನೀಡಿದ್ದಾರೆ (Job News).

”ಸುಮಾರು 11,000ರಿಂದ 12,000 ಉದ್ಯೋಗಿಗಳ ನೇಮಕಾತಿಯ ಪ್ರಕ್ರಿಯೆ ನಡೆಯುತ್ತಿದೆ. ಈ ನೇಮಕಾತಿ ಬ್ಯಾಂಕ್‌ನ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ. ಜತೆಗೆ ಸೇವೆಯ ಗುಣಮಟ್ಟವನ್ನು ವೃದ್ಧಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆʼʼ ಎಂದು ಅವರು ವಿವರಿಸಿದ್ದಾರೆ. ʼʼನೇಮಕಗೊಂಡವರಿಗೆ ಆರಂಭದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯ ಬಗ್ಗೆ ಸೂಕ್ತ ಮಾಹಿತಿ ನೀಡಿ ಬಳಿಕ ಅವರನ್ನು ಐಟಿ ವಿಭಾಗಕ್ಕೆ ಶಿಫಾರಸ್ಸು ಮಡಲಾಗುವುದುʼʼ ಎಂದು ಅವರು ಹೇಳಿದ್ದಾರೆ. ಈ ಮೂಲಕ ಬ್ಯಾಂಕ್‌ ಉದ್ಯೋಗ ಹೊಂದಬೇಕು ಎನ್ನುವವರ ಕನಸು ನನಸಾಗಲಿದೆ.

ಉದ್ಯೋಗಿಗಳ ಸಂಖ್ಯೆಯಲ್ಲಿ ಕುಸಿತ

ಮಾರ್ಚ್‌ ಅಂತ್ಯಕ್ಕೆ ಎಸ್‌ಬಿಐ ಉದ್ಯೋಗಿಗಳ ಸಂಖ್ಯೆ 2,32,296ಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ವೇಳೆಗೆ 2,35,858 ಉದ್ಯೋಗಿಗಳಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು 2024ರ ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈ ಮಾಸಿಕದಲ್ಲಿ ಎಸ್‌ಬಿಐಯ ನಿವ್ವಳ ಲಾಭ ಶೇ. 24ರಷ್ಟು ಏರಿಕೆ ದಾಖಲಿಸಿ 20,698 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷ ಈ ಅವಧಿಯಲ್ಲಿ ಎಸ್‌ಬಿಐ 16,695 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಬಡ್ಡಿಯ ಆದಾಯ ಶೇ. 19ರಷ್ಟು ವೃದ್ಧಿಸಿ 92,951 ಕೋಟಿ ರೂ.ಯಿಂದ 1.11 ಲಕ್ಷ ಕೋಟಿ ರೂ.ಗೆ ತಲುಪಿದೆ. ದೇಶದಲ್ಲಿ ಉದ್ಯಮ ಆಧಾರಿತ ಚಟುವಟಿಕೆ ಹೆಚ್ಚುತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಎಸ್‌ಬಿಐಯ ಒಟ್ಟು ಆದಾಯವೂ ಏರುಗತಿಯಲ್ಲಿದೆ. 1.06 ಲಕ್ಷ ಕೋಟಿ ರೂ.ಯಿಂದ 1.28 ಲಕ್ಷ ಕೋಟಿ ರೂ.ಗೆ ಜಿಗಿತ ಕಂಡಿದೆ. ಜತೆಗೆ ನಿರ್ವಹಣಾ ವೆಚ್ಚವೂ ಹಿಂದಿನ ವರ್ಷದ 29,732 ಕೋಟಿ ರೂ.ಗಳಿಂದ 30,276 ಕೋಟಿ ರೂ.ಗೆ ಏರಿಕೆ ಕಂಡಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ಇದನ್ನೂ ಓದಿ: Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಿಇಒ ಆಗಿ ಸಂಜೀವ್ ನೌಟಿಯಾಲ್ ನೇಮಕ

ನಿರೀಕ್ಷೆ ಮೀರಿದ ಲಾಭಾಂಶ

ಆರ್ಥಿಕ ತಜ್ಞರು ಈ ತ್ರೈಮಾಸಿಕದಲ್ಲಿ ಎಸ್‌ಬಿಐ 13,400 ಕೋಟಿ ರೂ. ಲಾಭ ದಾಖಲಿಸಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಫಲಿತಾಂಶ ಈ ಎಲ್ಲ ನಿರೀಕ್ಷೆಗಳನ್ನೂ ಮೀರಿದ್ದು, ಬರೋಬ್ಬರಿ 20,698 ಕೋಟಿ ರೂ. ನಿವ್ವಳ ಲಾಭ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಎಸ್‌ಬಿಐ ತನ್ನ ಪ್ರತಿ ಈಕ್ವಿಟಿ ಷೇರಿಗೆ 13.70 ರೂ. ಲಾಭಾಂಶ ಘೋಷಿಸಿದೆ. ತ್ರೈ ಮಾಸಿಕ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಎಸ್‌ಬಿಐ ಷೇರುಗಳಲ್ಲಿ ಜಿಗಿತ ಕಂಡು ಬಂದಿದೆ. ಮೇ 9ರಂದು ಎಸ್‌ಬಿಐ ಷೇರುಗಳು ಸುಮಾರು ಶೇ. 3ರಷ್ಟು ಹೆಚ್ಚಾಗಿ 834.40 ರೂ.ನಲ್ಲಿ ವಹಿವಾಟು ನಡೆಸುವುದು ಕಂಡುಬಂತು. ಎಸ್‌ಬಿಐನ ಒಟ್ಟು ಅನುತ್ಪಾದಕ ಆಸ್ತಿ (ಜಿಎನ್‌ಪಿಎ) ಪ್ರಮಾಣ ಶೇ.2.24ಕ್ಕೆ ಇಳಿಕೆಯಾಗಿದೆ. ಇದು ಕಳೆದ ವರ್ಷ ಶೇ . 2.78ರಷ್ಟು ಇತ್ತು.

Exit mobile version