ನವದೆಹಲಿ: ಹಬ್ಬದ ಸೀಸನ್ (festive season) ಮಧ್ಯೆಯೇ ಎಲ್ ಆ್ಯಂಡ್ ಟಿ ಟೆಕ್ನಾಲಜಿ ಸರ್ವೀಸ್ (L&T Technology Services) 200 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ(Lays Off). ಉದ್ಯೋಗಿಗಳು ಇತ್ತೀಚಿನ ಕಾರ್ಯಕ್ಷಮತೆಯ ಪರಿಶೀಲನೆ (performance review) ಮತ್ತು ಓವರ್‌ಲ್ಯಾಪಿಂಗ್ ಉದ್ಯೋಗದ ಕಾರಣ ನೀಡಿದ ಸಂಸ್ಥೆಯು ಈ ಕ್ರಮ ಕೈಗೊಂಡಿದೆ. ಕೆಲಸದಿಂದ ಕಿತ್ತು ಹಾಕಲಾದ 200 ಜನರ ಪೈಕಿ ಹೆಚ್ಚಿನವರು ಹಿರಿಯ ಮಟ್ಟದ ಉದ್ಯೋಗಿಗಳಾಗಿದ್ದಾರೆ (Senior level Employees) ಎಂದು ಹೇಳಲಾಗುತ್ತಿದೆ.
ಎಜುಟೆಕ್ ಕಂಪನಿಯಾದ ಪಿಜಿಕ್ಸ್‌ವಾಲಾ 120 ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಲ್ಲೇ, ಎಲ್ ಆ್ಯಂಡ್ ಟಿ ಟೆಕ್ನಾಲಜಿ ಕಂಪನಿಯು ಭಾರತದಲ್ಲಿ ಉದ್ಯೋಗ ಕಡಿತ ಮಾಡುವ ಕಂಪನಿಗಳ ಸಾಲಿಗೆ ಸೇರಿದೆ. ಉದ್ಯೋಗಿಗಳ ಕಾರ್ಯಕ್ಷಮತೆ ಮತ್ತು ಅನೇಕ ಉದ್ಯೋಗ ಕಡಿತ ನೀತಿಯ ಭಾಗವಾಗಿ ಕಂಪನಿಯು ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ವಜಾಗೊಳಿಸಲಾದ ಉದ್ಯೋಗಿಗಳು ಮುಖ್ಯವಾಗಿ ವಿತರಣಾ ಮತ್ತು ಬೆಂಬಲ ವಿಭಾಗಗಳಿಗೆ ಸೇರಿದವರಾಗಿದ್ದಾರೆ. ಈ ವಿಭಾಗದ ಅನೇಕ ಕೆಲಸಗಳು ಆಟೊಮೇಷನ್‌ಗೆ ಬದಲಾದ್ದರಿಂದ ಉದ್ಯೋಗ ಕಡಿತ ಅನಿವಾರ್ಯವಾಗಿತ್ತು. 24000 ಉದ್ಯೋಗಿಗಳಿರುವ ಈ ಕಂಪನಿಯು, ಮುಂದಿನ ಜನವರಿಯಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತವನ್ನು ಮಾಡುವ ಸಾಧ್ಯತೆ ಇದೆ. ಕಂಪನಿಯ ಒಟ್ಟಾರೆ ವ್ಯಾಪಾರ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ ಬಳಿಕ ಮತ್ತೊಂದು ಸುತ್ತಿನ ಉದ್ಯೋಗ ನಡೆಯುವ ಸಾಧ್ಯತೆ ಇದೆ.
ಈಗ ಕೈಗೊಳ್ಳಲಾದ ಕ್ರಮವು ಕಂಪನಿಯ ವಾಡಿಕೆಯ ಕಾರ್ಯಕ್ಷಮತೆಯ ಪರಿಶೀಲನೆಯಾಗಿದೆ. ಅಲ್ಲದೇ ವರ್ಷಪೂರ್ತಿ ಕಂಪನಿಯು ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಾ ಬಂದಿದೆ. ವಿಶೇಷವಾಗಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಮತ್ತು ಕೃತಕ ಬುದ್ಧಿಮತ್ತೆ ವಿಭಾಗಗಳಲ್ಲಿ ನೇಮಕಾತಿಗಳು ನಡೆಯುತ್ತಲೇ ಇರುತ್ತವೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ.
ಎಲ್ ಆ್ಯಂಡ್ ಟೆಕ್ನಾಲಜಿ ಸರ್ವಿಸಸ್ ತನ್ನ ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಆದಾಯದ ಬೆಳವಣಿಗೆಯ ಮಾರ್ಗದರ್ಶನವನ್ನು ಕಡಿಮೆ ಮಾಡಿದ ಕೇವಲ ಒಂದು ತಿಂಗಳ ಬಳಿಕ ಉದ್ಯೋಗ ಕಡಿತದ ನಿರ್ಧಾರವನ್ನು ಕೈಗೊಂಡು, ಅನುಷ್ಠಾಕ್ಕೆ ತಂದಿದೆ. ಸೆಪ್ಟೆಂಬರ್‌ನಲ್ಲಿ ಕಂಪನಿಯು 315.4 ಕೋಟಿ ರೂ. ನಿವ್ವಳ ಲಾಭವನ್ನು ಪ್ರಕಟಿಸಿದೆ.
ಕಳೆದ ತಿಂಗಳವಷ್ಟೇ ಲಿಂಕ್ಡ್‌ಇನ್, ಸ್ಟ್ರೀಮ್‌ಲೈನ್ ಪ್ರಯತ್ನಗಳಿಗಾಗಿ ಎಂಜಿನಿಯರಿಂಗ್ ಮತ್ತು ಪ್ರಾಡಕ್ಟ್ ವಿಭಾಗಳಲ್ಲಿನ ಸುಮಾರು 700 ಉದ್ಯೋಗಗಳನ್ನು ಕಡಿತ ಮಾಡಿತ್ತು. 2023 ಸಾಲಿನಲ್ಲಿ ಈ ವರೆಗಿನ ಅಂಕಿ-ಅಂಶಗಳ ಪ್ರಕಾರ ಹೆಚ್ಚು ಕಡಿಮೆ 14,000 ಉದ್ಯೋಗಿಗಳನ್ನು ವಿವಿಧ ಸ್ಟಾರ್ಟ್‌ಅಪ್‌ಗಳು ವಜಾ ಮಾಡಿವೆ. ಈ ಪೈಕಿ ಹೆಚ್ಚಿನವರು ಐಟಿ ಹಿನ್ನೆಲೆಯವರೇ ಆಗಿದ್ದಾರೆ.
ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಟೆಕ್ ದೈತ್ಯ ಕಂಪನಿಗಳು, ಎಜುಟೆಕ್ ಕಂಪನಿಗಳು ನಿರಂತರವಾಗಿ ಉದ್ಯೋಗ ಕಡಿತಗಳನ್ನು ಮಾಡುತ್ತಲೇ ಬಂದಿವೆ. ಗೂಗಲ್, ಫೇಸ್‌ಬುಕ್, ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಕಂಪನಿಗಳು ಸಾವಿರಾರು ಉದ್ಯೋಗ ಕಡಿತ ಮಾಡಿವೆ. ಈ ಉದ್ಯೋಗ ಕಡಿತ ಪ್ರಕ್ರಿಯೆ ಇನ್ನೂ ನಿಂತಿಲ್ಲ. ಅನೇಕ ಹೊಸ ಹೊಸ ಕಂಪನಿಗಳು ಈ ಸಾಲಿಗೆ ಸೇರ್ಪಡೆಯಾಗುತ್ತಿವೆ.
ಈ ಸುದ್ದಿಯನ್ನೂ ಓದಿ: Swiggy lays off : ಸ್ವಿಗ್ಗಿಯಲ್ಲಿ ಸಾಮೂಹಿಕ ಉದ್ಯೋಗ ಕಡಿತ, 380 ಉದ್ಯೋಗಿಗಳಿಗೆ ಗೇಟ್‌ಪಾಸ್