ನೋಯ್ಡಾ: ಪ್ರೊಡಕ್ಷನ್ ಲಿಂಕ್ಡ್ ಇನ್‌ಸೆಂಟಿವ್ (Production-linked incentive) ಯೋಜನೆಯು (PLI Scheme) ಮೊಬೈಲ್ ಫೋನ್ ಉತ್ಪಾದನಾ ಉದ್ಯಮದಲ್ಲಿ 5,00,000 ಉದ್ಯೋಗಗಳ ಸೃಷ್ಟಿಗೆ ಕಾರಣವಾಗಲಿದೆ ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Union communications, electronics, and information technology minister Ashwini Vaishnaw) ಭರವಸೆ ವ್ಯಕ್ತಪಡಿಸಿದ್ದಾರೆ. ಉತ್ಪಾದನಾ ವಲಯವನ್ನು ಉತ್ತೇಜಿಸುವ ಮತ್ತು ಆಮದನ್ನು ಕಡಿಮೆ ಮಾಡುವ ಗುರಿಯನ್ನು ಭಾರತ ಸರ್ಕಾರದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆ ಹೊಂದಿದೆ.
ನೋಯ್ಡಾದ ಡಿಕ್ಸನ್ ಟೆಕ್ನಾಲಜೀಸ್ (Dixon Technologies’) ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಅವರು, ʼʼಭಾರತದಲ್ಲಿ ಬಳಸಲಾಗುವ ಮೊಬೈಲ್ ಫೋನ್‌ಗಳ ಪೈಕಿ ಶೇ. 99.2ರಷ್ಟು ಇಲ್ಲೇ ತಯಾರಾಗಿವೆʼʼ ಎಂದು ಹೇಳಿದ್ದಾರೆ. ಡಿಕ್ಸನ್ ಟೆಕ್ನಾಲಜೀಸ್‌ನ ಅಂಗಸಂಸ್ಥೆ ಪ್ಯಾಡ್ಜೆಟ್ ಎಲೆಕ್ಟ್ರಾನಿಕ್ಸ್ ಶಿಯೋಮಿಗಾಗಿ ಸ್ಮಾರ್ಟ್‌ಫೋನ್ ಮತ್ತು ಇತರ ಸಂಬಂಧಿತ ಉತ್ಪನ್ನಗಳನ್ನು ತಯಾರಿಸಲಿದೆ. ನೋಯ್ಡಾದ 2.7 ಲಕ್ಷ ಚದರ ಅಡಿ ಉತ್ಪಾದನಾ ಸ್ಥಳದಲ್ಲಿ 256 ಕೋಟಿ ರೂ. ವೆಚ್ಚದಲ್ಲಿ ಈ ಘಟಕ ಕಾರ್ಯ ನಿರ್ವಹಿಸಲಿದೆ. ಇಲ್ಲಿ ವಾರ್ಷಿಕವಾಗಿ 2,5,000,000 ಮೊಬೈಲ್ ಫೋನ್ ಉತ್ಪಾದನೆಯಾಗಲಿದೆ.
Our aim is – ‘Made In India’ है तो, world की best quality है…📱
— Ashwini Vaishnaw (@AshwiniVaishnaw) December 1, 2023
📍Dixon’s mobile manufacturing factory, Noida pic.twitter.com/6pO7cbRCRb
ಮುಂದಿನ 10-12 ತಿಂಗಳಲ್ಲಿ ಈ ಘಟಕ ಸಂಪೂರ್ಣವಾಗಿ ಕಾರ್ಯನಿರ್ವಹಿಸಿದ ನಂತರ ಕಂಪನಿಯು ವಾರ್ಷಿಕ 5,0,000,000 ಯುನಿಟ್ ಉತ್ಪಾದನಾ ಸಾಮರ್ಥ್ಯದ ಮತ್ತೊಂದು ಘಟಕ ಸ್ಥಾಪಿಸಲಿದೆ ಎಂದು ಎಂದು ಡಿಕ್ಸನ್ ಕಾರ್ಯನಿರ್ವಾಹಕ ಅಧ್ಯಕ್ಷ ಸುನಿಲ್ ವಚಾನಿ ಹೇಳಿದ್ದಾರೆ. “ಅಲ್ಲಿ ನಾವು ಕಂಪ್ಯೂಟರ್ ಹಾರ್ಡ್‌ವೇರ್‌ನಂತಹ ಇತರ ಉತ್ಪನ್ನಗಳನ್ನು ತಯಾರಿಸಲಿದ್ದೇವೆʼʼ ಎಂದು ಅವರು ತಿಳಿಸಿದ್ದಾರೆ.
ಕಂಪ್ಯೂಟರ್ ಹಾರ್ಡ್‌ವೇರ್ ತಯಾರಿಸಲು ಮತ್ತು ಜೋಡಿಸಲು ಅನುಮತಿ ನೀಡುವಂತೆ ಪ್ಯಾಡ್ಜೆಟ್ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ತಿಂಗಳು ಪಿಎಲ್ಐ 2.0 ಅಡಿಯಲ್ಲಿ ಅನುಮೋದಿಸಲಾಗಿತ್ತು. ಇದು ಚೀನಾದ ಕಂಪ್ಯೂಟರ್ ದೈತ್ಯ ಲೆನೊವೊಗೆ ಬಿಡಿಭಾಗಗಳನ್ನು ತಯಾರಿಸಿ ಕೊಡಲಿದೆ.
ʼʼಮೊಬೈಲ್ ಬಿಡಿಭಾಗಗಳ ಉತ್ಪಾದನೆಯಲ್ಲಿ ದೇಶೀಯ ಮೌಲ್ಯವರ್ಧನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆʼʼ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. “ಇದೀಗ 12 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗುತ್ತಿದೆ. ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 2022ರಲ್ಲಿ ಇದರ ಮೌಲ್ಯ 11.1 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತುʼʼ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಸಿಬಿಎಸ್‌ಇ 10, 12 ತರಗತಿ ಪರೀಕ್ಷೆಗೆ ಡಿವಿಷನ್, ಡಿಸ್ಟಿಂಕ್ಷನ್ ಘೋಷಣೆ ಇಲ್ಲ!
ಸೈಬರ್ ಕ್ರೈಮ್ ವಿರುದ್ಧ ಕ್ರಮ
ಇದೇ ವೇಳೆ ಸೈಬರ್ ಕ್ರೈಮ್ ಬಗ್ಗೆ ಮಾತನಾಡಿದ ಸಚಿವರು, ʼʼಸೈಬರ್ ಕ್ರೈಮ್‌ಗೆ ಸಂಬಂಧಿಸಿದಂತೆ ಇತ್ತೀಚೆಗೆ 350ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ನಾವು ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಜತೆಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಸೈಬರ್ ಅಪರಾಧಗಳ ಸಂಖ್ಯೆ ಕುಸಿದಿದೆ. ಮುಂದಿನ ಕೆಲವು ತಿಂಗಳಲ್ಲಿ ಇನ್ನೂ ಗಣನೀಯವಾಗಿ ಕಡಿಮೆಯಾಗಲಿವೆʼʼ ಎಂದು ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿಜಿಟಲ್ ಗುಪ್ತಚರ ಪ್ಲಾಟ್‌ಫಾರ್ಮ್ ಮೂಲಕ ವರದಿಯಾದ ಸೈಬರ್ ಅಪರಾಧ ಮತ್ತು ಹಣಕಾಸು ವಂಚನೆಗಳಲ್ಲಿ ಭಾಗಿಯಾಗಿರುವ ಏಳು ಮಿಲಿಯನ್ (70,00000) ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಇತ್ತೀಚೆಗೆ ತಿಳಿಸಿತ್ತು