ಬೆಂಗಳೂರು: ನಿರೀಕ್ಷೆಯಂತೆ ಪಿಎಸ್ಐ ಮರುಪರೀಕ್ಷೆ ಬಹಳ ಸುಗಮವಾಗಿ ನಡೆದಿದೆ. ಇದರ ಬಳಿಕ 403 ಹುದ್ದೆಗಳ ಆಯ್ಕೆಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ನಂತರ 660 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ (PSI Recruitment) ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯನ್ನು(ಜ.23ರಂದು) 54 ಸಾವಿರ ಅಭ್ಯರ್ಥಿಗಳು ಬರೆಯಬೇಕಿತ್ತು. ಕೆಲವರು ಗೈರಾಗಿದ್ದು, ಶೇ.65ರಿಂದ 70ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಇದರ ಬಳಿಕ 403 ಪಿಎಸ್‌ಐ ಹುದ್ದೆಗಳಿಗೆ ಪರೀಕ್ಷೆ ಮಾಡಬೇಕು. ಇದಕ್ಕೆ ಈಗಾಗಲೇ ದೈಹಿಕ ಪರೀಕ್ಷೆ ನಡೆದಿದೆ. ತದನಂತರ 660 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪಿಎಸ್‌ಐ ಮರುಪರೀಕ್ಷೆಯನ್ನು ಸುಗಮವಾಗಿ ನಡೆಸಿರುವುದಕ್ಕೆ ಕೆಇಎಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ನೇಮಕಾತಿ ಪರೀಕ್ಷೆ ಜವಾಬ್ದಾರಿಯನ್ನು ಕೂಡ ಕೆಇಎ ಅವರಿಗೇ ವಹಿಸಬೇಕು ಎಂದುಕೊಂಡಿದ್ದೇವೆ. 660 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Job Alert: ಭಾರತೀಯ ರೈಲ್ವೆಯಲ್ಲಿದೆ 5,696 ಸಹಾಯಕ ಲೋಕೋ ಪೈಲಟ್ ಹುದ್ದೆ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ
ಸದ್ಯ ಎರಡೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡರೆ 948 ಸಬ್ ಇನ್‌ಸ್ಪೆಕ್ಟರ್‌ಗಳು ಲಭ್ಯವಾಗುತ್ತಾರೆ. ಇದಾದ ಮೇಲೆ 660 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಆಯ್ಕೆ ನಡೆಯಬೇಕಿದೆ. ಒಟ್ಟಾರೆ ಇನ್ನೆರಡು ವರ್ಷದಲ್ಲಿ ಇವೆಲ್ಲವನ್ನು ಕೂಡ ಮಾಡಬೇಕಾಗುತ್ತದೆ. ಈಗ ಅಭ್ಯರ್ಥಿಗಳನ್ನು ಸೆಲೆಕ್ಷನ್ ಮಾಡಿ ಟ್ರೈನಿಂಗ್‌ಗೆ ಒಂದು ವರ್ಷ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.
ಕಲಬುರಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ವಿಚಾರಕ್ಕೆ ಮಾತನಾಡಿ, ಪ್ರಕರಣದಲ್ಲಿ ಈಗಾಗಲೇ ನಾಲ್ಕು ಜನರನ್ನು ಬಂಧಿಸಿದ್ದೇವೆ. ಇದರ ಹಿಂದಿನ ಉದ್ದೇಶ ಏನು ಎಂಬುದನ್ನು ತನಿಖೆ ಮಾಡಬೇಕು. ಈ ರೀತಿ ಘಟನೆಯಾದಾಗ ಯಾವುದಾದರೂ ಉದ್ದೇಶ ಇದ್ದೇ ಇರುತ್ತದೆ. ಅವರ ಉದ್ದೇಶ ಏನು ಎಂಬುವುದನ್ನು ತಿಳಿದುಕೊಳ್ಳಬೇಕು. ಅದಕ್ಕೆ ಯಾರಾದರೂ ಕುಮ್ಮಕ್ಕು ನೀಡಿದ್ದಾರಾ ಎಂಬ ಬಗ್ಗೆ ತನಿಖೆ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ | Job Alert: ಬ್ಯಾಂಕ್ ಆಫ್ ಬರೋಡಾದ 250 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಬಿಜೆಪಿ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ, ಬಹುಶಃ ಬಿಜೆಪಿ ಅವರಿಗೆ ಯಾರು ಈ ಕೃತ್ಯ ಮಾಡಿದ್ದಾರೆ ಎಂಬುವುದು ಗೊತ್ತಾದ ಮೇಲೆ ಸುಮ್ಮನಾಗಬಹುದು ಎಂದು ಅನಿಸುತ್ತದೆ. ನಾನು ಯಾವುದೇ ಊಹಾತ್ಮಕವಾಗಿ ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಅಂತ ಹೇಳಲ್ಲ. ಯಾರು ಹೇಳಿ ಕೊಟ್ಟಿದ್ದಾರೆ ಇದೆಲ್ಲವನ್ನು ಕೂಡ ನಾವು ಪರಿಶೀಲನೆ ಮಾಡಬೇಕು. ಹಾಗಾಗಿ ಸಾರ್ವಜನಿಕವಾಗಿ ಯಾರು ಅಂತ ಹೇಳುವುದಕ್ಕೆ ಬರುವುದಿಲ್ಲ ಎಂದು ಹೇಳಿದರು.