Site icon Vistara News

SSC CGL 2022 | ಎಸ್‌ಎಸ್‌ಸಿಯ ಸಿಜಿಎಲ್ ಪರೀಕ್ಷೆ ಬಗ್ಗೆ ನಿಮಗೆಷ್ಟು ಗೊತ್ತು?

SSC CGL 2022

ಏನಿದು ಸಿಜಿಎಲ್‌ ಪರೀಕ್ಷೆ?
ಭಾರತ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆ, ಸಂಸ್ಥೆಗಳಿಗೆ ಅಗತ್ಯವಾಗಿರುವ ಸಿಬ್ಬಂದಿಯನ್ನು ನೇಮಕ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಪ್ರತಿ ವರ್ಷ ಪದವಿ ವಿದ್ಯಾರ್ಹತೆಯ ಹುದ್ದೆಗಳಿಗೆ ಒಟ್ಟಾಗಿ ನೇಮಕ ಮಾಡುವ ಉದ್ದೇಶದಿಂದ ನಡೆಸುವ ಪರೀಕ್ಷೆಯೇ ‘ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಎಗ್ಸಾಮ್’. ಇದು ‘ಸಿಜಿಎಲ್’ (SSC CGL 2022) ಪರೀಕ್ಷೆ ಎಂದೇ ಪ್ರಸಿದ್ಧಿ ಪಡೆದಿದೆ.

ಇಲಾಖೆ, ಸಂಸ್ಥೆಗಳ ಬೇಡಿಕೆಯನ್ನು ನೋಡಿಕೊಂಡು ಅಗತ್ಯವಿರುವಷ್ಟು ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ಮಾಡುವ ಕೆಲಸವನ್ನು ಎಸ್‌ಎಸ್‌ಸಿ ಮಾಡುತ್ತದೆ. ಪ್ರತಿ ವರ್ಷ ಕೇಂದ್ರ ಸರ್ಕಾರದ ಅತಿ ಹೆಚ್ಚು ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ನಡೆಯುವುದರಿಂದ ಇದನ್ನು ‘ಅತಿದೊಡ್ಡ ಪರೀಕ್ಷೆ’, ‘ಪ್ರತಿಷ್ಠಿತ ಪರೀಕ್ಷೆ’ ಎಂದೆಲ್ಲಾ ಬಣ್ಣಿಸಲಾಗುತ್ತದೆ. ಈ ವರ್ಷ ಸುಮಾರು 20 ಸಾವಿರ ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ಈಗಾಗಲೇ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ಈ ಹುದ್ದೆಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಉದ್ಯೋಗ ಮಾರುಕಟ್ಟೆಯ ತಜ್ಞರು ತಿಳಿಸಿದ್ದಾರೆ.

ನಾನು ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ, ಈ ಪರೀಕ್ಷೆ ಬರೆಯಬಹುದೇ?
ಈ ಹಿಂದೆ ಪದವಿ ಪಡೆದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತಿಮ ವರ್ಷದ ಪದವಿ ಓದುತ್ತಿರುವವರೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಅಭ್ಯರ್ಥಿಯು 08-10-2022ರ ಒಳಗೆ ಪದವಿ ಪಡೆದಿರುವ ಕುರಿತು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗಿರುವುದು ಅಗತ್ಯ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಅರ್ಜಿ ಶುಲ್ಕ ಪಾವತಿಸುವುದು ಹೇಗೆ?
ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಅರ್ಜಿ ಸಲ್ಲಿಸುವಾಗ ಚಲನ್ ಪಡೆದು, ಅದನ್ನು ಎಸ್‌ಬಿಐ ಬ್ಯಾಂಕ್‌ನಲ್ಲಿ ನಗದಿನೊಂದಿಗೆ ಕೊಟ್ಟು ಅರ್ಜಿ ಶುಲ್ಕ ಪಾವತಿಸಬಹುದು. ನೂರು ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿರುತ್ತದೆ. ನೆನಪಿಡಿ, ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

ಪರೀಕ್ಷೆ ಎಲ್ಲಿ ನಡೆಯುತ್ತದೆ?
ರಾಜ್ಯದ ಎಂಟು ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಸಲಾಗುತ್ತದೆ.

ಹೇಗಿರುತ್ತದೆ ಈ ಪರೀಕ್ಷೆ ?
ಒಟ್ಟು ನಾಲ್ಕು ಹಂತದಲ್ಲಿ ಸಿಜಿಎಲ್‌ ಪರೀಕ್ಷೆ (SSC CGL 2022) ನಡೆಸಲಾಗುತ್ತದೆ. ಮೊದಲ ಎರಡು ಹಂತದ ಪರೀಕ್ಷೆಗಳು ಕಂಪ್ಯೂಟರ್ ಆಧರಿತ (ಸಿಬಿಟಿ) ಪರೀಕ್ಷೆಯಾಗಿರುತ್ತದೆ. ಮೂರನೇ ಹಂತದ ಪರೀಕ್ಷೆ (ಟೈರ್-3) ವಿವರಣಾತ್ಮಕ ಪರೀಕ್ಷೆಯಾಗಿರುತ್ತದೆ. ಇದನ್ನು ಅಭ್ಯರ್ಥಿಗಳು ಬರೆಯಬೇಕಿರುತ್ತದೆ. ಮೊದಲ ಹಂತದ ಪರೀಕ್ಷೆಯಲ್ಲಿ (ಟೈರ್-1) ಎರಡನೇ ಹಂತದ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಈ ಪರೀಕ್ಷೆಯಲ್ಲಿ ಮೊದಲ ಹಂತದ (ಟೈರ್-1) ಪರೀಕ್ಷೆಯಲ್ಲಿ 200 ಪ್ರಶ್ನೆಗಳಿರಲಿವೆ. ಇದಕ್ಕೆ ಉತ್ತರ ಗುರುತಿಸಲು ಕೇವಲ 60 ನಿಮಿಷ ಕಾಲಾವಕಾಶ ನೀಡಲಾಗಿರುತ್ತದೆ. ಈ ಪರೀಕ್ಷೆಯಲ್ಲಿ ಜನರಲ್ ಇಂಟೆಲಿಜೆನ್ಸಿ ಮತ್ತು ರೀಸನಿಂಗ್‌ನ 25, ಜನರಲ್ ಅವೇರ್ನೆಸ್‌ನ 25, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್‌ನ 25 ಮತ್ತು ಇಂಗ್ಲಿಷ್ ಕಾಂಪ್ರಿಹೆನ್ಷನ್‌ನ 25 ಪ್ರಶ್ನೆಗಳಿರಲಿವೆ. ಪ್ರತಿ ಪ್ರಶ್ನೆಗೂ 2 ಅಂಕ ನಿಗದಿಪಡಿಸಲಾಗಿರುತ್ತದೆ.

ಎರಡನೇ ಹಂತದ (ಟೈರ್-2) ಪರೀಕ್ಷೆಯು 800 ಅಂಕಗಳಿಗೆ ನಡೆಯಲಿದ್ದು, ನಾಲ್ಕ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರಲಿದೆ. ಪ್ರತಿ ಪ್ರಶ್ನೆಪತ್ರಿಕೆಗೆ ಉತ್ತರಿಸಲು ತಲಾ 2 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಪ್ರಶ್ನೆ ಪತ್ರಿಕೆ -1: ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್‌ನ 100 ಪ್ರಶ್ನೆ (200 ಅಂಕ) ಪ್ರಶ್ನೆ ಪತ್ರಿಕೆ -2: ಇಂಗ್ಲಿಷ್ ಭಾಷೆ ಮತ್ತು ಕಾಂಪ್ರಿಹೆನ್ಷನ್‌ನ 200 ಪ್ರಶ್ನೆ (200 ಅಂಕ) ಪ್ರಶ್ನೆ ಪತ್ರಿಕೆ -3: ಸ್ಟ್ಯಾಟಿಟಿಕ್ಸ್‌ನ 100 ಪ್ರಶ್ನೆ (200 ಅಂಕ) ಪ್ರಶ್ನೆ ಪತ್ರಿಕೆ -4 ಜನರಲ್ ಸ್ಟಡೀಸ್‌ನ (ಫೈನಾನ್ಸ್ ಮತ್ತು ಎಕನಾಮಿಕ್ಸ್) 100 ಪ್ರಶ್ನೆ (200ಅಂಕ).

ಗಮನಿಸಿ: ಎಲ್ಲ ಹುದ್ದೆಗಳಿಗೂ ಪ್ರಶ್ನೆಪತ್ರಿಕೆ- 1 ಮತ್ತು 2 ಕಡ್ಡಾಯವಾಗಿರುತ್ತವೆ. ಉಳಿದ ಪ್ರಶ್ನೆ ಪತ್ರಿಕೆಗಳು ಯಾವ ಹುದ್ದೆ ಎಂಬುದರ ಮೇಲೆ ನಿಗದಿಯಾಗಿರುತ್ತವೆ. ಈ ಎರಡೂ ಹಂತದ ಪರೀಕ್ಷೆಯಲ್ಲಿಯೂ ನೆಗೆಟಿವ್ ಮಾರ್ಕ್ಸ್ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ ಟೈರ್-1ರ ಪರೀಕ್ಷೆಯಲ್ಲಿ 0.50 ಹಾಗೂ ಟೈರ್-2ನ ಪ್ರಶ್ನೆಪತ್ರಿಕೆ-2ರಲ್ಲಿ ಮಾತ್ರ 0.25 ಮಾರ್ಕ್ಸ್ ಹಾಗೂ ಉಳಿದೆಲ್ಲಾ ಪ್ರಶ್ನೆ ಪತ್ರಿಕೆಗಳಲ್ಲಿ 0.05 ಮಾರ್ಕ್ಸ್‌ಕಳೆಯಲಾಗುತ್ತದೆ.

ಮೂರನೇ ಹಂತದ ಪರೀಕ್ಷೆಯು ಲಿಖಿತ ಪರೀಕ್ಷೆಯಾಗಿರಲಿದೆ. ಇದರಲ್ಲಿ ಪ್ರಬಂಧ ಬರೆಯುವುದು, ಪತ್ರ-ಅರ್ಜಿ ಬರೆಯುವುದು, ಅನುವಾದ ಮಾಡುವುದು ಮತ್ತಿತರ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು ನೂರು ಅಂಕಗಳನ್ನು ನಿಗದಿಪಡಿಸಲಾಗಿದ್ದು, ಒಟ್ಟಾರೆಯಾಗಿ ವಿವರಣಾತ್ಮಕ ಉತ್ತರ ಬರೆಯುವಂತೆ ಸೂಚಿಸಲಾಗುತ್ತದೆ. ಅಭ್ಯರ್ಥಿಗಳ ಗ್ರಹಿಕೆ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶದಿಂದ ಮೂರನೇ ಹಂತದ ಪರೀಕ್ಷೆಯನ್ನು 2016ರಲ್ಲಿ ಪರಿಚಯಿಸಲಾಗಿದೆ. ಈ ಪರೀಕ್ಷೆ ಬರೆಯಲು 60 ನಿಮಿಷ ಅಂದರೆ ಒಂದು ಗಂಟೆ ಮಾತ್ರ ಕಾಲಾವಕಾಶ ನೀಡಲಾಗಿರುತ್ತದೆ.

ಪರೀಕ್ಷೆ ಕುರಿತ ಮಾಹಿತಿ ಇಲ್ಲಿದೆ ನೋಡಿ | https://ssc.nic.in/Downloads/portal/english/Scheme%20of%20Examination%20CGLE.pdf

ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರ ಕೌಶಲದ ಪರೀಕ್ಷೆಯೂ ನಡೆಯಲಿದೆ. ಮುಖ್ಯವಾಗಿ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವುದರ ಪರೀಕ್ಷೆ ಇರುತ್ತದೆ. ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್‌ನಂತಹ ಹುದ್ದೆಗಳಿಗೆ ದೈಹಿಕ ಮತ್ತು ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಪರೀಕ್ಷೆಗಳು ಹೇಗಿರುತ್ತದೆ ಎಂಬ ಸಂಪೂರ್ಣ ವಿವರವನ್ನು ಆಯೋಗದ ವೆಬ್ ನಲ್ಲಿ ಪ್ರಕಟಿಸಲಾಗಿದೆ. ವಿಡಿಯೋ ಮೂಲಕವೂ ಮಾಹಿತಿ ನೀಡಲಾಗಿದೆ. ಕೊನೆಯ ಹಂತದಲ್ಲಿ ದಾಖಲೆ ಪರಿಶೀಲನೆ ನಡೆಯಲಿದೆ.

ಪರೀಕ್ಷೆಗೆ ಯಾವೆಲ್ಲಾ ವಿಷಯಗಳನ್ನು ಓದಿ ಕೊಳ್ಳಬೇಕು?
ಸಿಜಿಎಲ್‌ ಪರೀಕ್ಷೆಗೆ (SSC CGL 2022) ಯಾವೆಲ್ಲಾ ವಿಷಯಗಳನ್ನು ಓದಿ ಕೊಳ್ಳಬೇಕೆಂಬ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ. ಇದನ್ನು ನೋಡಿಕೊಂಡು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ. ಮೊದಲ ಹಂತದ ಪರೀಕ್ಷೆಯು ಇದೇ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ಮುಂದಿನ ಹಂತದ ಪರೀಕ್ಷೆಯ ವೇಳಾಪಟ್ಟಿಯನ್ನು ಎಸ್ ಎಸ್‌ಸಿಯ ವೆಬ್‌ನಲ್ಲಿಯೂ ಪ್ರಕಟಿಸಲಾಗುತ್ತದೆ. ಅಲ್ಲದೆ, ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ನಲ್ಲಿಯೂ ಒದಗಿಸಲಾಗುತ್ತದೆ.

ಸಂದರ್ಶನ ನಡೆಯುತ್ತದೆಯೇ?
ಇಲ್ಲ, ನಾಲ್ಕು ಹಂತದ ಪರೀಕ್ಷೆ ನಡೆದರೂ ಸಂದರ್ಶನ ನಡೆಸಲಾಗುವುದಿಲ್ಲ. ನಾಲ್ಕೂ ಹಂತದ ಪರೀಕ್ಷೆಯಲ್ಲಿಯೂ ಆರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

ನೇಮಕ ಪ್ರಕ್ರಿಯೆಯ ಮಾಹಿತಿ ಪಡೆಯುವುದು ಹೇಗೆ?
ಸಿಬ್ಬಂದಿ ನೇಮಕಾತಿ ಆಯೋಗದ (ಎಸ್ ಎಸ್‌ಸಿ) ಪ್ರಾದೇಶಿಕ ಕಚೇರಿಗಳಲ್ಲಿ ನೇಮಕದ ಮಾಹಿತಿ ಒದಗಿಸಲಾಗುತ್ತದೆ. ಬೆಂಗಳೂರಿನ ಕೋರಮಂಗಲದಲ್ಲಿ ಎಸ್‌ಎಸ್‌ಸಿಯ ಪ್ರಾದೇಶಿಕ ಕಚೇರಿ ಇದ್ದು, ಇದು ರಾಜ್ಯದಲ್ಲಿ ಈ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುತ್ತದೆ. ಅಗತ್ಯ ಮಾಹಿತಿಯನ್ನು ಇಲ್ಲಿಂದಲೂ ಪಡೆದುಕೊಳ್ಳಬಹುದು.
ಸಹಾಯ ವಾಣಿ ಸಂಖ್ಯೆ: 080-25502520, 9483862020

ವೆಬ್‌ಸೈಟ್‌ ವಿಳಾಸ: https://www.ssckkr.kar.nic.in

ಇದನ್ನೂ ಓದಿ | SSC CGL Notification 2022 | ಸಿಜಿಎಲ್‌ ಪರೀಕ್ಷೆಗೆ ಅಧಿಸೂಚನೆ ಪ್ರಕಟ; 20 ಸಾವಿರ ಹುದ್ದೆಗಳಿಗೆ ನೇಮಕ

Exit mobile version