ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್), ಅಕ್ಸೆಂಚರ್ ಸೇರಿದಂತೆ ಪ್ರಮುಖ ಐಟಿ ಕಂಪನಿಗಳಲ್ಲಿ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಹೊಸ ನೇಮಕಾತಿಯ ಪ್ರಮಾಣ ಗಣನೀಯ ಇಳಿಕೆಯಾಗಿದೆ.
ಹೀಗಿದ್ದರೂ, ಕೌಶಲಗಳನ್ನು ಹೊಂದಿರುವ ಪ್ರತಿಭಾವಂತರಿಗೆ ಪ್ರಬಲ ಬೇಡಿಕೆ ಮುಂದುವರಿದಿದೆ. ವಹಿವಾಟು ಮಂದಗತಿಯ ಕಾರಣಕ್ಕಾಗಿ ನೇಮಕಾತಿ ಇಳಿಕೆಯಾಗಿದ್ದಲ್ಲ, ನೇಮಕಾತಿಯ ಪ್ರಕ್ರಿಯೆಗಳಲ್ಲಿ ಬೇಡಿಕೆ ಸ್ಥಿರತೆಯತ್ತ ಸಾಗುತ್ತಿದೆ. ಜತೆಗೆ ಹಣದುಬ್ಬರ ಮತ್ತು ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಂಪನಿಗಳು ಎಚ್ಚರದ ಹೆಜ್ಜೆಯನ್ನಿಡುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ.
ಅಕ್ಸೆಂಚರ್ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕೇವಲ ೧೨,೦೦೦ ಮಂದಿಯನ್ನು ನೇಮಕ ಮಾಡಿದೆ. ಇದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ ಸರಾಸರಿ ೪೦,೦೦೦ ಮಂದಿಯನ್ನು ನೇಮಿಸಿತ್ತು. ಟಿಸಿಎಸ್ ಕೇವಲ ೧೪,೧೩೬ ಹೊಸಬರನ್ನು ನೇಮಕ ಮಾಡಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ ೨೬,೦೦೦ ಹೊಸಬರನ್ನು ನೇಮಿಸಿತ್ತು. ಎಚ್‌ಸಿಎಲ್ ಟೆಕ್ನಾಲಜೀಸ್ ೨,೦೮೯ ಮಂದಿಯನ್ನು ನೇಮಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ೯,೬೦೦ ಮಂದಿಯನ್ನು ನೇಮಿಸಿತ್ತು.
ಪ್ರಸಕ್ತ ಸಾಲಿನಲ್ಲಿ ೪೦,೦೦೦ ಹೊಸಬರ ನೇಮಕಾತಿಯ ಗುರಿಯನ್ನು ಹೊಂದಿದ್ದರೂ, ಸದ್ಯಕ್ಕೆ ನೇಮಕಾತಿ ಪ್ರಕ್ರಿಯೆ ಟಿಸಿಎಸ್‌ನಲ್ಲಿ ನಿಧಾನ ಗತಿಯಲ್ಲಿದೆ ಎಂದು ಸಿಇಒ ರಾಜೇಶ್ ಗೋಪಿನಾಥನ್ ತಿಳಿಸಿದ್ದಾರೆ. ಹೀಗಿದ್ದರೂ, ಐಟಿ ವಲಯದ ಬೇಡಿಕೆ ಪ್ರಬಲವಾಗಿಯೇ ಮುಂದುವರಿದಿದೆ ಎಂದಿದ್ದಾರೆ.