ನವ ದೆಹಲಿ: ಮೊದಲೆಲ್ಲ ಒಂದು ಕಂಪನಿಯಿಂದ ಕೆಲಸ ಬಿಡುವುದಕ್ಕಿಂತಲೂ ರಾಜೀನಾಮೆ ಪತ್ರ ಬರೆಯುವುದೇ ದೊಡ್ಡ ಸವಾಲಾಗಿತ್ತು. ಕೆಲವರು ತಮ್ಮ ಸುದೀರ್ಘ ರಾಜೀನಾಮೆ ಪತ್ರದಲ್ಲಿ ಕಂಪನಿಗಾಗಿ ತಾವು ಮಾಡಿದ ತ್ಯಾಗ, ಅನುಭವಿಸಿದ ನೋವುಗಳನ್ನೆಲ್ಲ ದಾಖಲಿಸಿದರೆ, ಇನ್ನು ಕೆಲವರು ಕಚೇರಿಯಲ್ಲಿ ಏನೇನು ಕಲಿತೆ, ಕಂಪನಿ ತನ್ನನ್ನು ಹೇಗೆಲ್ಲ ಉದ್ಧಾರ ಮಾಡಿತು ಎಂದೆಲ್ಲ ಬರೆಯುತ್ತಿದ್ದರು. ಕೊನೆಗೆ ಮಾಲೀಕರನ್ನು ಆಕಾಶಕ್ಕೇರಿಸಿ ಪತ್ರ ಮುಗಿಸುತ್ತಿದ್ದರು. ಇದಕ್ಕೆ ಕೆಲವು ದಿನ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದರು.
ಆದರೆ, ಇತ್ತೀಚೆಗೆ ರಾಜೀನಾಮೆ ನೀಡುವುದು ಮತ್ತು ಪತ್ರ ಬರೆಯುವುದು ಸಿಕ್ಕಾಪಟ್ಟೆ ಸಲೀಸಾಗಿ ಬಿಟ್ಟಿದೆ. ಮೊನ್ನೆ ಯಾರೋ ʻಬಾಯ್ ಬಾಯ್ ಸರ್ʼ ಅಂತಷ್ಟೇ ರಿಸೈನ್ ಲೆಟರ್ ಬರೆದಿದ್ದಂತೆ. ಇನ್ನು ಕೆಲವು ಕಂಪನಿಗಳ ಈ-ಮೇಲ್‌ನಲ್ಲಿ ರೆಸಿಗ್ನೇಷನ್ ಕೀ ಅಂತಾನೇ ಇರುತ್ತದಂತೆ. ಅದನ್ನು ಒತ್ತಿ ಓಕೆ ಅಂತ ಕೊಟ್ಟರೆ ರಿಸೈನ್ ಲೆಟರ್ ಫೈಲ್ ಆಗುತ್ತದಂತೆ!
ಈ ವಿಷಯ ಯಾಕೆ ಚರ್ಚೆಗೆ ಬಂತು ಎಂದರೆ ರಾಮ್ ಪ್ರಸಾದ್ ಗೋಯೆಂಕಾ (ಆರ್‌ಪಿಜಿ) ಗ್ರೂಪ್‌ನ ಅಧ್ಯಕ್ಷರಾಗಿರುವ ಹರ್ಷ ಗೋಯೆಂಕಾ ಅವರು ತಮಗೆ ಬಂದಿರುವ ಒಂದು ರಾಜೀನಾಮೆ ಪತ್ರವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವುದರಿಂದ. ʻʻಈ ರಾಜೀನಾಮೆ ಪತ್ರ ತುಂಬಾ ಸಣ್ಣದಾಗಿದೆ. ಅದರೆ, ತುಂಬ ಗಾಢವಾಗಿದೆ. ಇದು ನಾವೆಲ್ಲರೂ ಸೇರಿ ಪರಿಹರಿಸಬೇಕಾದ ಗಂಭೀರ ಸಮಸ್ಯೆʼʼ ಎಂದು ಬರೆದು ಪತ್ರವನ್ನು ಪೋಸ್ಟ್ ಮಾಡಿದ್ದಾರೆ. ರಾಜೇಶ್ ಎಂಬವರು ಹರ್ಷ ಅವರನ್ನೇ ಉಲ್ಲೇಖಿಸಿ ಇದೇ ವರ್ಷದ ಜೂನ್‌ನಲ್ಲಿ ಬರೆದ ಪತ್ರ ಇದಾಗಿದೆ. ಇದರಲ್ಲಿ ಬರೆದಿರುವುದು ಇಷ್ಟೇ ʻ ಆತ್ಮೀಯ ಹರ್ಷ, ನಾನು ರಾಜೀನಾಮೆ ನೀಡುತ್ತಿದ್ದೇನೆ. ಮಜಾ ನಹೀ ಆ ರಹಾ(ಏನೂ ಮಜಾ ಬರ್ತಾ ಇಲ್ಲ)ʼ. ಹಿಂಗ್ಲಿಷ್‌ನಲ್ಲಿ ಬರೆದಿರುವ ಪತ್ರದ ಕೊನೆಗೆ ʻನಿಮ್ಮ ವಿಶ್ವಾಸಿ, ರಾಜೇಶ್ʼ ಎಂದು ಬರೆಯಲಾಗಿದೆ.
ಈ ಪತ್ರ ವೈರಲ್ ಆಗುತ್ತಿದ್ದಂತೆಯೇ ಜನರು ತಲೆಗೊಂದರಂತೆ ಮಾತನಾಡಲು, ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಕೆಲವರು ಈ ಪತ್ರದ ಔಪಚಾರಿಕತೆಯನ್ನು ಪ್ರಶ್ನೆ ಮಾಡಿದ್ದರೆ, ಇನ್ನು ಕೆಲವರು ತಮಾಷೆಯಾಗಿ, ಕೆಲವರು ಸಹಜವಾಗಿ ಸ್ವೀಕರಿಸಿದ್ದಾರೆ.
ʻʻಇದು ಹೆಚ್ಚು ಕಡಿಮೆ ಎಲ್ಲ ಉದ್ಯೋಗಿಗಳ ಭಾವನೆಯೇ ಆಗಿದೆ. ಎಲ್ಲರೂ ಹೇಳಲ್ಲ, ಇವರು ಹೇಳಿದ್ದಾರೆ. ಇದೊಂದು ವಾಸ್ತವಿಕ ರಾಜೀನಾಮೆ ಪತ್ರʼ ಎಂದು ಒಬ್ಬರು ಹೇಳಿದ್ದಾರೆ. ʻʻಮಜಾ ಬರ್ತಾ ಇಲ್ಲ ಎನ್ನುವುದು ಒಟ್ಟಾರೆ ಪತ್ರದ ಸಾರ. ಇದರ ಮೂಲ ಕಾರಣವನ್ನು ಪತ್ತೆ ಹಚ್ಚಬೇಕುʼ ಎನ್ನುವುದು ಇನ್ನೊಬ್ಬರ ಒಕ್ಕಣೆ! ಒಟ್ಟಾರೆಯಾಗಿ ರಾಜೇಶ್ ಅನ್ನುವ ವ್ಯಕ್ತಿಗೆ ಕಚೇರಿಯಲ್ಲಿ ಕೆಲಸ ಮಾಡಲು ಅಷ್ಟೇನೂ ಆಸಕ್ತಿ ಬರುತ್ತಿಲ್ಲ ಎನ್ನುವುದು ಸಾರ ಅನಿಸುತ್ತದೆ.
ಟ್ರೆಂಡ್ ಆಗಿದೆ ಈ ತರದ ಪತ್ರ
ಕಾರ್ಪೊರೇಟ್ ಕಂಪನಿಗಳಲ್ಲಿ ರಾಜೀನಾಮೆ ಪತ್ರ ನೀಡುವ ವಿಚಾರದಲ್ಲಿ ಔಪಚಾರಿಕತೆ ಎನ್ನುವುದು ಮರೆಯಾಗುತ್ತಿದೆ. ಅದರ ಜತೆಗೆ ಉದ್ಯೋಗಿಗಳು ಕೂಡಾ ತಾವು ರಾಜೀನಾಮೆ ನೀಡುವುದನ್ನು ನಿರ್ಭಯವಾಗಿ ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಉದ್ಯೋಗಿಯೊಬ್ಬರು ʻನಂಗೆ ನಾಳೆ ಬೇರೆ ಕಂಪನಿಯ ಸಂದರ್ಶನಕ್ಕೆ ಹೋಗಬೇಕಾಗಿದೆ. ಹಾಗಾಗಿ ರಜೆ ಬೇಕುʼ ಎಂದು ರಜಾ ಅರ್ಜಿ ಹಾಕಿದ್ದು ಸುದ್ದಿ ಆಗಿತ್ತು. ಈ ಮಟ್ಟದ ನೇರವಂತಿಕೆ ಈಗ ಬೆಳೆಯುತ್ತಿದೆ. ನಿಜವೆಂದರೆ, ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವಾಗಲೇ ಅಷ್ಟೇ ಸರಳ ತಂತ್ರಗಳನ್ನು ಬಳಸುತ್ತವೆ. ʻಯೂ ಆರ್ ಫೈರ್‌ಡ್ʼ ಅಂತ ಅತ್ಯಂತ ಸರಳವಾಗಿ ನಾಳೆಯಿಂದ ಬರಬೇಡ ಎಂದು ಸೂಚಿಸುತ್ತವೆ. ಐಟಿ ಕಂಪನಿಗಳಲ್ಲಿ ಪಿಂಕ್ ಸ್ಲಿಪ್ ಎನ್ನುವುದು ಕೂಡಾ ಅಷ್ಟೇ ನಾಜೂಕಿನ ತಂತ್ರ. ಜಗತ್ತು ವಿಶಾಲವಾಗಿದೆ ಎನ್ನುವ ಧೋರಣೆ, ಆಗಾಗ ಕೆಲಸ ಬದಲಾಯಿಸುವ ಮಾಡುವ ಪ್ರವೃತ್ತಿಯಿಂದ ಇನ್ನು ಮುಂದೆ ರಾಜೀನಾಮೆ ಪತ್ರದಲ್ಲಿ ಇನ್ನಷ್ಟು ಕ್ರಾಂತಿಕಾರಿ ಬದಲಾವಣೆ ಆದರೆ ಆಶ್ಚರ್ಯಪಡಬೇಕಾಗಿಲ್ಲ!
ಇದನ್ನೂ ಓದಿ| ʼಬೈ ಬೈ ಸರ್ʼ-ಮೂರೇ ಶಬ್ದದ ರಾಜೀನಾಮೆ ಪತ್ರ ನಮಗೆಲ್ಲ ಮಾದರಿಯೆಂದ ನೆಟ್ಟಿಗರು
ಇದನ್ನೂ ಓದಿ | ಉದ್ಯೋಗಿಯೊಬ್ಬ ರಜೆ ಕೇಳಿ ಬಾಸ್‌ಗೆ ಕಳಿಸಿದ ಇ-ಮೇಲ್ ವೈರಲ್; ಪ್ರಾಮಾಣಿಕತೆ ಮೆಚ್ಚುವಂಥದ್ದು !