ತುಮಕೂರು: ಇನ್ನೊಂದು ವಾರದಲ್ಲಿ ರಾಜ್ಯದಲ್ಲಿ 3500 ಪೊಲೀಸರ ನೇಮಕಕ್ಕೆ (Police recruitment) ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಹೇಳಿದರು. ತುಮಕೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ಈ ವಿಚಾರವನ್ನು ತಿಳಿಸಿದ್ದಾರೆ.
ʻʻಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ಗಮನದಲ್ಲಿದೆ. ರಾಜ್ಯದಲ್ಲಿ 15 ಸಾವಿರ ಹುದ್ದೆ ಖಾಲಿ ಇದೆ. ಇದಕ್ಕೆ ಈಗಾಗಲೇ ನೇಮಕಾತಿ ಪ್ರಕ್ರಿಯೆಗೆ ಕ್ರಮ ಕೈಗೊಂಡಿದ್ದೇವೆ. ಎಲ್ಲ ಸಿದ್ಧತೆಗಳು ನಡೆದಿವೆ. ಇನ್ನು ಒಂದು ವಾರದಲ್ಲಿ 3500 ಜನರ ನೇಮಕಾತಿ ಆರಂಭವಾಗಲಿದ್ದು, ಅಧಿಸೂಚನೆ ಹೊರಡಿಸಲಾಗುವುದು ʼʼ ಎಂದು ಸಚಿವರು ತಿಳಿಸಿದರು.
ಒಮ್ಮೆ 15,000 ಹುದ್ದೆಗಳನ್ನು ತುಂಬಿದರೆ ಮುಂದೆ ನಿವೃತ್ತಿಯಾದವರ ಜಾಗಕ್ಕೆ ಹೊಸ ನೇಮಕಾತಿ ಮಾಡಿಕೊಂಡು ಹೋದರೆ ಸಾಕಾಗುತ್ತದೆ. ಅದು ಬಳಿಕ ನಿರಾಳವಾಗಿ ನಿರಂತರವಾಗಿ ನಡೆದುಕೊಂಡು ಹೋಗುತ್ತದೆ ಎಂದು ಸಚಿವರು ಹೇಳಿದರು. ಸರ್ಕಾರ ಆದೇಶ ನೀಡಿದ ಬಳಿಕ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಯುತ್ತದೆ.
ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣಗಳು
ʻʻರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳು (Cyber crime case) ಹೆಚ್ಚಾಗುತ್ತಿರುವುದನ್ನು ಕೂಡಾ ಗಮನಿಸಿದ್ದೇವೆ. ಅದಕ್ಕಾಗಿ ವಿಶೇಷ ಗಮನ ನೀಡಲಾಗುತ್ತಿದೆ. ಯಾರೋ ಒಂದು ಪೋಸ್ಟ್ ಮಾಡಿ ಅದು ಸಮಾಜಕ್ಕೆ ಆತಂಕಕಾರಿಯಾಗಿದೆ ಎಂಬ ಮಾಹಿತಿ ಬಂದರೆ ಎಲ್ಲ ರೀತಿಯಲ್ಲೂ ಅದನ್ನು ಪರಿಶೀಲನೆ ಮಾಡಲಾಗುತ್ತದೆ. ಸಮುದಾಯದ ಭಾವನೆಗಳನ್ನು ಕೆರಳಿಸುವಂತಿದ್ದರೆ, ಅನಾಹುತಗಳಿಗೆ ದಾರಿ ಮಾಡಿ ಕೊಡುವಂತಿದ್ದರೆ, ಸಮಾಜದಲ್ಲಿ ದ್ವೇಷ ಬಿತ್ತುವಂತಿದ್ದರೆ ಅಂತಹ ಪೋಸ್ಟ್‌ಗಳನ್ನು ನಿಯಂತ್ರಿಸಲು ಮತ್ತು ಪೋಸ್ಟ್ ಮಾಡಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.
ತುಮಕೂರಿನ ಅಭಿವೃದ್ಧಿಗೆ ಸರ್ವ ಕ್ರಮ
ಗುರುವಾರ ತುಮಕೂರಿನ ಕಾಮಗಾರಿ, ನಗರಾಭಿವೃದ್ಧಿ ವಿಚಾರಗಳ ಬಗ್ಗೆ ಅಧಿಕಾರಿಗಳ ಜತೆ ಪರಮೇಶ್ವರ್ ಮಾತುಕತೆ ನಡೆಸಿದರು. ಸಭೆಯಲ್ಲಿ ಎಲ್ಲ ಹಿರಿಯ ಕಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ʻʻತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ. ಯೋಜನೆಯ ಉದ್ದೇಶ ಆಧುನಿಕವಾಗಿ ಪಟ್ಟಣಗಳಿಗೆ ಸೌಲಭ್ಯ ದೊರಕಬೇಕು ಅನ್ನೋದು. ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರಿಗೆ 1 ಸಾವಿರ ಕೋಟಿ ಮಂಜೂರು ಮಾಡಿದೆ. ಕೇಂದ್ರ ಸರ್ಕಾರ 50% ರಾಜ್ಯ ಸರ್ಕಾರ 50% ಹಣವನ್ನ ಬಿಡುಗಡೆ ಮಾಡಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ 45% ಹಣ ಬಿಡುಗಡೆ ಆಗಿದೆ. ರಾಜ್ಯ ಸರ್ಕಾರ 443 ಕೋಟಿ ಮಂಜೂರು ಮಾಡಿದೆʼʼ ಎಂದು ಸಚಿವ ಪರಮೇಶ್ವರ್ ವಿವರಿಸಿದರು.
ʻʻಸ್ಮಾರ್ಟ್ ಸಿಟಿ ಯೋಜನೆಯಡಿ 170 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ತುಮಕೂರಿಗೆ ರಿಂಗ್ ರೋಡ್, ರಸ್ತೆ ಅಭಿವೃದ್ಧಿ ಕಾಮಗಾರಿ, ದೀಪಗಳ ಅಳವಡಿಕೆ, ಡ್ರೈನೇಜ್ ಅಳವಡಿಕೆ, ಬಸ್ ಸ್ಟಾಂಡ್, ಸಾರ್ವಜನಿಕ ಗ್ರಂಥಾಲಯವನ್ನು ಆಧುನಿಕವಾಗಿ ಕಟ್ಟಲಾಗಿದೆ. ಕ್ರೀಡೆಗೆ ಮಹತ್ವ ಕೊಡಲು ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ಆಧುನೀಕರಣಗೊಳಿಸಲಾಗಿದೆʼʼ ಎಂದು ತಿಳಿಸಿದರು. ʻʻಸ್ಮಾರ್ಟ್ ಸಿಟಿ ಅಂದ್ರೆ ಕೇವಲ ರಸ್ತೆ ಚೆನ್ನಾಗಿರುತ್ತೆ ಅಂತ ಅಲ್ಲ, ಆಧುನಿಕರಣವಾಗಿ ಎಲ್ಲಾ ಸೌಲಭ್ಯಗಳು ಸಿಗ್ಬೇಕು. ಫ್ರೀ ವೈಫೈ ಸಿಗ್ಬೇಕು, ಉತ್ತಮ ಪರಿಸರಕ್ಕೆ ಗಿಡಗಳು ಇರ್ಬೇಕು, ಇನ್ನು ಕೆಲವು ಕಾಮಗಾರಿ ನಡಿತಿದೆ. ಈಗಾಗಲೇ 90% ಕೆಲಸ ಮುಗಿದಿದೆʼʼ ಎಂದು ಹೇಳಿದರು.
ಇದೇ ನವೆಂಬರ್ ಒಳಗೆ ಎಲ್ಲಾ ಕಾಮಗಾರಿ ಮುಗಿಸಬೇಕು ಅಂತ ನಾನು ಹೇಳಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.
ಇದನ್ನೂ ಓದಿ: PSI Scam: ಪಿಎಸ್‌ಐ ಹಗರಣದ 52 ಕಳಂಕಿತರು ಶಾಶ್ವತ ಡಿಬಾರ್, ಉಳಿದವರಿಗೆ ಒಲಿಯುತ್ತಾ ಅದೃಷ್ಟ?