ನವದೆಹಲಿ: ಆರ್ಥಿಕ ಹಿಂಜರಿತ ಭೀತಿಯಲ್ಲಿ ಸಾಕಷ್ಟು ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ(Tech Layoffs). ಸಡನ್ ಆಗಿ ಉದ್ಯೋಗಗಳನ್ನು ಕಳೆದುಕೊಳ್ಳುವವರ ಮನಸ್ಥಿತಿ ಹೇಗಿರಬಹುದು? ಖಂಡಿತವಾಗಿಯೂ, ಭಯಾನಕವಾಗಿರುತ್ತದೆ. ಭವಿಷ್ಯ ಹೇಗೆ ಎಂಬ ಚಿಂತೆ ಇದ್ದೇ ಇರುತ್ತದೆ. ಆದರೆ, ಅಮೆರಿಕದಲ್ಲಿ ಈಗ ಹೊಸ ಟ್ರೆಂಡ್‌ವೊಂದು ಶುರುವಾಗಿದೆ. ಕೆಲಸ ಹೋಗಿದ್ದು ಒಳ್ಳೆಯದೇ ಆಯಿತು ಎಂಬ ಆ್ಯಟಿಟ್ಯೂಡ್ ಬೆಳೆಯುತ್ತಿದೆ! ಹೌದು, ಇದು ನಿಜ. ನೀವು ನನ್ನನ್ನು ಕೆಲಸದಿಂದ ತೆಗೆಯುತ್ತೀರಾ…? ಆಯ್ತು ಮನೆಗೆ ಕಳುಹಿಸಿ… ಎಂಬ ಉತ್ತರವು ಉದ್ಯೋಗಿಗಳಿಂದ ಬರುತ್ತಿದೆ! ಕೆಲವರು ಉದ್ಯೋಗಗಳನ್ನು ಕಳೆದುಕೊಳ್ಳುವುದರಲ್ಲಿ ಸಂತೋಷಪಡುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು!
ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ದಾಖಲೆಯ ಕುಸಿತವನ್ನು ದಾಖಲಿಸಿದೆ. ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್‌ನಂಥ ಟೆಕ್ ದೈತ್ಯ ಕಂಪನಿಗಳು ಸಾವಿರಾರು ಉದ್ಯೋಗಗಳನ್ನು ಕಡಿತ ಮಾಡಿವೆ. ಹೀಗಿದ್ದೂ, ಉದ್ಯೋಗಗಳನ್ನು ಕಳೆದುಕೊಂಡವವರ ಪೈಕಿ ಬಹುತೇಕ ಖುಷಿಯಾಗಿದ್ದಾರಂತೆ! ಇವರೆಲ್ಲರೂ ನಿರುದ್ಯೋಗವನ್ನು ತುಂಬಾ ಗಂಭೀರವಾಗಿ ಪರಿಗಣಿಸಿಲ್ಲ. ವಾಸ್ತವದಲ್ಲಿ, ತಮಿಗಿಷ್ಟವಿಲ್ಲದ ಹುದ್ದೆಯಲ್ಲಿದ್ದರಿಂದ ತಪ್ಪಿಸಿಕೊಂಡೆವು ಎಂದು ಭಾವಿಸುತ್ತಿದ್ದಾರೆ. ಜತೆಗೆ, ಕೆಲಸ ಹೋಗಿರುವುದರಿಂದ ತಮ್ಮ ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಇನ್ನೂ ಉತ್ತಮ ಅವಕಾಶಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ.
ಕೆಲಸ ಹೋದ್ರೆ ಹೋಯಿತು ಎಂಬ ಭಾವನೆಗಳು ವಿಶೇಷವಾಗಿ ಕಿರಿಯ ಕೆಲಸಗಾರರಲ್ಲಿ ಕಂಡುಬರುತ್ತವೆ. ಕಳೆದ ತಿಂಗಳು ಬ್ಲೂಮ್‌ಬರ್ಗ್ ನ್ಯೂಸ್‌ಗಾಗಿ ಹ್ಯಾರಿಸ್ ಪೋಲ್ ನಡೆಸಿದ ಸಮೀಕ್ಷೆಯ ಪ್ರಕಾರ, ಸುಮಾರು ಶೇ.20 ಜೆನ್ ಜೆಡ್ ಮತ್ತು ಶೇ.15 ಮಿಲೇನಿಯಲ್‌ಗಳಿಗೆ ಕೆಲಸದಿಂದ ವಜಾ ಮಾಡಿದರೆ ಹೆಚ್ಚು ಸಂತೋಷಪಡುತ್ತಾರಂತೆ.
ಇದನ್ನೂ ಓದಿ: Tech layoffs : ಇ-ಕಾಮರ್ಸ್ ಇಬೇ ಕಂಪನಿಯಲ್ಲಿ 500 ಉದ್ಯೋಗಿಗಳ ವಜಾ
ಹೀಗೆ ಕೆಲಸ ಕಳೆದುಕೊಂಡವರು ಹೆಚ್ಚು ದುಃಖ ಪಡದೇ ತಮ್ಮ ಇಷ್ಟದ ಕೆಲಸಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ಫ್ರಿಲ್ಯಾನ್ಸ್ ಆಗಿ ಸಾಕಷ್ಟು ಕೆಲಸಗಳನ್ನು ಹುಡುಕಿಕೊಳ್ಳುತ್ತಿದ್ದಾರಂತೆ. ಅಲ್ಲದೇ, ತಮ್ಮದೇ ಹವ್ಯಾಸಗಳನ್ನು ವೃತ್ತಿಯಾಗಿ ಪರಿವರ್ತಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಾಗಾಗಿ, ಹೊಸ ತಲೆಮಾರಿನ ಜನರಿಗೆ ಕೆಲಸದಿಂದ ತೆಗೆದು ಹಾಕುತ್ತೇವೆ ಎಂಬುದು ತೀರಾ ಭಯ ಹುಟ್ಟಿಸುವ ಸಂಗತಿಗಳಾಗಿ ಉಳಿದಿಲ್ಲ ಎಂಬ ಅಭಿಪ್ರಾಯವು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.