Site icon Vistara News

ಪ್ರತಿ ವಿಧಾನಸಭಾ ಕ್ಷೇತ್ರದ 100 ನಿರುದ್ಯೋಗಿ ಯುವಕರಿಗೆ ದ್ವಿಚಕ್ರ ವಾಹನ: ಪಡೆಯುವುದು ಹೇಗೆ?

ಬೆಂಗಳೂರು: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ರಾಜ್ಯಾದ್ಯಂತ 28 ಸಾವಿರ ದ್ವಿಚಕ್ರ ವಾಹನ ನೀಡುವ ಗುರಿ ಹೊಂದಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗಿ ಉಡುಪಿಯ ಆದರ್ಶ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಲ್ಲಿಂದಲೆ ವಿಡಿಯೋ ಸಂವಾದ ಮೂಲಕ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಲ್ಲ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಸ್ಥ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಸರಕು ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತಿದೆ. ಫಲಾನುಭವಿಗಳನ್ನು ಶೀಘ್ರವೇ ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಯೋಜನೆ ಅನುಷ್ಠಾನಕ್ಕಾಗಿ 210 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ದ್ವಿಚಕ್ರ ವಾಹನ ವಿತರಣೆ ಗುರಿ ಹೊಂದಲಾಗಿದೆ. ಮೀನು ಮಾರಾಟ, ಬಟ್ಟೆ ವ್ಯಾಪಾರ ಸೇರಿದಂತೆ ಸರಕು ದ್ವಿಚಕ್ರ ವಾಹನಗಳಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಅರ್ಹ ಫಲಾನುಭವಿಗಳು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು.

ಪ್ರತಿ ದ್ವಿಚಕ್ರ ವಾಹನಕ್ಕೆ 70 ಸಾವಿರ ರೂ. ನಿಗದಿಗೊಳಿಸಲಾಗಿದ್ದು 50 ಸಾವಿರ ರೂ. ಸಬ್ಸಿಡಿ ಹಾಗೂ 20 ಸಾವಿರ ರೂ. ಬ್ಯಾಂಕ್ ಸಾಲ ಸೌಲಭ್ಯ ಇರಲಿದೆ. ಫಲಾನುಭವಿ ತಮಗೆ ಅನುಕೂಲವಾಗುವ ಯಾವುದೇ ಕಂಪನಿಯ ದ್ವಿಚಕ್ರ ವಾಹನ ಖರೀದಿಸಬಹುದು ಎಂದರು.

ಈಗಾಗಲೇ ಆನ್ ಲೈನ್ ಮೂಲಕ ಆಹ್ವಾನಿಸಲಾದ ಅರ್ಜಿಗಳಲ್ಲಿ ಈವರೆಗೆ 8,432 ಅರ್ಜಿಗಳು ಬಂದಿದ್ದು ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ಸಿಗಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ ಸುತ್ತೋಲೆ ಕಳಿಸುವಂತೆ ಹಾಗೂ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಅವರು ತಿಳಿಸಿದರು.

ಗಂಗಾಕಲ್ಯಾಣ ಯೋಜನೆ ಅನುಷ್ಠಾನ ಸಂಬಂಧ ಈಗಾಗಲೇ ಫಲಾನುಭವಿಗಳಿಂದ ಅರ್ಜಿ ಸ್ವೀಕೃತಿ ಪ್ರಕ್ರಿಯೆ ಮುಗಿದಿದ್ದು, ಶೀಘ್ರವೇ ಸಂಬಂಧಿಸಿದ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಮ್ಮ ಜಿಲ್ಲೆಯ ಆಯಾ ಕ್ಷೇತ್ರ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಕರೆದು ನವೆಂಬರ್ 30ರೊಳಗೆ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಬೇಕೆಂದು ಸೂಚಿಸಿದರು.

ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವ ಬಗ್ಗೆ ಕೆಲವು ದೂರುಗಳು ಕೇಳಿಬರುತ್ತಿದ್ದು ಅದನ್ನು ತಕ್ಷಣ ಸರಿಪಡಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಇಲಾಖೆ ಸಲಹೆಗಾರ ಇ.ವೆಂಕಟಯ್ಯ, ಇಲಾಖೆ ಆಯುಕ್ತ ಡಾ.ಕೆ.ರಾಕೇಶಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಉದಯಕುಮಾರ್ ಶೆಟ್ಟಿ ಸೇರಿದಂತೆ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | ನವಶಕ್ತಿ ಸಮಾವೇಶ | ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ಮಾಡಿದ್ದು ಕ್ರಾಂತಿಕಾರಿ ನಿರ್ಧಾರ ಎಂದ ಜೆ.ಪಿ. ನಡ್ಡಾ

Exit mobile version