Site icon Vistara News

SBI recruitment 2023: ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ

sbi jobs

ಆರ್. ಕೆ ಬಾಲಚಂದ್ರ, ಅಂಕಣಕಾರರು, ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ

ದೇಶದ ಪ್ರತಿಷ್ಠಿತ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ (SBI) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಅಪ್ರೆಂಟಿಸ್ ಶಿಪ್ (apprenticeship in SBI) (ಉದ್ಯೋಗ ತರಬೇತಿ) ಹುದ್ದೆಗಳಿಗೆ ಅಪ್ರೆಂಟಿಸ್ ಕಾಯಿದೆ 1961 ಅಡಿಯಲ್ಲಿ ಅಪ್ರೆಂಟಿಸ್‌ಗಳಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು (SBI recruitment 2023) ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಒಂದು ರಾಜ್ಯದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿಯಲ್ಲಿ ಅಭ್ಯರ್ಥಿಗಳು ಒಮ್ಮೆ ಮಾತ್ರ ಪರೀಕ್ಷೆಗೆ ಹಾಜರಾಗಬಹುದು. ಇದು ಒಂದು ವರ್ಷದ ಉದ್ಯೋಗ ತರಬೇತಿಯಾಗಿದೆ. ಈ ಹಿನ್ನೆಲೆಯಲ್ಲಿ, ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗೆ ನೀಡಲಾದ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸಬಹುದು.

ಕೇಂದ್ರಾಡಳಿತ ಪ್ರದೇಶಗಳ ಸಹಿತ ಅನೇಕ ರಾಜ್ಯಗಳಲ್ಲಿ ಅಪ್ರೆಂಟಿಸ್ ಶಿಪ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು. ಒಟ್ಟು ಹುದ್ದೆಗಳ ಸಂಖ್ಯೆ 6160. ಈ ಪೈಕಿ ಕರ್ನಾಟಕದಲ್ಲಿ 175 ಹುದ್ದೆಗಳಿದ್ದು 71 ಸಾಮಾನ್ಯ ವಿಭಾಗ, ಎಸ್ಸಿ 28, ಎಸ್ಟಿ 12, ಒಬಿಸಿ 47 ಹಾಗೂ ಆರ್ಥಿಕವಾಗಿ ಹಿಂದುಳಿದವರಿಗಾಗಿ 17 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ?

ಜಿಲ್ಲಾವಾರು ಹುದ್ದೆಗಳ ಸಂಖ್ಯೆ ಹೀಗಿದೆ:

ಬಾಗಲಕೋಟ-6, ಬಳ್ಳಾರಿ-9, ಬೆಳಗಾವಿ-8, ಬೆಂಗಳೂರು ಗ್ರಾಮಾಂತರ-2, ಬೆಂಗಳೂರು Urban-3,ಬೀದರ್-8, ಚಾಮರಾಜ ನಗರ-7, ಚಿಕ್ಕಮಗಳೂರು-4, ಚಿಕ್ಕಬಳ್ಳಾಪುರ-5, ಚಿತ್ರದುರ್ಗ-3, ದಕ್ಷಿಣ ಕನ್ನಡ-6, ದಾವಣಗೆರೆ-6, ಧಾರವಾಡ-3,ಗದಗ-3 ,ಹಾಸನ-8, ಹಾವೇರಿ-4 ,ಕಲ್ಬುರ್ಗಿ-8, ಕೊಡಗು-1,ಕೋಲಾರ-4, ಕೊಪ್ಪಳ-6, ಮಂಡ್ಯ-10,ಮೈಸೂರು-8,ರಾಯಚೂರು-8, ರಾಮನಗರ-4,ಶಿವಮೊಗ್ಗ-6, ತುಮಕೂರು-18,ಉಡುಪಿ-3,ಉತ್ತರಕನ್ನಡ-5,ವಿಜಯಪುರ-4,ಯಾದಗಿರಿ-5

ಅರ್ಜಿ ಸಲ್ಲಿಕೆಯ ವಿಧಾನ

ಎಸ್‌ಬಿಐನ ಅಧಿಕೃತ ವೆಬ್ಸೈಟ್ www.bank.sbi/web/careers ಲಾಗಿನ್ ಮಾಡಿಕೊಂಡು ಆನ್ಲೈನ್‌ನಲ್ಲಿಯೆ ಸೂಕ್ತ ಮಾಹಿತಿಗಳನ್ನ ಭರ್ತಿ ಮಾಡಬೇಕು ಹಾಗೂ ದಾಖಲೆಗಳ ಪ್ರತಿಗಳನ್ನು ಲಗತ್ತಿಸಬೇಕು. ಲಿಖಿತ ಧೃಢೀಕರಣ ಅಪ್‌ಲೋಡ್‌ ಮಾಡಿ ಶುಲ್ಕ ಪಾವತಿಸಬೇಕು.

ಶೈಕ್ಷಣಿಕ ಅರ್ಹತೆ ಏನಿರಬೇಕು?

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಅಂದರೆ ಕಲೆ, ವಾಣಿಜ್ಯ ವಿಜ್ಞಾನ ಅಥವಾ ಇನ್ನಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ

01.08.2023ಕ್ಕೆ, 20 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು 28 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ 20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಯು 02.08.1995 ಕ್ಕಿಂತ ಮೊದಲು ಮತ್ತು 01.08.2023 ಕ್ಕಿಂತ ನಂತರ ಹುಟ್ಟಿರಬಾರದು( ಎರಡೂ ದಿನಾಂಕಗಳು ಒಳಗೊಂಡಂತೆ) ಸರಕಾರದ ನಿಯಮದಂತೆ ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ/ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ/ ಮತ್ತು ವಿಕಲಚೇತನರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕವೆಷ್ಟು?

ಸಾಮಾನ್ಯ, ಒಬಿಸಿ ಮತ್ತು ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ 300 ರೂ. ಹಾಗೂ ಎಸ್‌ಸಿ/ ಎಸ್‌ಟಿ /ವಿಶೇಷ ಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳೆಲ್ಲಿ?

ರಾಜ್ಯದಲ್ಲಿ 9 ಪರೀಕ್ಷಾ ಕೇಂದ್ರಗಳಿವೆ: ಬೆಂಗಳೂರು, ಬೆಳಗಾವಿ, ಕಲಬುರಗಿ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 21, 2023
ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಯುವ ದಿನಾಂಕ: ಅಕ್ಟೋಬರ್/ನವೆಂಬರ್, 2023.

ಕನ್ನಡದಲ್ಲಿ ಪರೀಕ್ಷೆ

ಕರ್ನಾಟಕದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ ಜೊತೆಗೆ ಕನ್ನಡ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಎಸ್‌ಬಿಐ ನೀಡಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಭಾಷೆ ನಮೂದಿಸಬೇಕು. (ಪರೀಕ್ಷಾ ಸಂದರ್ಭದಲ್ಲಿ ಬದಲಾವಣೆಗೆ ಅವಕಾಶವಿಲ್ಲ ಎಂಬುದನ್ನ ಮರೆಯದಿರಿ.)

ನೆನಪಿಡಿ:

ಲಿಖಿತ ದೃಢೀಕರಣ:

ಕೈಬರಹದ ಘೋಷಣೆಯ ಪಠ್ಯ ಈ ರೀತಿಯಲ್ಲಿ ಬರೆದು ಅಪ್ಲೋಡ್ ಮಾಡಬೇಕು: ” (ಅಭ್ಯರ್ಥಿಯ ಹೆಸರು), ಈ ಮೂಲಕ ಅರ್ಜಿಯಲ್ಲಿ ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ. ನಿಜ ಮತ್ತು ಮಾನ್ಯವಾಗಿದೆ ಎಂದು ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಪೂರಕ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ.”

ಮೇಲೆ ತಿಳಿಸಿದ ಕೈಯಲ್ಲಿ ಬರೆದ ಲಿಖಿತ ಘೋಷಣೆಯು ಅಭ್ಯರ್ಥಿಯ ಕೈ ಬರಹದಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಬೇಕು ಮತ್ತು ಕ್ಯಾಪಿಟಲ್ ಲೆಟರ್‌ನಲ್ಲಿ ಇರಬಾರದು. ಇದನ್ನು ಬೇರೆಯವರು ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಬರೆದಿದ್ದರೆ, ಅರ್ಜಿಯನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಕ್ಯಾಪಿಟಲ್ ಲೆಟರಗಳಲ್ಲಿ ಹಾಕಿದ ಸಹಿಯನ್ನು ಸ್ವೀಕರಿಸಲಾಗುವುದಿಲ್ಲ. ಎಡ ಹೆಬ್ಬೆರಳಿನ ಗುರುತು ಸರಿಯಾಗಿ ಸ್ಕ್ಯಾನ್ ಮಾಡಬೇಕು ಮತ್ತು ಮಸುಕಾಗಿರಬಾರದು.

ಅಪ್ರೆಂಟಿಸ್ ಶಿಪ್‌ನಲ್ಲಿ ಆಯ್ಕೆಯಾದರೆ ಲಾಭವೇನು?

ಅಪ್ರೆಂಟಿಸ್‌ಗಳಾಗಿ ನೇಮಕಗೊಂಡರೆ ಅದು ಬ್ಯಾಂಕ್‌ನಲ್ಲಿ ಉದ್ಯೋಗ ನೀಡಿದೆ ಎಂದರ್ಥವಲ್ಲ. ಭವಿಷ್ಯದಲ್ಲಿ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಇದು ಸಹಾಯವಾಗುತ್ತದೆ.

ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಬ್ಯಾಂಕಿನ ನೇಮಕಾತಿ ನೀತಿಯ ಪ್ರಕಾರ ಜೂನಿಯರ್ ಅಸೋಸಿಯೇಟ್‌ಗಳ ನೇಮಕಾತಿಯಲ್ಲಿ ಅಪ್ರೆಂಟಿಸ್‌ಗಳಿಗೆ weightage /ಕೆಲ ಸಡಿಲಿಕೆಯನ್ನು ನೀಡಲಾಗುತ್ತದೆ. ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮತ್ತು ಅಭ್ಯರ್ಥಿಯ ಸಂಪೂರ್ಣ ತರಬೇತಿ ಅವಧಿಯಲ್ಲಿ ತೃಪ್ತಿದಾಯಕ ನಡವಳಿಕೆಗೆ ಒಳಪಟ್ಟಿರುವ ಅಪ್ರೆಂಟಿಸ್‌ಗಳಿಗೆ ಜೂನಿಯರ್ ಅಸೋಸಿಯೇಟ್‌ಗಳ ನೇಮಕಾತಿಯಲ್ಲಿ ಸಡಿಲಿಕೆಯನ್ನು ನೀಡಲಾಗುವುದು. ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಕೌಶಲ್ಯ ಮೌಲ್ಯಮಾಪನ ಪರೀಕ್ಷೆ (ಟ್ರೇಡ್ ಪರೀಕ್ಷೆ) ಮತ್ತು ಜಂಟಿ ರಾಷ್ಟ್ರೀಯತೆಯ ಅಪ್ರೆಂಟಿಸ್ ಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. SBI-NSDC/ BFSI-SSC ಜಂಟಿಯಾಗಿ ನೀಡಿದ ಅಪ್ರೆಂಟಿಸ್‌ ಶಿಪ್ ಪ್ರಮಾಣಪತ್ರ ಅಗತ್ಯ.

ತರಬೇತಿಯ ಅವಧಿ

ಒಂದು ವರ್ಷ ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ತಿಂಗಳಿಗೆ 15,000 ರೂ. ಸ್ಟೈಪೆಂಡ್ ನೀಡಲಾಗುತ್ತದೆ. ಇದರ ಹೊರತಾಗಿ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.

ಇದನ್ನೂ ಓದಿ: SBI PO Recruitment 2023: 2000 ಪ್ರೊಬೇಷನರಿ ಹುದ್ದೆ ನೇಮಕಕ್ಕೆ ಎಸ್‌ಬಿಐ ಅರ್ಜಿ ಆಹ್ವಾನ, ಸೆ.27 ಅಪ್ಲೈಗೆ ಕೊನೆ ದಿನ

ಭಾಷಾವಾರು ನೇಮಕಾತಿ

ರಾಜ್ಯದ ಸೀಟುಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಓದುವುದು, ಬರೆಯುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದರಲ್ಲಿ ಪ್ರವೀಣರಾಗಿರಬೇಕು. ಕನ್ನಡ ಸ್ಥಳೀಯ ಜ್ಞಾನದ ಪರೀಕ್ಷೆ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ನಡೆಸಲಾಗುವುದು. ಆನ್ಲೈನ್ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಇದನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ವಿಫಲರಾದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುವುದಿಲ್ಲ. 10ನೇ ಅಥವಾ 12ನೇ ತರಗತಿಯ ಮಾರ್ಕ್ ಶೀಟ್/ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಗಳು ನಿರ್ದಿಷ್ಟ ಪಡಿಸಿದ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡಿದ್ದರೆ ಭಾಷೆಯ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ ಈ ಕಾರಣದಿಂದ. ಅಭ್ಯರ್ಥಿಗಳನ್ನು ಸ್ಥಳೀಯ ಭಾಷೆಯ ನಿರರ್ಗಳತೆ ಆಧಾರದಲ್ಲಿ ಕೂಡ ನೇಮಕಾತಿ ನಡೆಸಲಾಗುತ್ತಿದೆ ಎಂದು ಎಸ್ಬಿಐ ತಿಳಿಸಿದೆ.

ಆಯ್ಕೆ ಹೇಗಿರಲಿದೆ?

ಆನ್ಲೈನ್‌ನಲ್ಲಿ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಜನರಲ್ /ಫೈನಾನ್ಶಿಯಲ್ ಅವೇರ್ನೆಸ್, ಜನರಲ್ ಇಂಗ್ಲಿಷ್, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಹಾಗೂ ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಅಪ್ಟಿಟ್ಯೂಡ್ ವಿಷಯಗಳಿಗೆ ತಲಾ 25 ಅಂಕಗಳಂತೆ 25 ಪ್ರಶ್ನೆಗಳನ್ನು ನೀಡಲಾಗುತ್ತದೆ. ಇದನ್ನು ಬರೆಯಲು ಪ್ರತಿ ಪತ್ರಿಕೆಗೆ 15 ನಿಮಿಷಗಳಂತೆ ಒಟ್ಟಾರೆ 1 ಗಂಟೆಯ ಅವಧಿ ನೀಡಲಾಗುತ್ತದೆ. ಇಂಗ್ಲಿಷ್‌ನಲ್ಲಿ ಪ್ರಶ್ನೆ ಇರುತ್ತದೆ. ಅಭ್ಯರ್ಥಿಗಳು ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಯಾವುದೇ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಆಬ್ಜೆಕ್ಟಿವ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು ತಪ್ಪು ಉತ್ತರಕ್ಕೆ ¼ ರಷ್ಟು ಋಣಾತ್ಮಕ ಮೌಲ್ಯ ಮಾಪನದಂತೆ ಅಂಕದ ಕಡಿತ ಕೂಡ ಇರಲಿದೆ.

ಗಮನಿಸಿ

  • ಒಮ್ಮೆ ಆಯ್ಕೆ ಮಾಡಿದ ಬಳಿಕ ಪರೀಕ್ಷಾ ಕೇಂದ್ರ ಬದಲಾಯಿಸಲು ಅವಕಾಶವಿಲ್ಲ.
  • ಸ್ವಂತ ಖರ್ಚಿನಲ್ಲಿಯೇ ಅಭ್ಯರ್ಥಿಗಳು ನೇಮಕ ಪ್ರಕ್ರಿಯೆಗಳಿಗೆ ಹಾಜರಾಗಬೇಕು.
  • ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯ.
  • ಅಂತಿಮವಾಗಿ ದಾಖಲಾತಿ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವೆಬ್ ವಿಳಾಸ sbi.co.in.

ಇದನ್ನೂ ಓದಿ: SBI recruitment 2023: ಎಸ್‌ಬಿಐಯಲ್ಲಿ 107 ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾರು ಸಲ್ಲಿಸಬಹುದು, ಅಂತಿಮ ದಿನಾಂಕ?

Exit mobile version