ನವ ದೆಹಲಿ: ಸಶಸ್ತ್ರ ಸೇನೆಯಿಂದ ನಿವೃತ್ತರಾದವರಿಗೆ ಕೊಡಬೇಕಾಗಿರುವ ಪಿಂಚಣಿಯ (pensions) ಬಾಕಿಯನ್ನು ಕೂಡಲೇ ವಿತರಿಸಬೇಕು ಎಂದು ಸುಪ್ರೀಂಕೋರ್ಟ್ ( Supreme Court) ತಾಕೀತು ಮಾಡಿದೆ.
ಕಳೆದೊಂದು ತಿಂಗಳಿನಲ್ಲಿ ಎರಡನೇ ಬಾರಿಗೆ ಈ ವಿಷಯವನ್ನು ಸರ್ವೋಚ್ಚ ನ್ಯಾಯಾಲಯವು ಪರಿಗಣಿಸಿರುವುದು ಗಮನಾರ್ಹ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮೂರು ಸದಸ್ಯರ ಪೀಠವು, ಸೇನಾ ಸಿಬ್ಬಂದಿಗೆ ಪಿಂಚಣಿ ವಿತರಣೆಯಲ್ಲಿ (OROP Scheme) ಉಂಟಾಗುತ್ತಿರುವ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ಸೇನಾ ಸಿಬ್ಬಂದಿಗೆ ಪಿಂಚಣಿ ಬಾಕಿಯನ್ನು ವಿತರಿಸಲೇಬೇಕು ಎಂಬುದು ನಮ್ಮ ಕಾಳಜಿಯಾಗಿದೆ. ಇದುವರೆಗೆ 4 ಲಕ್ಷ ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ವಿದ್ಯಮಾನಗಳ ಬಗ್ಗೆ ವಿವರಣೆ ನೀಡಬೇಕು ಎಂದು ಅಟಾರ್ನಿ ಜನರಲ್ ಅವರಿಗೆ ಸುಪ್ರೀಂಕೋರ್ಟ್ ತಿಳಿಸಿದೆ.
ಕಳೆದ ತಿಂಗಳು ಕೂಡ ಸುಪ್ರೀಂಕೋರ್ಟ್ ಇದೇ ವಿಚಾರದಲ್ಲಿ ರಕ್ಷಣಾ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಒಆರ್‌ಒಪಿ ವಿಳಂಬವಾಗುತ್ತಿರುವುದಕ್ಕೆ ಜನವರಿ 20ರಂದು ನೀಡಿರುವ ವಿವರಣೆಯನ್ನು ಹಿಂತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.