ನವ ದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್‌ಒ, ತನ್ನ ನಿವೃತ್ತಿಯ ಉಳಿತಾಯ ಯೋಜನೆಗಳ ಸೌಲಭ್ಯವನ್ನು ಸ್ವ ಉದ್ಯೋಗಿಗಳಿಗೆ ಕೂಡ ವಿಸ್ತರಿಸಲು ಉದ್ದೇಶಿಸಿದೆ. (ವಿಸ್ತಾರ PF Info) ಈ ನಿಟ್ಟಿನಲ್ಲಿ ಇಪಿಎಫ್‌ಒ ಸೌಲಭ್ಯಗಳನ್ನು ಪಡೆಯಲು ಈಗ ಇರುವ ವೇತನ ಮಿತಿ ಮತ್ತು ಉದ್ಯೋಗಿಗಳ ಸಂಖ್ಯೆಯ ಮಿತಿಯ ನಿರ್ಬಂಧವನ್ನು ತೆರವುಗೊಳಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ.
ಇಪಿಎಫ್‌ಒ ಯೋಜನೆಗಳ ಸೌಲಭ್ಯ ಪಡೆಯಲು ಈಗಿನ ವೇತನ ಮಿತಿ ಮತ್ತು ಉದ್ಯೋಗಿಗಳ ಸಂಖ್ಯೆಯ ಮಿತಿಯನ್ನು ರದ್ದುಪಡಿಸಿದರೆ, ಸ್ವ ಉದ್ಯೋಗಿಗಳಿಗೂ ಇಪಿಎಫ್‌ಒದ ಭವಿಷ್ಯನಿಧಿ (ಪಿಎಫ್), ಪಿಂಚಣಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗಲಿದೆ.
ಈಗಿನ ಮಿತಿ ಏನು?: ಪ್ರಸ್ತುತ ಉದ್ಯೋಗಿಗಳ ಭವಿಷ್ಯನಿಧಿ ಸೌಲಭ್ಯವನ್ನು ಉದ್ಯೋಗಿಯ ೧೫,೦೦೦ ರೂ. ವೇತನದ ತನಕ ಕಡ್ಡಾಯವಾಗಿ ನೀಡಬೇಕು. ಹಾಗೂ ೨೦ಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಸಂಸ್ಥೆ ಮಾತ್ರ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (ಇಪಿಎಫ್) ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು. ಇಪಿಎಫ್‌ಒದಲ್ಲಿ ೫.೫ ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ.
ಮಿತಿ ರದ್ದುಪಡಿಸಿದರೆ ಲಾಭವೇನು?:
- ವೇತನ ಮತ್ತು ಉದ್ಯೋಗಿಗಳ ಸಂಖ್ಯೆಯ ಮಿತಿಯನ್ನು ರದ್ದುಪಡಿಸಿದರೆ ಸ್ವ ಉದ್ಯೋಗಿಗಳು ಕೂಡ ಇಪಿಎಫ್‌ಒದ ಭವಿಷ್ಯನಿಧಿ (ಪಿಎಫ್) ಮತ್ತು ಪಿಂಚಣಿ, ವಿಮೆಯನ್ನು ಪಡೆಯಬಹುದು.
- ಕಂಪನಿ ಅಥವಾ ಸಂಸ್ಥೆಗಳಲ್ಲಿ ಎಷ್ಟೇ ಸಂಖ್ಯೆಯ ಉದ್ಯೋಗಿಗಳಿದ್ದರೂ, ೨೦ಕ್ಕಿಂತ ಕಡಿಮೆ ಇದ್ದರೂ ಅವರೆಲ್ಲರಿಗೂ ಇಪಿಎಫ್‌ಒದ ಪಿಎಫ್, ಪಿಂಚಣಿ ಸಿಗಲಿದೆ.
- ಹೀಗಾಗಿ ಉದ್ಯೋಗಿಗಳ ಭವಿಷ್ಯನಿಧಿ ಕಾಯಿದೆ-೧೯೫೨ರಿಂದ ಈ ಎರಡು ನಿರ್ಬಂಧಗಳನ್ನು ತೆರವುಗೊಳಿಸಲು ಇಪಿಎಫ್‌ಒ ಪ್ರಸ್ತಾಪಿಸಿದೆ.
- ಈ ಮಿತಿಗಳನ್ನು ರದ್ದುಪಡಿಸಿದರೆ ಇಪಿಎಫ್‌ಒದ ನಿಧಿಯ ಸಂಗ್ರಹ ಹೆಚ್ಚಳವಾಗಲಿದೆ. ಪ್ರಸ್ತುತ ಇಪಿಎಫ್‌ಒ ೧೨ ಲಕ್ಷ ಕೋಟಿ ರೂ. ನಿಧಿಯನ್ನು ಹೊಂದಿದೆ.
ಇದನ್ನೂ ಓದಿ:ವಿಸ್ತಾರ PF Info| ಪಿಎಫ್‌ನ 1.59 ಲಕ್ಷ ಕೋಟಿ ರೂ. ಷೇರು ಹೂಡಿಕೆಯ ಮೌಲ್ಯ 2.26 ಲಕ್ಷ ಕೋಟಿ ರೂ.ಗೆ ಏರಿಕೆ