Site icon Vistara News

Unemployment : ಜನವರಿ-ಮಾರ್ಚ್‌ನಲ್ಲಿ ನಿರುದ್ಯೋಗದ ಪ್ರಮಾಣ 6.8%ಕ್ಕೆ ಇಳಿಕೆ

youths and employment

#image_title

ನವ ದೆಹಲಿ: ಕಳೆದ ನಾಲ್ಕನೇ ತ್ರೈಮಾಸಿಕದಲ್ಲಿ, ಅಂದರೆ ಜನವರಿ-ಮಾರ್ಚ್‌ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣದಲ್ಲಿ ಇಳಿಕೆಯಾಗಿದೆ. (Unemployment) ನಿರುದ್ಯೋಗದ ಪ್ರಮಾಣವು 7.2%ರಿಂದ 6.8%ಕ್ಕೆ ತಗ್ಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

National Statistical Office (NSO) ಎನ್‌ಎಸ್‌ಒ ಕಚೇರಿ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ 2023ರ ಜನವರಿ-ಮಾರ್ಚ್‌ನಲ್ಲಿ 2018-19ರಿಂದೀಚೆಗಿನ ಕನಿಷ್ಠ ನಿರುದ್ಯೋಗ ದಾಖಲಾಗಿದೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಚೇತರಿಸಿದೆ. ಭಾರತದ ನಗರ ಪ್ರದೇಶಗಳ ನಿರುದ್ಯೋಗ ಪ್ರಮಾಣವು 6.8% ಕ್ಕೆ ಜನವರಿ-ಮಾರ್ಚ್‌ ಅವಧಿಯಲ್ಲಿ ಇಳಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲೇ ಕನಿಷ್ಠ ಮಟ್ಟ ಇದಾಗಿದೆ. ನಗರ ಮತ್ತು ಪಟ್ಟಣಗಳಲ್ಲಿ ಸುಶಿಕ್ಷಿತ ಯುವಜನತೆ ಇದೀಗ ಉದ್ಯೋಗ ಪಡೆಯುತ್ತಿದ್ದಾರೆ. ಈ ವಲಯದಲ್ಲಿ ನಿರುದ್ಯೋಗ ಇಳಿಕೆಯಾಗಿರುವುದು ಸಕಾರಾತ್ಮಕ ಸಂಗತಿ ಎನ್ನುತ್ತಾರೆ ತಜ್ಞರು.

ಭಾರತದಲ್ಲಿ ಶೈಕ್ಷಣಿಕ ಉದ್ದಿಮೆಯ ಮೌಲ್ಯ 117 ಶತಕೋಟಿ ಡಾಲರ್‌̈ (9.59 ಲಕ್ಷ ಕೋಟಿ ರೂ.) ಗೆ ಬೆಳೆದಿದೆ. ಇದು ಇನ್ನೂ ಅಗಾಧವಾಗಿ ವಿಸ್ತರಿಸುತ್ತಿದೆ. ಹೊಸ ಕಾಲೇಜುಗಳ (Unemployment) ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಯುವ ಭಾರತೀಯರು ನಾನಾ ಪದವಿಗಳನ್ನು ಪಡೆಯುತ್ತಿದ್ದಾರೆ. ಆದರೆ ಅವರ ಡಿಗ್ರಿಗಳಿಗೆ ತಕ್ಕಂತೆ ಸ್ಕಿಲ್‌ ಅಥವಾ ಕೌಶಲ ಸಿಗದಿರುವುದರಿಂದ ಉದ್ಯೋಗ ಪಡೆಯುವುದರಲ್ಲಿ ಹಿಂದೆ ಬೀಳುತ್ತಿದ್ದಾರೆ. (education industry) ಸಾವಿರಾರು ಯುವ ಜನತೆ‌ ಲಕ್ಷಾಂತರ ರೂಪಾಯಿ ಶುಲ್ಕ ತೆತ್ತು, ಎರಡು ಅಥವಾ ಮೂರು ಅರ್ಥವಿಲ್ಲದ ಡಿಗ್ರಿಗಳನ್ನು ಮಾಡುತ್ತಾ, ಉದ್ಯೋಗದ ಕನವರಿಕೆಯಲ್ಲಿದ್ದಾರೆ.

ಇದರ ಪರಿಣಾಮ ಹೇಳಿಕೊಳ್ಳಲು ಎರಡು-ಮೂರು ಡಿಗ್ರಿಗಳಿದ್ದರೂ, ನಿರುದ್ಯೋಗಿಗಳಾಗಿರುವ ಸಾವಿರಾರು ಮಂದಿ ಸೃಷ್ಟಿಯಾಗಿದ್ದಾರೆ. ಸಣ್ಣ ಸಣ್ಣ ಅಪಾರ್ಟ್‌ಮೆಂಟ್‌ ಕಟ್ಟಡಗಳು, ಮಾರುಕಟ್ಟೆಯ ಗಿಜಿಗುಡುವ ಪ್ರದೇಶಗಳ ಸಂಕೀರ್ಣಗಳಲ್ಲಿ ಇಂಥ ನಿರರ್ಥಕ ಡಿಗ್ರಿಗಳನ್ನು ಬೋಧಿಸುವ ಕಾಲೇಜುಗಳು ಇರಬಹುದು. ಹೆದ್ದಾರಿಗಳ ಪಕ್ಕ ಜಾಬ್‌ ಪ್ಲೇಸ್‌ಮೆಂಟ್‌ನ ಭರವಸೆ ನೀಡುವ ಕಾಲೇಜುಗಳ ಫಲಕಗಳನ್ನು ಕಾಣಬಹುದು. ಇಂಥ ಸಾವಿರಾರು ಕಾಲೇಜುಗಳು ನಿಯಮಿತವಾಗಿ ತರಗತಿಗಳನ್ನು ನಡೆಸುತ್ತಿಲ್ಲ. ಉತ್ತಮ ತರಬೇತಿ ನೀಡುತ್ತಿಲ್ಲ. ಔಟ್‌ ಡೇಟ್‌ ಆಗಿರುವ ಪಠ್ಯಕ್ರಮಗಳನ್ನು ಹೊಂದಿವೆ ಎಂದು ಬ್ಲೂಮ್‌ ಬರ್ಗ್‌ ವರದಿ ತಿಳಿಸಿದೆ.

ಎಸ್‌ಎಚ್‌ಎಲ್‌ ಸಂಸ್ಥೆಯ ಸಮೀಕ್ಷೆ ಪ್ರಕಾರ 3.8% ಎಂಜಿನಿಯರ್‌ಗಳು ಮಾತ್ರ ಸಾಫ್ಟ್‌ವೇರ್‌, ಸ್ಟಾರ್ಟಪ್‌ಗಳಿಗೆ ಬೇಕಾದ ಕೌಶಲವನ್ನು ಹೊಂದಿರುತ್ತಾರೆ. ಇದು ಕೇವಲ ಭಾರತದ ಸಮಸ್ಯೆ ಮಾತ್ರವಲ್ಲ. ಅಮೆರಿಕ ಸೇರಿದಂತೆ ಜಗತ್ತಿನ ನಾನಾ ದೇಶಗಳಲ್ಲಿ ಉನ್ನತ ಶಿಕ್ಷಣ ದುಬಾರಿ. ಹಾಗೂ ವಿವಾದಾತ್ಮಕ. ಅಲ್ಲಿ ಶೈಕ್ಷಣಿಕ ಸಂಸ್ಥೆಗಳ ಲಾಭಕೋರತನದ ಬಗ್ಗೆ ತನಿಖೆಗಳು ನಡೆದಿವೆ. ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಈ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ ಎಂದು ವರದಿ ತಿಳಿಸಿದೆ. ವೀಬಾಕ್ಸ್‌ ಸಂಸ್ಥೆಯ ಅಧ್ಯಯನದ ಪ್ರಕಾರ ಭಾರತದಲ್ಲಿ ಅರ್ಧದಷ್ಟು ಡಿಗ್ರಿಗಳು ಭವಿಷ್ಯದಲ್ಲಿ ಯಾವುದೇ ಉದ್ಯೋಗ ನೀಡದು.

ಹಲವಾರು ಕಂಪನಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ ಪಡೆದ ಅಭ್ಯರ್ಥಿಗಳು ಸಿಗುವುದು ಕಷ್ಟ ಎನ್ನುತ್ತಿವೆ. ಭಾರತದಲ್ಲಿ ನಿರುದ್ಯೋಗದ ಪ್ರಮಾಣ 7%ರ ಸರಾಸರಿಯಲ್ಲಿದೆ. ಭಾರತ ವೇಗವಾಗಿ ಬೆಳೆಯುತ್ತಿರುವ ಎಕಾನಮಿಯಾಗಿದ್ದರೂ, ಈ ಸವಾಲು ಮುಂದಿದೆ. ಪ್ರಧಾನಿ ಮೋದಿಯವರು ಚೀನಾದಿಂದ ಭಾರತಕ್ಕೆ ಉದ್ಯಮಿಗಳನ್ನು, ಹೂಡಿಕೆದಾರರನ್ನು, ಉತ್ಪಾದಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. 2024ರ ಚುನಾವಣೆ ವೇಳೆಗೆ ನಿರುದ್ಯೋಗ ಕೂಡ ಪ್ರಮುಖ ವಿಷಯವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Meta layoffs : ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾದಲ್ಲಿ ಮುಂದಿನವಾರ ಮತ್ತೆ 6,000 ಉದ್ಯೋಗ ಕಡಿತ

Exit mobile version