ಬೆಂಗಳೂರು: ಹೊಸ ವರ್ಷ 2023 (New year 2023) ಇನ್ನೇನು ಬರಲಿದೆ. ರಾಜ್ಯ ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿರುವವರಿಗೆ ಈ ನೂತನ ವರ್ಷ ಬಹಳ ಮಹತ್ವದ್ದಾಗಿರಲಿದೆ. ವರ್ಷದ ಆರಂಭದಲ್ಲಿಯೇ ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಒಂದರ ಹಿಂದೊಂದರಂತೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮತ್ತು ರಾಜ್ಯ ಪೊಲೀಸ್ ಇಲಾಖೆ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿಯೇ ಹಲವು ಪರೀಕ್ಷೆಗಳನ್ನು ನಡೆಸಲಿವೆ. ಇದಲ್ಲದೆ, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮತ್ತು ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಕೂಡ ನಿರಂತರವಾಗಿ ಪರೀಕ್ಷೆ ನಡೆಸಲಿವೆ.
ಯಾವೆಲ್ಲಾ ಪರೀಕ್ಷೆ ನಡೆಯಲಿದೆ?
ಕೆಪಿಎಸ್‌ಸಿ: ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ ಎ, ಬಿ ಮತ್ತು ಸಿ ವೃಂದದ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಹಲವಾರು ಪರೀಕ್ಷೆ ನಡೆಸಲಿದ್ದು, ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.
ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ವಿವಿಧ ಗ್ರೂಪ್ “ಸಿ” ಹುದ್ದೆಗಳಿಗೆ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜಕರ ಹುದ್ದೆಗಳಿಗೆ ಜನವರಿ 21 ಮತ್ತು 22 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.
ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಫೆಬ್ರವರಿ 25 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತರರ ಹುದ್ದೆಗಳಿಗೆ ಫೆಬ್ರವರಿ 26 ರಂದು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯಕ ಸಾಂಖ್ಯಿಕ ಅಧಿಕಾರಿ ಮತ್ತು ಸಂಖ್ಯಿಕ ನಿರೀಕ್ಷಕರ ಹುದ್ದೆಗಳಿಗೆ ಹಾಗೂ ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರ ಹುದ್ದೆಗಳಿಗೆ ಮಾರ್ಚ್ 18 ಮತ್ತು 19 ರಂದು ಪರೀಕ್ಷೆ ನಡೆಯಲಿದೆ. ಈ ಹುದ್ದೆಗಳಿಗೆ ಏಪ್ರಿಲ್ 2 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.
ಜಲ ಸಂಪನ್ಮೂಲ ಇಲಾಖೆಯಲ್ಲಿನ ಕಿರಿಯ ಎಂಜಿನಿಯರ್ (ಸಿವಿಲ್ ಮತ್ತು ಮೆಕ್ಯಾನಿಕಲ್) ಹಾಗೂ ರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಏಪ್ರಿಲ್ 29 ಮತ್ತು 30 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.
ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಕೆಇಎ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಬೀಜ ನಿಗಮ ನಿಯಮಿತ (KSSCL)ದಲ್ಲಿನ ಸಹಾಯಕ ವ್ಯವಸ್ಥಾಪಕರ ಹಾಗೂ ಹಿರಿಯ/ ಕಿರಿಯ/ ಬೀಜ ಸಹಾಯಕರು ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಜನವರಿ 29, ಫೆಬ್ರವರಿ2, 3, 4 ಮತ್ತು 12 ರಂದು ಪರೀಕ್ಷೆ ನಡೆಸಲಿದೆ.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿನ ಪಶು ವೈದ್ಯಕೀಯ ಪರಿವೀಕ್ಷಕರ ಹುದ್ದೆಗಳಿಗೆ ಜನವರಿ 29 ಮತ್ತು ಫೆಬ್ರವರಿ 12 ರಂದು ನಡೆಸಲಾಗುತ್ತದೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಎಂಜಿನಿಯರ್, ಜೂನಿಯರ್ ಎಂಜಿನಿಯರ್ ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳಿಗೆ ಜನವರಿ 29 ಫೆಬ್ರವರಿ 5, 6,7 ಹಾಗೂ 12 ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿನ ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ನೇಮಕಕ್ಕೆ ಜನವರಿ30 ಹಾಗೂ ಫೆಬ್ರವರಿ1 ಮತ್ತು 12 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಫೆಬ್ರವರಿ 12 ರಂದು ಬಹುತೇಕವಾಗಿ ಎಲ್ಲ ಹುದ್ದೆಗಳಿಗೂ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.
ಕೆಇಎ ನಡೆಸುವ ಪರೀಕ್ಷೆಗಳ ವೇಳಾಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪೊಲೀಸ್ ಇಲಾಖೆ : ಕರ್ನಾಟಕ ಪೊಲೀಸ್ ಇಲಾಖೆಯು ಸಶಸ್ತ್ರ ಮೀಸಲು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಆರ್‌ಎಸ್‌ಐ, ಸಿಎಆರ್/ಡಿಎಆರ್) (ಪುರುಷ) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ (KSP Recruitment 2022) ಜನವರಿ 8 ರಂದು ಲಿಖಿತ ಪರೀಕ್ಷೆ ನಡೆಸಲಿದೆ.
ಈ ಪರೀಕ್ಷೆ ನಡೆದ ನಂತರ ಕೆಎಸ್‌ಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ 63 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಅಕ್ರಮದ ಕಾರಣದಿಂದಾಗಿ ರದ್ದುಗೊಂಡಿರುವ 545 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಕ್ಕೂ ನಂತರ ಮರು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ಇದನ್ನೂ ಓದಿ| UGC NET 2023 | ಫೆಬ್ರವರಿ 21 ರಿಂದ ನೆಟ್ ಎಕ್ಸಾಮ್; ಅರ್ಜಿ ಆಹ್ವಾನಿಸಿದ ಎನ್‌ಟಿಎ