ಬೆಂಗಳೂರು: ವಿವಿಧ ನಿಗಮ, ಮಂಡಳಿಗಳಲ್ಲಿ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು (KEA Recruitment 2023) ತಾಂತ್ರಿಕ ಕಾರಣದಿಂದಾಗಿ ಮುಂದೂಡಿರುವುದಾಗಿ ಕೊನೆಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸ್ಪಷ್ಟೀಕರಣ ನೀಡಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ನೇಮಕ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದೇ ಹೇಳಲಾಗುತ್ತಿತ್ತು. ಒಟ್ಟು 757 ಹುದ್ದೆಗಳಿಗೆ ಈ ನೇಮಕ ಪ್ರಕ್ರಿಯೆ ನಡೆಯಬೇಕಾಗಿದೆ. ಈ ಸಂಬಂಧ ಏಪ್ರಿಲ್ 26 ರಂದು ಪ್ರಕಟಣೆ ಹೊರಡಿಸಿರುವ ಕೆಇಎಯು ʻʻಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 17 ರಿಂದ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ತಾಂತ್ರಿಕ ಸಿದ್ಧತೆಯಿಂದಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ಮುಂದೂಡಲಾಗಿದೆ. ಸದ್ಯದಲ್ಲಿಯೇ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದುʼʼ ಎಂದು ವಿವರಣೆ ನೀಡಿದೆ.
ಈ ನೇಮಕಕ್ಕೆ ಸಂಬಂಧಿಸಿದಂತೆ ಕಳೆದ ಮಾ.15 ರಂದೇ ಪ್ರಕಟಣೆ ಹೊರಡಿಸಿದ್ದ ಕೆಇಎ ಮಾ.24 ರಂದು ವಿವರವಾದ ಅಧಿಸೂಚನೆ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ನಿಗದಿಯಂತೆ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ಕೆಇಎ ಹೇಳಿತ್ತು. ಆದರೆ ನಿಗದಿತ ದಿನಾಂಕದಂದು ಅಂದರೆ ಏ. 15 ರಂದು ವಿವರವಾದ ಅಧಿಸೂಚನೆಯನ್ನೂ ನೀಡಿರಲಿಲ್ಲ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನೂ ಏ. 17 ರಿಂದ ನೀಡಿರಲಿಲ್ಲ. ಅಲ್ಲದೆ ಈ ಬಗ್ಗೆ ಕಾರಣವನ್ನೂ ಪ್ರಕಟಿಸಿರಲಿಲ್ಲ. ಇದರಿಂದ ಅಭ್ಯರ್ಥಿಗಳು ನಿರಾಸೆ ಅನುಭವಿಸಿದ್ದರು.
ಕೆಇಎ ನೀಡಿರುವ ಪ್ರಕಟಣೆ ಇಲ್ಲಿದೆ;
ʻʻಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ವಿವರವಾದ ಪ್ರಕಟಣೆ ನೀಡಿದ್ದ ಕೆಇಎ ನೇಮಕ ಪ್ರಕ್ರಿಯೆ ಆರಂಭಿಸುವ ಬಗ್ಗೆ ಭರವಸೆ ನೀಡಿತ್ತು. ಆದರೆ ಈಗ ಆರಂಭಿಸಿಲ್ಲ. ಈ ಬಗ್ಗೆ ಕನಿಷ್ಠ ಪ್ರಕಟಣೆ ಹೊರಡಿಸಿ, ಅಭ್ಯರ್ಥಿಗಳಿಗೆ ಮಾಹಿತಿ ನೀಡುವ ಸೌಜನ್ಯವನ್ನೂ ತೋರಿಸಿಲ್ಲʼʼ ಎಂದು ಅಭ್ಯರ್ಥಿಗಳು ಕೆಇಎ ವಿರುದ್ಧ ಕಿಡಿ ಕಾರುತ್ತಿದ್ದರು.
ಕೆಇಎ ಮೂಲಗಳ ಪ್ರಕಾರ, ಈ ನೇಮಕ ಪ್ರಕ್ರಿಯೆಗಾಗಿ ಪ್ರಾಧಿಕಾರವು ಹೊಸ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದು, ಇದಿನ್ನೂ ಪ್ರಾಯೋಗಿಕ ಹಂತದಲ್ಲಿದೆ. ಇದನ್ನು ಹಲವಾರು ಬಾರಿ ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಇದರಿಂದಾಗಿ ನೇಮಕಾತಿ ಆರಂಭಿಸುವುದು ತಡವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಬಹುತೇಕವಾಗಿ ಮುಂದಿನ ವಾರವೇ ಅರ್ಜಿ ಸಲ್ಲಿಸಲು ಅವಕಾಶ ನೀಡಬಹುದು ಎಂದು ಈ ಮೂಲಗಳು ವಿವರಿಸಿವೆ.
ಈ ನೇಮಕಾತಿಗೆ ಸಂಬಂಧಿಸಿದ ಕೆಇಎ ಹೊರಡಿಸಿದ್ದ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ (Click Here ) ಮಾಡಿ.
ಯಾವೆಲ್ಲಾ ಹುದ್ದೆಗಳಿಗೆ ನೇಮಕ ನಡೆಯಬೇಕಿತ್ತು?
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
- ಕಲ್ಯಾಣ ಅಧಿಕಾರಿ -12 (ಉಳಿಕೆ ಮೂಲ ವೃಂದ-9 ಕಲ್ಯಾಣ ಕರ್ನಾಟಕ-3)
- ಕ್ಷೇತ್ರ ನಿರೀಕ್ಷಕರು – 60 (ಉಳಿಕೆ ಮೂಲ ವೃಂದ-45 ಕಲ್ಯಾಣ ಕರ್ನಾಟಕ-15)
- ಪ್ರಥಮ ದರ್ಜೆ ಸಹಾಯಕರು -12 (ಉಳಿಕೆ ಮೂಲ ವೃಂದ-8 ಕಲ್ಯಾಣ ಕರ್ನಾಟಕ-4)
- ಆಪ್ತ ಸಹಾಯಕರು- 02 (ಉಳಿಕೆ ಮೂಲ ವೃಂದ-2)
- ದ್ವಿತೀಯ ದರ್ಜೆ ಸಹಾಯಕರು -100 (ಉಳಿಕೆ ಮೂಲ ವೃಂದ-64 ಕಲ್ಯಾಣ ಕರ್ನಾಟಕ-36)
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
- ಸಹಾಯಕ ವ್ಯವಸ್ಥಾಪಕರು -10 (ಉಳಿಕೆ ಮೂಲ ವೃಂದ-8 ಕಲ್ಯಾಣ ಕರ್ನಾಟಕ-2)
- ಗುಣಮಟ್ಟ ನಿರೀಕ್ಷಕರು – 23 (ಉಳಿಕೆ ಮೂಲ ವೃಂದ-18 ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್ -3)
- ಹಿರಿಯ ಸಹಾಯಕರು (ಲೆಕ್ಕ)- 33 (ಉಳಿಕೆ ಮೂಲ ವೃಂದ-26 ಕಲ್ಯಾಣ ಕರ್ನಾಟಕ-5, ಬ್ಯಾಕ್‌ಲಾಗ್ -2)
- ಹಿರಿಯ ಸಹಾಯಕರು -57 (ಉಳಿಕೆ ಮೂಲ ವೃಂದ-49 ಕಲ್ಯಾಣ ಕರ್ನಾಟಕ-08)
- ಕಿರಿಯ ಸಹಾಯಕರು – 263 (ಉಳಿಕೆ ಮೂಲ ವೃಂದ-244 ಕಲ್ಯಾಣ ಕರ್ನಾಟಕ-19)
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
- ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ)- 10 (ಉಳಿಕೆ ಮೂಲ ವೃಂದ-9 ಕಲ್ಯಾಣ ಕರ್ನಾಟಕ-1)
- ಸಹಾಯಕ ಎಂಜಿನಿಯರ್ (ಸಿವಿಲ್) (ಗ್ರೂಪ್-ಬಿ)- 1 (ಉಳಿಕೆ ಮೂಲ ವೃಂದ-1)
- ಸಹಾಯಕ ಗ್ರಂಥಾಪಾಲಕ (ಗ್ರೂಪ್-ಸಿ) – 1 (ಉಳಿಕೆ ಮೂಲ ವೃಂದ-1)
- ಸಹಾಯಕ (ಗ್ರೂಪ್-ಸಿ) – 27 (ಉಳಿಕೆ ಮೂಲ ವೃಂದ-25 ಕಲ್ಯಾಣ ಕರ್ನಾಟಕ-2)
- ಕಿರಿಯ ಸಹಾಯಕ (ಗ್ರೂಪ್-ಸಿ) -49 (ಉಳಿಕೆ ಮೂಲ ವೃಂದ-45 ಕಲ್ಯಾಣ ಕರ್ನಾಟಕ-04)
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
- ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ)- ಗ್ರೂಪ್ ಬಿ – 4 (ಉಳಿಕೆ ಮೂಲ ವೃಂದ-1, ಕಲ್ಯಾಣ ಕರ್ನಾಟಕ-1, ಬ್ಯಾಕ್ಲಾಗ್-2)
- ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ)-ಗ್ರೂಪ್ ಬಿ – 2 (ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-1)
- ಆಪ್ತ ಕಾರ್ಯದರ್ಶಿ – ಗ್ರೂಪ್ ಸಿ – 1 (ಉಳಿಕೆ ಮೂಲ ವೃಂದ-1)
- ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್ ಸಿ – 4 (ಉಳಿಕೆ ಮೂಲ ವೃಂದ-1, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-2)
- ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್ ಸಿ – 3 ( ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-2)
- ಸಹಾಯಕರು (ತಾಂತ್ರಿಕ) ಗ್ರೂಪ್ ಸಿ- 6 (ಉಳಿಕೆ ಮೂಲ ವೃಂದ-4, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-1)
- ಸಹಾಯಕರು (ತಾಂತ್ರಕೇತರ) ಗ್ರೂಪ್ ಸಿ -6 (ಉಳಿಕೆ ಮೂಲ ವೃಂದ-4, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-1)
ಮೈಸೂರು ಸೇಲ್ಸ್‌ಇಂಟರ್‌ನ್ಯಾಷನಲ್ ಲಿಮಿಟೆಡ್
- ಸಹಾಯಕ ವ್ಯವಸ್ಥಾಪಕರು – 23 (ಉಳಿಕೆ ಮೂಲ ವೃಂದ-20, ಕಲ್ಯಾಣ ಕರ್ನಾಟಕ-3)
- ಮೇಲ್ವಿಚಾರಕರು – 23 (ಉಳಿಕೆ ಮೂಲ ವೃಂದ-20, ಕಲ್ಯಾಣ ಕರ್ನಾಟಕ-3)
- ಪದವೀಧರ ಗುಮಾಸ್ತರು – 6 (ಉಳಿಕೆ ಮೂಲ ವೃಂದ-5, ಕಲ್ಯಾಣ ಕರ್ನಾಟಕ-1)
- ಗುಮಾಸ್ತರು – 13 (ಉಳಿಕೆ ಮೂಲ ವೃಂದ-12, ಕಲ್ಯಾಣ ಕರ್ನಾಟಕ-1)
- ಮಾರಾಟ ಪ್ರತಿನಿಧಿ / ಪ್ರೋಗ್ರಾಮರ್ – 6 (ಕಲ್ಯಾಣ ಕರ್ನಾಟಕ-6)
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಕಲ್ಯಾಣ ಕರ್ನಾಟಕಕ್ಕೆ ಮೀಸಲಾದ ಹುದ್ದೆಗಳಿಗೆ ಸರ್ಕಾರದ ಆದೇಶದಂತೆ ಪ್ರತ್ಯೇಕವಾಗಿ ಅಧಿಸೂಚನೆ ಪ್ರಕಟಿಸಬೇಕಿರುತ್ತದೆ. ಕೆಇಎ ಮೂಲಗಳ ಪ್ರಕಾರ ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಪ್ರಾಧಿಕಾರ ಈ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಿದೆ.
ಇದನ್ನೂ ಓದಿ : KEA Recruitment 2023 : ಆಹಾರ ನಿಗಮದಲ್ಲಿ ನೇಮಕ; ವಿದ್ಯಾರ್ಹತೆ, ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ!