Site icon Vistara News

KEA Recruitment 2023 : ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾಸ್ಕ್‌ ಧರಿಸುವಂತಿಲ್ಲ!

KEA Recruitment 2023 ಮಾಸ್ಕ್‌ ಕಡ್ಡಾಯ

ಬೆಂಗಳೂರು: ದೇಶದಲ್ಲಿ ಕೊರೊನಾ ಭೀತಿ ಇನ್ನೂ ದೂರವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ, ಒಳಾಂಗಣದಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಶಾಲೆ-ಕಾಲೇಜುಗಳಲ್ಲಿಯೂ ಮಾಸ್ಕ್‌ ಧರಿಸಬೇಕೆಂದು ಸೂಚಿಸಿದೆ. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ನೇಮಕಗಳಿಗೆ (KEA Recruitment 2023) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮಾಸ್ಕ್‌ ಧರಿಸುವಂತಿಲ್ಲ ಎಂದು ಸೂಚಿಸಿದೆ!

ಹೌದು, ಕೆಇಎ ಹೀಗೆ ಮಾಸ್ಕ್‌ ಧರಿಸಬೇಡಿ ಎಂದು ಸೂಚಿಸಲು ಇತ್ತೀಚೆಗೆ ಹೈಟೆಕ್‌ ಆಗಿ ಪರೀಕ್ಷಾ ಅಕ್ರಮಗಳು ನಡೆಯುತ್ತಿರುವುದೇ ಕಾರಣ. ಕೆಇಎ ಜನವರಿ 29ರಿಂದ ವಿವಿಧ ನೇಮಕಾತಿ ಪರೀಕ್ಷೆ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಡೆಸ್‌ಕೋಡ್‌ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಮೊದಲಿಗೇ “ಅಭ್ಯರ್ಥಿಗಳು ಯಾವುದೇ ಮಾಸ್ಕ್‌ ಅನ್ನು ಧರಿಸುವಂತಿಲ್ಲʼʼ ಎಂದು ಸ್ಪಷ್ಟವಾಗಿ ಸೂಚಿಸಿದೆ.

ಪಿಎಸ್‌ಐ, ಕೆಪಿಟಿಸಿಎಲ್‌ ಸೇರಿದಂತೆ ಇತ್ತೀಚೆಗೆ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೆಲ ಅಭ್ಯರ್ಥಿಗಳು ಬ್ಲೂಟೂತ್‌ ಇತ್ಯಾದಿ ಆಧುನಿಕ ಉಪಕರಣಗಳ್ನು ಬಳಸಿ ಅಕ್ರಮ ನಡೆಸಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಕೆಇಎ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಇದರ ಭಾಗವಾಗಿ ಮಾಸ್ಕ್‌ ಧರಿಸಲೂ ಅವಕಾಶ ನೀಡಿಲ್ಲ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಬೀಜ ನಿಗಮ ನಿಯಮಿತ (KSSCL)ದಲ್ಲಿನ ಸಹಾಯಕ ವ್ಯವಸ್ಥಾಪಕರ ಹಾಗೂ ಹಿರಿಯ/ ಕಿರಿಯ/ ಬೀಜ ಸಹಾಯಕರು ಹುದ್ದೆಗಳ ನೇಮಕಕ್ಕೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿನ ಪಶು ವೈದ್ಯಕೀಯ ಪರಿವೀಕ್ಷಕರ ಹುದ್ದೆಗಳಿಗೆ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿನ ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ನೇಮಕಕ್ಕೆ ಮತ್ತು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಖಾಲಿ ಇರುವ ಅಸಿಸ್ಟೆಂಟ್‌ ಎಂಜಿನಿಯರ್‌, ಜೂನಿಯರ್‌ ಎಂಜಿನಿಯರ್‌ ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತಿದೆ.

ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳನ್ನು ಹೊಂದಿರುವ ಡ್ರೆಸ್‌ಗಳನ್ನು ಧರಿಸಬಾರದು ಎಂದು ಸೂಚಿಸಲಾಗಿದೆ. ಪೂರ್ಣತೋಳಿನ ಬಟ್ಟೆಗಳನ್ನು ಧರಿಸುವುದನ್ನೂ ನಿಷೇಧಿಸಲಾಗಿದೆ.

ಎತ್ತರದ ಹಿಮ್ಮಡಿಯ ಬೂಟುಗಳು ಮತ್ತು ಅಡಿಭಾಗ ಹೊಂದಿರುವ ಬೂಟುಗಳನ್ನು ಹಾಕಬಾರದು. ಸ್ಯಾಂಡಲ್, ಚಪ್ಪಲಿಗಳನ್ನೇ ಹಾಕಿಕೊಂಡು ಪರೀಕ್ಷೆಗೆ ಹಾಜರಾಗಬಹುದು ಎಂದು ತಿಳಿಸಲಾಗಿದೆ. ಕಿವಿಯೋಲೆಗಳು, ಉಂಗುರಗಳು, ಪೆಂಡೆಂಟ್‌ಗಳು, ನೆಕ್ಲೇಸ್‌ಗಳು, ಬಳೆಗಳು ಇಂತಹ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ಕೂಡ ನಿಷೇಧಿಸಲಾಗಿದ್ದು, ಹಿಜಾಬ್‌, ಬುರ್ಖಾ ಧರಿಸಿ ಬರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕೆಇಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪುರುಷ ಅಭ್ಯರ್ಥಿಗಳು ಕೂಡ ಅರ್ಧ ತೋಳಿನ ಶರ್ಟ್‌ಗಳನ್ನೇ ಧರಿಸಿ ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು. ಅಂದರೆ ಜಿಪ್ ಇರುವ ಪಾಕೆಟ್‌ಗಳು, ದೊಡ್ಡ ಬಟನ್‌ಗಳು, ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಕುರ್ತಾ ಪೈಜಾಮವನ್ನು ಹಾಕಿಕೊಂಡು ಬರುವಂತಿಲ್ಲ. ಯಾವುದೇ ಲೋಹದ ಆಭರಣಗಳನ್ನು ಧರಿಸಿಕೊಂಡು ಬರುವಂತಿಲ್ಲ. ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಕೆಇಎ ತಿಳಿಸಿದೆ.

ಡ್ರೆಸ್‌ಕೋಡ್‌ ಅನ್ನು ಅನುಸರಿಸುವುದರ ಜೊತೆಗೆ, ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್‌ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋಫೋನ್‌ಗಳು, ಬ್ಲೂಟೂತ್ ಸಾಧನಗಳು ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ.

ಯಾವುದೇ ರೂಪದಲ್ಲಿ ಆಹಾರ ಪದಾರ್ಥಗಳು-ಪ್ಯಾಕ್ ಮಾಡಲಾದ ಅಥವಾ ಅನ್‌ಪ್ಯಾಕ್‌ ಆಹಾರ ಪದಾರ್ಥಗಳನ್ನು ಸಹ ಪರೀಕ್ಷಾ ಕೇಂದ್ರದೊಳಗೆ ತೆಗೆದುಕೊಂಡು ಹೋಗುವಂತಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ನೀರಿನ ಬಾಟಲಿ ತೆಗೆದುಕೊಂಡು ಹೋಗಬಹುದಾದರೂ ಬಾಟಲಿ ಪಾರದರ್ಶಕವಾಗಿರಬೇಕು. ಅದಕ್ಕೆ ಯಾವುದೇ ಲೇಬಲ್‌ ಇರಬಾರದು ಎಂದು ಸೂಚಿಸಲಾಗಿದೆ.

ಪೆನ್ಸಿಲ್, ಪೇಪರ್, ಎರೇಸರ್, ಮಾಪಕಗಳು, ಜ್ಯಾಮಿಟ್ರಿ ಬಾಕ್ಸ್ ಮತ್ತು ಲಾಗ್ ಟೇಬಲ್‌ಗಳನ್ನು ಪರೀಕ್ಷಾ ಕೇಂದ್ರಗೊಳಗೆ ಒಯ್ಯುವುದನ್ನು ನಿಷೇಧಿಸಲಾಗಿದೆ. ವ್ಯಾಲೆಟ್‌ಗಳು, ಗಾಗಲ್ಸ್, ಬೆಲ್ಸ್‌ಗಳು, ಕ್ಯಾಪ್‌ಗಳು, ಪರಿಕರಗಳು, ಕ್ಯಾಮೆರಾ ಮತ್ತು ಆಭರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ಒಯ್ಯಲು ಅನುಮತಿಸಲಾಗುವುದಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ | KEA Recruitment 2023 : ಕೆಇಎನಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ; ಪರಿಷ್ಕೃತ ವೇಳಾಪಟ್ಟಿ, ಪ್ರವೇಶ ಪತ್ರ ಬಿಡುಗಡೆ

Exit mobile version