ಬೆಂಗಳೂರು: ಹೊಸ ಉದ್ಯಮ ಆರಂಭಿಸುವವರಿಗೆ ಅತಿ ದೊಡ್ಡ ತಲೆ ನೋವು ಎಂದರೆ ಕಚೇರಿ ಹೊಂದುವುದು. ಉದ್ಯಮ ಇನ್ನೂ ಗಟ್ಟಿಯಾಗುವ ಮೊದಲೇ ಲಕ್ಷಾಂತರ ರೂ. ವೆಚ್ಚ ಮಾಡಿ ಕಚೇರಿ ಬಾಡಿಗೆಗೆ ಪಡೆಯುವುದು, ಅದಕ್ಕೆ ನಿರ್ವಹಣಾ ಸಿಬ್ಬಂದಿ ನಿಯೋಜನೆ, ಇಂಟೀರಿಯರ್ ವಿನ್ಯಾಸ ಮಾಡಬೇಕಾಗುತ್ತದೆ.
ಉದ್ಯಮದ ಕಡೆಗೆ ಗಮನ ನೀಡುವ ಬದಲಾಗಿ ಕಚೇರಿ ಮೂಲಸೌಕರ್ಯದಲ್ಲೇ ಅಪಾರ ಹಣ ಹಾಗೂ ಪರಿಶ್ರಮ ಕಳೆದುಹೋಗುತ್ತದೆ. ಇದಕ್ಕಾಗಿ ಬೆಂಗಳೂರಿನಲ್ಲೂ ಕೊ ವರ್ಕಿಂಗ್ (Coworking) ಸ್ಪೇಸ್ ಪರಿಕಲ್ಪನೆ ಹೆಚ್ಚಾಗುತ್ತಿದೆ. ಇದೀಗ ರಾಜ್ಯ ಸರ್ಕಾರವೂ ಇದಕ್ಕೆ ಬೆಂಬಲ ನೀಡಲು ಮುಂದಾಗಿದೆ.
ಕೊ ವರ್ಕಿಂಗ್ ಸ್ಪೇಸ್ ಎಂದರೆ, ಒಂದು ಕಟ್ಟಡದಲ್ಲಿ ಕಚೇರಿಯ ಎಲ್ಲ ಸೌಕರ್ಯವನ್ನೂ ಹೊಂದಲಾಗಿರುತ್ತದೆ. ಉದ್ಯಮ ಆರಂಭಿಸುವವರು ತಮ್ಮ ಎಷ್ಟು ಸಿಬ್ಬಂದಿಗೆ ಅವಶ್ಯಕವೊ ಅಷ್ಟು ಜಾಗವನ್ನು ಬಾಡಿಗೆ ಪಡೆದು, ಅದಾಗಲೇ ರೂಪಿಸಿರುವ ಕ್ಯಾಬಿನ್‌ಗಳಲ್ಲಿ ನೇರವಾಗಿ ಕೆಲಸ ಆರಂಭಿಸಬಹುದು.
ಕಚೇರಿ ನಿರ್ವಹಣೆ, ಇಂಟರ್ನೆಟ್, ಕಾಫಿ-ಟೀ ವ್ಯವಸ್ಥೆ, ಊಟೋಪಚಾರ, ಪ್ರಿಂಟರ್, ಮೀಟಿಂಗ್ ರೂಂ, ಕಾನ್ಫರೆನ್ಸ್ ಹಾಲ್,ಪ್ರೊಜೆಕ್ಟರ್, ಹೌಸ್ ಕೀಪಿಂಗ್‌ನಂತಹ ಕೆಲಸಗಳನ್ನು ಕೊ ವರ್ಕಿಂಗ್ ಸ್ಪೇಸ್ ನಿರ್ವಹಣಾ ಸಂಸ್ಥೆಯೇ ನೋಡಿಕೊಳ್ಳುತ್ತದೆ. ಕಚೇರಿ ನಿರ್ವಹಣೆಯ ಯಾವುದೇ ಜಂಜಾಟ ಇಲ್ಲದೆ ನೇರವಾಗಿ ಕೆಲಸ ಆರಂಭಿಸಬಹುದು.
ಇಂತಹದ್ದೇ ಕೊ ವರ್ಕಿಂಗ್ ಸ್ಪೇಸ್ ʼಬಿಹೈವ್ʼ ಅನ್ನು ಎಚ್‌ಎಸ್‌ಆರ್ ಲೇಔಟ್‌ನಲ್ಲ ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಬೊಮ್ಮಾಯಿ, ನಮ್ಮ ಸ್ಥಳೀಯ ಹುಡುಗರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರು ಬಹಳ ದೊಡ್ಡ ಕೊ ವರ್ಕಿಂಗ್ ಸ್ಪೇಸ್ ಪ್ರಾರಂಭಿಸಿದ್ದಾರೆ. ಇವರನ್ನು ಪ್ರೋತ್ಸಾಹಿಸುವುದಕ್ಕೆ ಬಜೆಟ್ ಸಭೆಗಳ ಮಧ್ಯೆಯೂ ನಾನು ಇಲ್ಲಿಗೆ ಬಂದಿದ್ದೇನೆ. ಕೊ ವರ್ಕ್ ಸ್ಪೇಸ್‌ಗಳಿಂದ ಯುವಕರು ಮತ್ತು ಸ್ಟಾರ್ಟ್ ಅಪ್ ಗಳು ಹೆಚ್ಚಿನ ಬಂಡವಾಳ ಇಲ್ಲದೇ ತಮ್ಮ ಕಂಪನಿಯನ್ನು ಪ್ರಾರಂಭಿಸಬಹುದು. ಇದರಿಂದ ಹೆಚ್ಚಿನ ಉದ್ಯೋಗಗಳೂ ಸೃಷ್ಟಿ ಆಗುತ್ತವೆ.
ಇದನ್ನೂ ಓದಿ | Startup Story | ಬೆಂಗಳೂರಿನ ʼಹೂವುʼ | ಅಕ್ಕತಂಗಿಯರ ವಿನೂತನ ಸ್ಟಾರ್ಟಪ್ ಯಶೋಗಾಥೆ!
ಮುಂದಿನ ಬಜೆಟ್‌ನಲ್ಲಿ, ಕೊ ವರ್ಕಿಂಗ್ ಸ್ಪೇಸ್ ಪರಿಕಲ್ಪನೆಯನ್ನು ಬೆಂಬಲಿಸಲು ಬಜೆಟ್ ನಲ್ಲಿ ದೊಡ್ಡ ಮಟ್ಟದ ಯೋಜನೆ ರೂಪಿಸುತ್ತೇವೆ. ಕೊ ವರ್ಕಿಂಗ್ ಸ್ಪೇಸ್‌ಗೆ ಬಿಹೈವ್ ಅನ್ನುವ ಹೆಸರು ಅತ್ಯಂತ ಸೂಕ್ತವಾಗಿದೆ. ಬೇರೆ ಬೇರೆ ಹೂಗಳಿಂದ ಸಂಗ್ರಹಿಸಿದ ಮಧುವನ್ನು ಒಂದೇ ಕಡೆ ಜೇನು ಉತ್ಪಾದಿಸುವ ಸ್ಥಳ ಬಿಹೈವ್. ಕಠಿಣ ಪರಿಶ್ರಮದಿಂದ ಜೇನು ತಯಾರಾಗುತ್ತದೆ. ಅದೇ ರೀತಿ ಇಲ್ಲಿ ಸ್ಥಳ ಪಡೆಯುವ ಪ್ರತಿಯೊಬ್ಬರೂ ದುಂಬಿಯಂತೆ ತಮ್ಮ ಜ್ಞಾನವೆಂಬ ಮಧುವನ್ನು ಸಂಗ್ರಹಿಸಿ ಇಲ್ಲಿ ಜೇನನ್ನು ಉತ್ಪಾದಿಸಬೇಕು ಎನ್ನುವುದು ನನ್ನ ಆಸೆ ಎಂದರು.