ಬಾಗಲಕೋಟೆ: ಕಿರಿಯ ಸಹಾಯಕ ಹುದ್ದೆಗಳಿಗೆ ಕೆಪಿಟಿಸಿಎಲ್ ವತಿಯಿಂದ ಭಾನುವಾರ ನಡೆಯಬೇಕಾಗಿದ್ದ ಪರೀಕ್ಷೆ ಸಮಯ ಹತ್ತಿರವಾದರೂ ಪರೀಕ್ಷಾ ಕೊಠಡಿ ಬಾಗಿಲು ತೆರೆಯದ್ದಕ್ಕೆ ಆಕ್ರೋಶಕೊಂಡ ಅಭ್ಯರ್ಥಿಗಳು ಹಾಗೂ ಪೋಷಕರು ಬೀಗ ಒಡೆದು ಒಳನುಗ್ಗಿದ್ದಾರೆ.
ಕೆಪಿಟಿಸಿಎಲ್ ಕಿರಿಯ ಸಹಾಯಕರ ಹುದ್ದೆಗೆ ಇಳಕಲ್ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಬೇಕಿತ್ತು. ಭಾನುವಾರ ಬೆಳಗ್ಗೆ 10.30ಕ್ಕೆ ಪರೀಕ್ಷೆಗಳು ಆರಂಭವಾಗಬೇಕಿತ್ತು.
ಬೆಳಗ್ಗೆ 9 ಗಂಟೆಗೇ ಅಭ್ಯರ್ಥಿಗಳು ಹಾಗೂ ಪೋಷಕರು ಸಂಸ್ಥೆಯ ಹೊರಗೆ ಜಮಾಯಿಸಿದ್ದರು. 10 ಗಂಟೆ ಕಳೆದರೂ ಸಂಸ್ಥೆಯ ಸಿಬ್ಬಂದಿ ಆಗಮಿಸಿ ಕೊಠಡಿಗಳ ಬಾಗಿಲು ತೆರೆಯಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ಇದಕ್ಕೆ ಉತ್ತರ ನೀಡಲೇ ಇಲ್ಲ. ಕೊಠಡಿಯ ಕೀಲಿಕೈ ತಂದಿಲ್ಲ ಎಂದು ಸಿಬ್ಬಂದಿ ಸಬೂಬು ಹೇಳಿದರು. ಈ ವೇಳೆ ಸಿಬ್ಬಂದಿ ಹಾಗೂ ಪೋಷಕರ ನಡುವೆ ವಾಗ್ವಾದ ನಡೆಯಿತು.
ಪರೀಕ್ಷೆ ನಡೆಸಲು ಆಗಮಿಸಿದ್ದ ಸಿಬ್ಬಂದಿ ಸಹ ಪ್ರಶ್ನೆಪತ್ರಿಕೆಗಳನ್ನು ಹಿಡಿದು ಅಸಹಾಯಕರಾಗಿ ನಿಂತಿದ್ದರು. ಈ ವೇಳೆ ಆಕ್ರೋಶಗೊಂಡ ಪೋಷಕರು ಹಾಗೂ ಅಭ್ಯರ್ಥಿಗಳು ಕಲ್ಲು ಹಾಗೂ ಸುತ್ತಿಗೆಗಳನ್ನು ಬಳಸಿ ಬೀಗವನ್ನು ಒಡೆದಿದ್ದಾರೆ. ಪರೀಕ್ಷೆ ನಡೆಸಬೇಕಾದವರ ಬೇಜವಾಬ್ದಾರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಂತರ ತಡವಾಗಿ ಪರೀಕ್ಷೆಗಳು ಆರಂಭವಾದವು.
ಈ ಕುರಿತು ಪ್ರತಿಕ್ರಿಯಿಸಿರುವ ಪೋಷಕ ಡಾ. ನದಾಫ್, ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ ಒಂಭತ್ತು ಗಂಟೆಯೊಳಗೆ ಆಗಮಿಸುವಂತೆ ತಿಳಿಸಿದ್ದರು. ಅದರಂತೆ ಎಂಟು ಗಂಟೆಗೇ ಬಂದಿದ್ದೆವು. ಕೀಲಿಕೈ ಕಳೆದುಹೋಗಿದೆ ಎಂದು ಸಿಬ್ಬಂದಿ ಸಬೂಬು ಹೇಳಿದರು. ಇಂತಹ ನಿರ್ಲಕ್ಷ್ಯದಲ್ಲಿ ಪರೀಕ್ಷೆ ನಡೆಸಿದ್ದನ್ನು ನಾವು ಕಂಡಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ | ಜುಲೈನಲ್ಲಿ ಕೆಪಿಟಿಸಿಎಲ್‌ನ 1,550 ಹೊಸ ಹುದ್ದೆಗಳಿಗೆ ನೇಮಕ: ಸಚಿವ ವಿ.ಸುನೀಲ್ ಕುಮಾರ್ ಘೋಷಣೆ
ಪೂರ್ಣ ತೋಳಿನ ಕಟ್
ಪರೀಕ್ಷೆಗೆ ಬಂದ ಪರೀಕ್ಷಾರ್ಥಿಗಳ ಪೂರ್ಣ ತೋಳಿನ ಶರ್ಟ್‌ನ ತೋಳನ್ನು ಪರೀಕ್ಷಾ ಸಿಬ್ಬಂದಿ ಕತ್ತರಿಸಿ ಹಾಕಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಪರೀಕ್ಷಾ ಕೇಂದ್ರಕ್ಕೆ ಪೂರ್ಣ ತೋಳಿನ ಶರ್ಟ್ ಧರಿಸಿ ಬರುವಂತಿಲ್ಲ ಎಂದು ಪ್ರಾರಂಭದಲ್ಲೆ ತಿಳಿಸಲಾಗಿತ್ತು. ಆದರೆ ಅಭ್ಯರ್ಥಿಗಳು ಸರಿಯಾಗಿ ಗಮನಿಸದೆ ಪೂರ್ಣ ತೋಳಿನ ಶರ್ಟ್ ತೊಟ್ಟು ಬಂದರು. ಕೊಪ್ಪಳದ ಭಾಗ್ಯನಗರದಲ್ಲಿರುವ ನವಚೇತನ ಕಾಲೇಜ್‌ಗೆ ಬಂದವರನ್ನ ಸಿಬ್ಬಂದಿ ತಡೆದಿದ್ದಾರೆ. ಅರ್ಧ ತೋಳಿನ ಶರ್ಟ್ ಧರಿಸಿಬರುವಂತೆ ಸಿಬ್ಬಂದಿ ಸೂಚಿಸಿದರು. ಆದರೆ ಬೇರೆ ಶರ್ಟ್ ಇಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ತೋಳನ್ನು ಕತ್ತರಿಸಿ ಹೊರಗೆ ಬಿಸಾಡಿ ಪರೀಕ್ಷೆಗೆ ತೆರಳಿದ್ದಾರೆ.
ಇದನ್ನೂ ಓದಿ | Job Career | ಸರ್ಕಾರಿ ಉದ್ಯೋಗ ಪಡೆಯಲು ಈ ಎಲ್ಲ ಸಿದ್ಧತೆಗಳೂ ಬೇಕು!