ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ನಿಗಮ, ಮಂಡಳಿಗಳಲ್ಲಿ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ (KEA Recruitment 2023) ನಡೆಸಲಿದೆ. ಒಟ್ಟು 757 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಏ. 15 ರಂದು ಅಧಿಸೂಚನೆ ಪ್ರಕಟವಾಗಲಿದೆ.
ಇದರಲ್ಲಿ ಮುಖ್ಯವಾಗಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿನ ಒಟ್ಟು 386 ಹುದ್ದೆಗಳಿಗೆ ನೇಮಕ (KFCSC Recruitment 2023) ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಕ್ಕೆ 2022 ರ ಜೂನ್ 29 ರಂದೇ ಸರ್ಕಾರ ಅನುಮತಿ ನೀಡಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನೇಮಕ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸುಮಾರು ಒಂದು ವರ್ಷದ ನಂತರ ಈ ನೇಮಕ ಪ್ರಕ್ರಿಯೆಯನ್ನು ಕೆಇಎ ಆರಂಭಿಸುತ್ತಿದೆ.
ಇದರಲ್ಲಿ ಹಿರಿಯ ಸಹಾಯಕರ ಹುದ್ದೆ 57 ಮತ್ತು ಕಿರಿಯ ಸಹಾಯಕರ ಹುದ್ದೆ 263. ಈ ಹುದ್ದೆಗಳಿಗೆ ಎಷ್ಟು ವೇತನ ನೀಡಲಾಗುತ್ತದೆ? ವಿದ್ಯಾರ್ಹತೆ ಏನು ಎಂಬುದನ್ನು ನೋಡೋಣ.
ಹಿರಿಯ ಸಹಾಯಕರ ಹುದ್ದೆ
ವಿದ್ಯಾರ್ಹತೆ ಏನು? : ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಗಮನಿಸಿ: ಡಿಪ್ಲೊಮಾ, ಹಿಂದಿ ಸಭಾಗಳಿಂದ ಪಡೆದ ರತ್ನಾ, ವಿಶಾರದ, ಪಂಡಿತ್ ಇತ್ಯಾದಿ ವಿದ್ಯಾರ್ಹತೆಯನ್ನು ಪದವಿಗೆ ತತ್ಸಮಾನವೆಂದು KCS (Recruitment to the Ministerial Post) Rule 1978ರ ನಿಯಮಗಳಲ್ಲಿ ಅಧಿಸೂಚಿಸಿರುವುದಿಲ್ಲವಾದ್ದರಿಂದ, ಇವು ಪದವಿಗೆ ಸಮಾನವಾಗುವುದಿಲ್ಲ. ಆದ್ದರಿಂದ ಈ ವಿದ್ಯಾರ್ಹತೆಯ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಿಲ್ಲ.
ವೇತನ ಶ್ರೇಣಿ: ರೂ. 14,550-350-15,600-400-17,200-450-19,000-500-21,000-600-24,600-700-26,700.
ಪಿಂಚಣಿ ಸೌಲಭ್ಯ ಇರುವುದಿಲ್ಲ.
ಕಿರಿಯ ಸಹಾಯಕರ ಹುದ್ದೆ
ವಿದ್ಯಾರ್ಹತೆ ಏನು? : ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸುವ ಪದವಿ ಪೂರ್ವ ಪರೀಕ್ಷೆ ಅಥವಾ ತತ್ಸಮಾನ ವಿದ್ಯಾರ್ಹತೆಗಳಾದ ಐಟಿಐ ಮತ್ತು ಇತರೆ ಮೂರು ವರ್ಷದ ಡಿಪ್ಲೊಮೊ ಕೋರ್ಸ್.
ಗಮನಿಸಿ: ಮುಕ್ತ ವಿಶ್ವವಿದ್ಯಾಲಯಗಳು ನಡೆಸುವ 10+2 ಪರೀಕ್ಷೆಯನ್ನು ಈ ಹುದ್ದೆಗೆ ನಿಗದಿತ ವಿದ್ಯಾರ್ಹತೆ ಎಂದು ಪರಿಗಣಿಸಲಾಗುವುದಿಲ್ಲ.
ವೇತನ ಶ್ರೇಣಿ: ರೂ. 11,600-200-12,000-250-13,000-300-14,200-350-15,600-400-17,200-450-19,000-500-21,000
ಪಿಂಚಣಿ ಸೌಲಭ್ಯ ಇರುವುದಿಲ್ಲ.
ವಯೋಮಿತಿ ಎಷ್ಟು?
ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗೆ ಗರಿಷ್ಠ ವಯೋಮಿತಿ 35 ವರ್ಷ. ಪ್ರವರ್ಗ- 2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 750 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 500ರೂ. ನಿಗದಿಪಡಿಸಲಾಗುತ್ತದೆ. ಅರ್ಜಿ ಸಲ್ಲಿಸುವಾಗ ಚಲನ್ ಪಡೆದು ಇ-ಅಂಚೆ ಕಚೇರಿ ಮೂಲಕ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗುತ್ತದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ನೇಮಕ ಹೇಗೆ?
ಆಹಾರ ಮತ್ತು ನಾಗರೀಕ ಸರಬರಾಜು ನಿಗಮ(ನಿ)ದಲ್ಲಿನ ಹಿರಿಯ ಸಹಾಯಕರ ಮತ್ತು ಕಿರಿಯ ಸಹಾಯಕರ ಹುದ್ದೆಗಳನ್ನು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳು 2014ರಡಿ ನಿರ್ದಿಷ್ಟಪಡಿಸಲಾದ ಮತ್ತು ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1978ರಡಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುತ್ತದೆ.
ಪರೀಕ್ಷೆ ಹೀಗಿರುತ್ತದೆ;
ಪಠ್ಯಕ್ರಮ ಹೇಗಿರುತ್ತದೆ?
ಹಿರಿಯ ಸಹಾಯಕರ ಹುದ್ದೆ;
- ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು. ಇದರ ಮೂಲಕ ಅಭ್ಯರ್ಥಿಯ ಕನ್ನಡ / ಇಂಗ್ಲಿಷ್ ವ್ಯಾಕರಣ, ಶಬ್ದ ಸಂಪತ್ತು, ಕಾಗುಣಿತ (Spelling) ಸಮನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಇವುಗಳ ಪರಿಜ್ಞಾನ, ಇಂಗ್ಲಿಷ್ / ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯ ಶಕ್ತಿಯ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ ಇವುಗಳನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.
- ಅಭ್ಯರ್ಥಿಗಳು ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್ ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡತಕ್ಕದ್ದು. ಒಮ್ಮೆ ಆಯ್ಕೆ ಮಾಡಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ.
- ಸಾಮಾನ್ಯ ಜ್ಞಾನ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು ಮತ್ತು ಇದು ಭಾರತದ ಸಂವಿಧಾನ, ಭಾರತದ ಇತಿಹಾಸ, ಮತ್ತು ಸಂಸ್ಕೃತಿ, ಭಾರತದ ಸಾಮಾನ್ಯ ಹಾಗೂ ಆರ್ಥಿಕ, ಭೂಗೋಳ ಶಾಸ್ತ್ರ, ಇತ್ತೀಚಿನ ಘಟನೆಗಳು, ದೈನಿಕ ಜೀವನದಲ್ಲಿ ವಿಜ್ಞಾನ ಮತ್ತು ಒಬ್ಬ ವಿದ್ಯಾವಂತ ವ್ಯಕ್ತಿಯು ದೈನಂದಿನ ಜೀವನದಲ್ಲಿ ಗಮನಿಸಬಹುದಾದಂತಹ ವಿಷಯಗಳು. ಇವುಗಳ ಮೇಲಿನ ಪ್ರಶ್ನೆಗಳನ್ನು
ಒಳಗೊಂಡಿರುತ್ತದೆ.
ಕಿರಿಯ ಸಹಾಯಕರ ಹುದ್ದೆ;
- ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷಿ ಪತ್ರಿಕೆಯು ಸಾಮಾನ್ಯವಾಗಿ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು. ಇದರ ಮೂಲಕ ಅಭ್ಯರ್ಥಿಯ ಕನ್ನಡ ಮತ್ತು ಇಂಗ್ಲಿಷ್ ವ್ಯಾಕರಣ ಶಬ್ದ ಸಂಪತ್ತು, ಕಾಗುಣಿತ (Spelling) ಸಮನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಇವುಗಳ ಪರಿಜ್ಞಾನ, ಇಂಗ್ಲಿಷ್/ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯ ಶಕ್ತಿಯ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ ಇವುಗಳನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.
- ಅಭ್ಯರ್ಥಿಗಳು ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್ ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡತಕ್ಕದ್ದು. ಒಮ್ಮೆ ಆಯ್ಕೆ ಮಾಡಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ.
- ಸಾಮಾನ್ಯ ಜ್ಞಾನ ಪತ್ರಿಕೆಯು ಸಾಮಾನ್ಯವಾಗಿ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಇರಬೇಕಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು ಮತ್ತು ಇದು ಭಾರತದ ಸಂವಿಧಾನ, ಭಾರತದ ಇತಿಹಾಸ ಮತ್ತು ಸಂಸ್ಕೃತಿ, ಸಾಮಾನ್ಯ ಅರ್ಥಶಾಸ್ತ್ರ, ಭೂಗೋಳ ಶಾಸ್ತ್ರ, ಇತ್ತೀಚಿನ ಘಟನೆಗಳು, ದೈನಿಕ ಜೀವನದಲ್ಲಿ ವಿಜ್ಞಾನ ಮತ್ತು ಒಬ್ಬ ವಿದ್ಯಾವಂತ ವ್ಯಕ್ತಿಯು ದೈನಂದಿನ ಜೀವನದಲ್ಲಿ ಗಮನಿಸಬಹುದಾದಂತಹ ವಿಷಯಗಳು ಇವುಗಳ ಮೇಲಿನ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಈ ನೇಮಕದ ಕುರಿತ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://cetonline.karnataka.gov.in/kea
ಇದನ್ನೂ ಓದಿ: KEA Recruitment 2023 : ಕೆಇಎಯಿಂದ 757 ಹುದ್ದೆಗಳಿಗೆ ನೇಮಕ ಖಚಿತ; ಏಪ್ರಿಲ್ 17 ರಿಂದ ಅರ್ಜಿ ಸಲ್ಲಿಕೆ ಶುರು