ನವ ದೆಹಲಿ: ಹೋಳಿ ಹಬ್ಬಕ್ಕೆ ಮುನ್ನ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿಯಿದು. ಮುಂದಿನ ವಾರ ಕೇಂದ್ರ ಸರ್ಕಾರ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ( Dearness Allowance) ಏರಿಸುವ ಸಾಧ್ಯತೆ ಇದೆ. ( 7th Pay commission) ಕೇಂದ್ರ ಸಚಿವ ಸಂಪುಟ ಸಭೆ ಮಾರ್ಚ್ 1ರಂದು ನಡೆಯಲಿದ್ದು, ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸುದೀರ್ಘ ಕಾಲದಿಂದ ಉದ್ಯೋಗಿಗಳು ಡಿಎ ಏರಿಕೆಗೆ ಒತ್ತಾಯಿಸುತ್ತಿದ್ದಾರೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಸಲ ಏರಿಸುತ್ತದೆ. ಜನವರಿ ಹಾಗೂ ಜುಲೈನಲ್ಲಿ ಇದು ನಡೆಯುತ್ತದೆ.
ಆದರೆ ಈ ಹಿಂದೆ ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆಯನ್ನು ಏರಿಸಿತ್ತು. ಇದೇ ಟ್ರೆಂಡ್ ಅನ್ನು ಸರ್ಕಾರ ಅನುಸರಿಸಿದರೆ ಮಾರ್ಚ್‌ನಲ್ಲಿ ತುಟ್ಟಿ ಭತ್ಯೆ ಏರಿಕೆಯಾಗಲಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಡಿಎ ಬೇಡಿಕೆಯನ್ನು ಪೂರೈಸಿದರೆ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ವೇತನ ತನ್ನಿಂತಾನೆ ಹೆಚ್ಚಳವಾಗಲಿದೆ. 4% ಡಿಎ ಹೆಚ್ಚಳವಾದರೆ 38%ರಿಂದ ೪೨% ಏರಿಕೆಯಾಗಲಿದೆ. ಇದರಿಂದ 48 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ 68 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.
ಇತ್ತೀಚಿನ ಗ್ರಾಹಕ ದರ ಸೂಚ್ಯಂಕ (consumer price index) ಆಧರಿಸಿ ತುಟ್ಟಿಭತ್ಯೆಯ ಪ್ರಮಾಣವನ್ನು ಸರ್ಕಾರ ನಿರ್ಧರಿಸುತ್ತದೆ. ಡಿಎ ಏರಿಕೆ 2023ರ ಜನವರಿಯಿಂದ ಅನ್ವಯವಾಗಲಿದೆ. ಈ ಹಿಂದೆ 2022ರ ಸೆಪ್ಟೆಂಬರ್ 28ರಂದು ತುಟ್ಟಿಭತ್ಯೆಯ ಪರಿಷ್ಕರಣೆ ನಡೆದಿತ್ತು. ಅದು 2022ರ ಜುಲೈ 1 ರಿಂದ ಜಾರಿಯಾಗಿತ್ತು.