Site icon Vistara News

KAS: ಕೆಎಎಸ್‌ ನೇಮಕಕ್ಕೆ ದಿನಗಣನೆ ಶುರು; 504 ಹುದ್ದೆಗಳಿಗೆ ಬದಲಾಗಿ 384 ಹುದ್ದೆಗಳಿಗೆ ನೇಮಕ

KAS

KAS

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ (KAS) ಹುದ್ದೆಗಳ ನೇಮಕಕ್ಕಾಗಿ ಕಾದು ಕುಳಿತಿದ್ದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಕರ್ನಾಟಕ ಲೋಕ ಸೇವಾ ಆಯೋಗವು (Karnataka Public Service Commission) ಇನ್ನು ಬೆರಳೆಣಿಕೆಯಷ್ಟು ದಿನಗಳಲ್ಲಿ ಈ ನೇಮಕಾತಿಯ ಅಧಿಸೂಚನೆ ಹೊರಡಿಸಲಿದೆ. ಆದರೆ ಈ ಹಿಂದೆ ಪ್ರಕಟಿಸಿದಂತೆ 504 ಹುದ್ದೆಗಳಿಗೆ ಬದಲಾಗಿ 384 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ ಗ್ರೂಪ್‌ ʻಎʼಯ 159 ಹುದ್ದೆಗಳಾದರೆ ಗ್ರೂಪ್‌ ʻಬಿʼಯ 225 ಹುದ್ದೆಗಳಾಗಿವೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಗ್ರೂಪ್‌ ʻಎʼ ಮತ್ತು ಗ್ರೂಪ್‌ ʻಬಿʼ ಹುದ್ದೆಗಳ ರಿಕ್ತ ಸ್ಥಾನಗಳನ್ನು ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳಂತೆ ವರ್ಗೀಕರಣ ಮಾಡಿ ಫೆಬ್ರವರಿ 2 ಶುಕ್ರವಾರದಂದು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಸಲ್ಲಿಸಿದೆ. ಅಲ್ಲದೆ, ನೇಮಕಾತಿಯನ್ನು ಆರಂಭಿಸಲು ಅಧಿಸೂಚನೆಯನ್ನು ಹೊರಡಿಸುವಂತೆ ಸಹ ಕೋರಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ.

ಗ್ರೂಪ್‌ ʻಎʼ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ 36 ಹುದ್ದೆಗಳು ಮೀಸಲಾಗಿದ್ದರೆ, ಗ್ರೂಪ್‌ ʻಬಿʼ ಹುದ್ದೆಗಳಲ್ಲಿ 41 ಹುದ್ದೆಗಳು ಮೀಸಲಾಗಿವೆ. ಒಟ್ಟು ಏಳು ಇಲಾಖೆಗಳಲ್ಲಿ ಗ್ರೂಪ್‌ ʻಎʼ ಹುದ್ದೆಗಳಿಗೆ ಈಗ ನೇಮಕ ನಡೆಯಲಿದೆ. ಇದರಲ್ಲಿ ಹೆಚ್ಚು ಹುದ್ದೆಗಳು (41 ಹುದ್ದೆಗಳು) ವಾಣಿಜ್ಯ ತೆರಿಗೆ ಇಲಾಖೆಯಲ್ಲಿವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 40 ಹುದ್ದೆಗಳಿಗೂ ನೇಮಕ ನಡೆಯಲಿದೆ. 9 ಡಿವೈಎಸ್‌ಪಿ ಹುದ್ದೆಗಳಿಗೂ ನೇಮಕ ಮಾಡಿಕೊಳ್ಳಲಾಗುತ್ತದೆ.
ಒಟ್ಟು 15 ಇಲಾಖೆಗಳಲ್ಲಿನ ಗ್ರೂಪ್‌ ʻಬಿʼಯ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಅತಿ ಹೆಚ್ಚು ಎಂದರೆ 59 ಹುದ್ದೆಗಳು ವಾಣಿಜ್ಯ ತೆರಿಗೆ ಇಲಾಖೆಯಲ್ಲಿವೆ. 51 ತಹಶೀಲ್ದಾರ್‌ (ಗ್ರೇಡ್‌-2) ಹುದ್ದೆಗಳಿಗೂ ನೇಮಕ ನಡೆಯಲಿದೆ. ಆರ್ಥಿಕ ಇಲಾಖೆಯ ಸಹಾಯಕ ಖಜಾನಾಧಿಕಾರಿ 46 ಹುದ್ದೆಗಳಿಗೂ ಈಗ ನೇಮಕ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: KAS: ಕೆಎಎಸ್ ಪರೀಕ್ಷೆ ಬರೆಯುವವರಿಗೆ ಗುಡ್‌ನ್ಯೂಸ್‌; ಸರ್ಕಾರದ ಹೊಸ ಆದೇಶದಲ್ಲಿ ಏನಿದೆ?

ಕೆಎಎಸ್‌ ನೇಮಕಾತಿ ಕುರಿತು ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಟ್ಟು 16 ಇಲಾಖೆಗಳಲ್ಲಿನ ಒಟ್ಟು 656 ಗ್ರೂಪ್‌ ʻಎʼ ಮತ್ತು ಗ್ರೂಪ್‌ ʻಬಿʼ ಹುದ್ದೆಗಳ ನೇಮಕಕ್ಕೆ ಪ್ರಸ್ತಾವನೆ ಬಂದಿದೆ. ಆರ್ಥಿಕ ಇಲಾಖೆಯು ಒಟ್ಟು 504 ಹುದ್ದೆಗಳ ನೇಮಕಕ್ಕೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದರು. ಹೀಗಾಗಿ ಈ ಬಾರಿ 504 ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದೇ ನಿರೀಕ್ಷಿಸಲಾಗುತ್ತಿತ್ತು.
2017-18ನೇ ಸಾಲಿನಲ್ಲಿ 106 ಕೆಎಎಸ್‌ ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಆ ನಂತರ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲ. ಹೀಗಾಗಿ ಕಳೆದ ಐದು ವರ್ಷಗಳಿಂದ ಅಭ್ಯರ್ಥಿಗಳು ಈ ನೇಮಕ ಪ್ರಕ್ರಿಯೆಗಾಗಿ ಕಾದು ಕುಳಿತಿದ್ದರು. ಈಗ ನೇಮಕ ಪ್ರಕ್ರಿಯೆ ಆರಂಭವಾಗುವ ಸೂಚನೆ ಕಂಡು ಬಂದಿದ್ದರೂ, ಹುದ್ದೆಗಳ ಸಂಖ್ಯೆ ಕಡಿಮೆಯಾಗಿರುವುದು ಅಭ್ಯರ್ಥಿಗಳಿಗೆ ಬೇಸರವನ್ನುಂಟು ಮಾಡಿದೆ.

ಯಾವೆಲ್ಲಾ ಇಲಾಖೆಯ ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ:

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version