Site icon Vistara News

ಸತತ ಎರಡನೇ ವರ್ಷ ಸಂಬಳ ಬೇಡ ಎಂದ ರಿಲಯನ್ಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ

ambani

ಮುಂಬಯಿ: ಬಿಲಿಯನೇರ್‌ ಉದ್ಯಮಿ ಮುಕೇಶ್‌ ಅಂಬಾನಿ ಅವರು ಸತತ ಎರಡನೇ ವರ್ಷ ವೇತನ ಪಡೆಯಲು ನಿರಾಕರಿಸಿದ್ದಾರೆ.

ದೇಶ ಹಾಗೂ ಆರ್ಥಿಕತೆಯನ್ನು ಕೋವಿಡ್‌ ಸಂಕಷ್ಟ ಕಾಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಕೂಡ ವೇತನ ಪಡೆಯದಿರಲು ಮುಕೇಶ್ ಅಂಬಾನಿ ನಿರ್ಧರಿಸಿದ್ದಾರೆ.‌ ೨೦೨೦-೨೧ ಮತ್ತು ೨೦೨೧-೨೨ರಲ್ಲಿ ಅಂಬಾನಿ ಸಂಬಳ ನಿರಾಕರಿಸಿದ್ದಾರೆ.

ಈ ಎರಡೂ ವರ್ಷಗಳಲ್ಲಿ ಅಂಬಾನಿ ಅವರು ರಿಲಯನ್ಸ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಂಪನಿಯೀಂದ ಯಾವುದೇ ಭತ್ಯೆ, ನಿವೃತ್ತಿ ನಿಧಿ, ಷೇರುಗಳ ಆಯ್ಕೆಯನ್ನು ಸ್ವೀಕರಿಸಿಲ್ಲ. ೨೦೦೮-೦೯ರಿಂದ ಅಂಬಾನಿ ಅವರು ವಾರ್ಷಿಕ ವೇತನಕ್ಕೆ ೧೫ ಕೋಟಿ ರೂ.ಗಳ ಮಿತಿಯನ್ನು ವಿಧಿಸಿದ್ದರು. ೨೦೧೯-೨೦ರಲ್ಲಿ ಕಳೆದ ೧೧ ವರ್ಷಗಳಂತೆ ೧೫ ಕೋಟಿ ರೂ. ವೇತನ ಪಡೆದಿದ್ದರು. ಕೋವಿಡ್‌ ಬಿಕ್ಕಟ್ಟಿನ ಬಳಿಕ ೨೦೨೦-೨೧ರಲ್ಲಿ ಹಾಗೂ ಇದೀಗ ೨೦೨೧-೨೨ರಲ್ಲಿ ಸಂಬಳ ಪಡೆದಿಲ್ಲ.

ಮುಕೇಶ್‌ ಅಂಬಾನಿಯವರ ಸೋದರ ಸಂಬಂಧಿಗಳಾದ ನಿಖಿಲ್‌ ಮತ್ತು ಹಿತೇಲ್‌ ಮೇಸ್ವಾನಿ ಅವರ ವೇತನ ೨೪ ಕೋಟಿ ರೂ.ಗಳಾಗಿದೆ. ಕಾರ್ಯಕಾರಿ ನಿರ್ದೇಶಕರಾದ ಪಿಎಂಎಸ್‌ ಪ್ರಸಾದ್‌ ೧೧.೮೯ ಕೋಟಿ ರೂ, ಕಪಿಲ್‌ ೪.೨೨ ಕೋಟಿ ರೂ. ವೇತನ ಗಳಿಸಿದ್ದಾರೆ.

Exit mobile version