ಬೆಂಗಳೂರು: ಯುವಜನತೆಗೆ ಉದ್ಯೋಗ ಕೌಶಲ ತರಬೇತಿಯನ್ನು ನೀಡುತ್ತಿರುವ ಮೈಕ್ರೊಸಾಫ್ಟ್ ಹಾಗೂ ಲಿಂಕ್ಡ್‌ಇನ್ ಇದೀಗ ತಮ್ಮ ನೂತನ ಯೋಜನೆಯನ್ನು (Skills for jobs) ಘೋಷಿಸಿವೆ.
ಸ್ಕಿಲ್ಸ್ ಫಾರ್ ಜಾಬ್ಸ್ ಕಾರ್ಯಕ್ರಮದ ಅಡಿಯಲ್ಲಿ ಈ ಕಂಪನಿಗಳು 350 ಕೋರ್ಸ್‌ಗಳಿಗೆ ಉಚಿತ ಪ್ರವೇಶವನ್ನು ನೀಡುವುದರ ಜೊತೆಗೆ ಡಿಜಿಟಲ್ ಇಕಾನಮಿ ವಲಯದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಆರು ಪ್ರಮುಖ ಉದ್ಯೋಗಗಳಿಗೆ ಸಹಾಯವಾಗುವಂಥ ಆರು ಬಗೆಯ (ಕೆರಿಯರ್ ಎಸೆನ್ಶಿಯಲ್) ಪ್ರಮಾಣಪತ್ರವನ್ನು ಒದಗಿಸಲಿವೆ. ಅಲ್ಲದೆ 50 ಸಾವಿರ ಲಿಂಕ್ಡ್‌ಇನ್ ಲರ್ನಿಂಗ್ ಸ್ಕಾಲರ್‌ಶಿಪ್‌ಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸಹಕರಿಸಲಿದೆ.
2025ರ ವೇಳೆಗೆ ಮೈಕ್ರೊಸಾಫ್ಟ್ ಕಂಪನಿಯು ಒಂದು ಕೋಟಿ ಜನತೆಗೆ, ಬೇಡಿಕೆಯಲ್ಲಿರುವ ಉದ್ಯೋಗಗಳಿಗೆ ಅಗತ್ಯವಿರುವ ಕೌಶಲ ತರಬೇತಿಯನ್ನು ಹಾಗೂ ಪ್ರಮಾಣಪತ್ರವನ್ನು ನೀಡಿ ಸಹಾಯ ಮಾಡುವ ಗುರಿ ಹೊಂದಿದೆ.
ಕೌಶಲಕ್ಕೆ ಸಂಬಂಧಿಸಿದಂತೆ ಈ ಎರಡು ಕಂಪನಿಗಳು ಘೋಷಿಸಿರುವ ಈ ಉಪಕ್ರಮದಿಂದಾಗಿ, ಪ್ರಪಂಚದಾದ್ಯಂತ ಇರುವ 8 ಕೋಟಿಗೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಡಿಜಿಟಲ್ ಕೌಶಲ್ಯ ಸಿಗುವ ನಿರೀಕ್ಷೆ ಇದೆ. ಇದುವರೆಗೆ ಮೈಕ್ರೊಸಾಫ್ಟ್ ಸಂಸ್ಥೆಯು ಲಿಂಕ್ಡ್‌ಇನ್ ಮೂಲಕ ಏಷ್ಯಾದ 1.4 ಕೋಟಿ ವಿದ್ಯಾರ್ಥಿಗಳನ್ನು ತಲುಪಿದೆ. ಅದರಲ್ಲಿ 73 ಲಕ್ಷ ವಿದ್ಯಾರ್ಥಿಗಳು ಭಾರತದವರೇ ಆಗಿದ್ದಾರೆ.
ನೂತನವಾಗಿ ಪ್ರಾರಂಭಿಸಿರುವ ಕೋರ್ಸ್‌ಗಳನ್ನು ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ಪಾನಿಶ್, ಪೋರ್ಚುಗೀಸ್, ಚೈನೀಸ್, ಜಪಾನೀಸ್ ಭಾಷೆಗಳಲ್ಲಿ ನೀಡಲಾಗುವುದು. ಲಿಂಕ್ಡ್‌ಇನ್ ಹಾಗೂ ಬರ್ನಿಂಗ್ ಗ್ಲಾಸ್ ಇನ್‌ಸ್ಟಿಟ್ಯೂಟ್‌ನ ಅಂಕಿ ಅಂಶಗಳನ್ನು ಆಧರಿಸಿ ಮೈಕ್ರೊಸಾಫ್ಟ್, ಬೇಡಿಕೆಯಲ್ಲಿರುವ ಕೆಲವು ಪ್ರಮುಖ ಉದ್ಯೋಗಗಳ ಪಟ್ಟಿಯನ್ನು ಮಾಡಿದೆ: ಅಡ್ಮಿನಿಸ್ಟ್ರೇಟಿವ್ ಪ್ರೋಫೆಷನಲ್ಸ್, ಪ್ರಾಜೆಕ್ಟ್ ಮ್ಯಾನೇಜರ್, ಬ್ಯುಸಿನೆಸ್ ಅನಾಲಿಸ್ಟ್, ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್, ಸಾಫ್ಟ್‌ವೇರ್ ಡೆವಲಪರ್/ಡಾಟಾ ಅನಾಲಿಸ್ಟ್.
ಭಾರತ ಎದುರಿಸುತ್ತಿರುವ ಉದ್ಯೋಗ ಸವಾಲುಗಳಿಗೆ ಡಿಜಿಟಲ್ ಮಾರ್ಗದಲ್ಲಿ ಕೌಶಲ ಬೆಳೆಸುವುದು ಉತ್ತಮ ಪರಿಹಾರವಾಗಲಿದೆ. ಭಾರತದ ಯುವ ಜನತೆಗೆ ಕೌಶಲ ಕಲಿಸುವ ಉದ್ದೇಶದಿಂದ ಮೈಕ್ರೊಸಾಫ್ಟ್ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬರುತ್ತಿದೆ ಎಂದು ಮೈಕ್ರೊಸಾಫ್ಟ್ ಇಂಡಿಯಾದ ರಾಷ್ಟ್ರೀಯ ತಾಂತ್ರಿಕ ಅಧಿಕಾರಿಯಾದ ಡಾ.ರೋಹಿಣಿ ಶ್ರೀವತ್ಸ ಹೇಳಿದ್ದಾರೆ. ಕೋರ್ಸ್‌ಗಳು opportunity.linkedin.com ನಲ್ಲಿ ಲಭ್ಯವಿವೆ. ಮೈಕ್ರೊಸಾಫ್ಟ್ ಅಭಿವೃದ್ಧಿ ಪಡಿಸಿದ ಕೋರ್ಸ್‌ಗಳು ಮೈಕ್ರೊಸಾಫ್ಟ್ ಕಮ್ಯುನಿಟಿ ಟ್ರೇನಿಂಗ್ (MCT), ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಂ (LMS)ನಲ್ಲಿ ಲಭ್ಯವಿವೆ ಎಂದು ತಿಳಿಸಿದ್ದಾರೆ.