ನವ ದೆಹಲಿ: ಭಾರತೀಯ ಕಂಪನಿಗಳು ಇಂಧನ, ತ್ಯಾಜ್ಯ ನಿರ್ವಹಣೆ, ಹಸಿರು ಮೂಲ ಸೌಕರ್ಯ ವಲಯದ ಉದ್ದಿಮೆಗಳಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂದು ಸಮೀಕ್ಷೆ ತಿಳಿಸಿದೆ. ವೇದಾಂತ ಗ್ರೂಪ್, ಶ್ನೈಡರ್ ಎಲೆಕ್ಟ್ರಿಕ್, ಟಾಟಾ ಸ್ಟೀಲ್ ( vedanta grou̧p schneider electri̧c Tata steel) ಹಸಿರು ಮೂಲಸೌಕರ್ಯ ವಲಯದಲ್ಲಿ ಹಲವು (Green Jobs) ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪ್ರತಿಭಾವಂತರನ್ನು ನೇಮಿಸಿಕೊಳ್ಳುತ್ತಿವೆ.
ರ್ಯಾಂಡ್ಸ್ಟಡ್, ಮ್ಯಾನ್ ಪವರ್, ಟೀಮ್‌ಲೀಸ್, ಫೌಂಡ್‌ಇಟ್ ಮೊದಲಾದ ಕಂಪನಿಗಳು ಈ ವಿಷಯ ತಿಳಿಸಿವೆ. ಈ ವಲಯದಲ್ಲಿ ಶೈಕ್ಷಣಿಕವಾಗಿ ಕೌಶಲದ ಕಲಿಕೆಗೆ ಅವಕಾಶ ಸದ್ಯಕ್ಕೆ ಕಡಿಮೆ. ಆದರೆ ಉದ್ಯಮದಲ್ಲಿ ಗಳಿಸಿದ ಅನುಭವ, ತರಬೇತಿ ಇಲ್ಲಿ ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳುವಲ್ಲಿ ನಿರ್ಣಾಯಕವಾಗುತ್ತದೆ ಎಂದು ವೇದಾಂತ ಲಿಮಿಟೆಡ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಶ್ರೀವಾಸ್ತವ ತಿಳಿಸಿದ್ದಾರೆ.
ಉದಾಹರಣೆಗೆ ವೇದಾಂತ ಕಂಪನಿಯು ಪರಿಸರ, ಸಾಮಾಜಿಕ ಮತ್ತು ಆಡಳಿತ ವಿಷಯದ ಕ್ಷೇತ್ರದಲ್ಲಿ ಯುವ ಪ್ರತಿಭಾವಂತರ ಅನ್ವೇಷಣೆಯಲ್ಲಿದೆ. ಈ ನಿಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಕೂಡ ಕಂಪನಿ ಆಯೋಜಿಸಿದೆ. ಸೌರ ಶಕ್ತಿ, ಪವನ ಶಕ್ತಿ, ನವೀಕರಿಸಬಹುದಾದ ಇಂಧನ ಮೂಲಗಳ ವಲಯದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯ ಇದೆ. ಇದು ಹೇರಳ ಉದ್ಯೋಗಗಳನ್ನೂ ಸೃಷ್ಟಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದಾರೆ. ಗ್ರೀನ್ ಎನರ್ಜಿಯಲ್ಲಿ ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ಬಜೆಟ್ ಆದ್ಯತೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಭಾರತ ಈಗ ಉತ್ಪಾದಿಸುತ್ತಿರುವ ವಿದ್ಯುತ್‌ನಲ್ಲಿ 40% ವಿದ್ಯುತ್‌ನ ಮೂಲ ನವೀಕರಿಸಬಹುದಾದ ಇಂಧನ ಮೂಲಗಳಾಗಿವೆ. ಈ ಗುರಿಯನ್ನು ನಿಗದಿತ ಗಡುವಿಗಿಂತ 9 ವರ್ಷ ಮೊದಲೇ ಸಾಧಿಸಲಾಗಿದೆ. ತಂತ್ರಜ್ಞಾನ ಅಭಿವೃದ್ಧಿಯೇ ಇದಕ್ಕೆ ಕಾರಣ ಎಂದು ಕೇಂದ್ರ ಸರ್ಕಾರ ತಿಳಿಸಿದೆ.