ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2023ನೇ ಸಾಲಿನಲ್ಲಿ ನಡೆಸಲಿರುವ ವಿವಿಧ ಪರೀಕ್ಷೆಗಳ ವೇಳಾಪಟ್ಟಿಯನ್ನು (upsc calendar 2023-24) ಬಿಡುಗಡೆ ಮಾಡಿದೆ.
ಈ ಹಿಂದಿನ ವಾರ್ಷಿಕ ವೇಳಾಪಟ್ಟಿಗಳಿಗೆ ಹೋಲಿಸಿದರೆ 2023ನೇ ಸಾಲಿನ ವೇಳಾಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಿವೆ. ಕೆಲ ಪ್ರಮುಖ ಪರೀಕ್ಷೆಗಳಿಗೆ ಅಧಿಸೂಚನೆ ಹೊರಡಿಸುವ ಸಮಯವನ್ನು ಬದಲಾಯಿಸಲಾಗಿದೆ.
ಮೇ 28ಕ್ಕೆ ಐಎಎಸ್ ಪ್ರಿಲಿಮ್ಸ್
ವಿಶೇಷವೆಂದರೆ 2023ರಲ್ಲಿ ಯುಪಿಎಸ್‌ಸಿಯು ಹೊರಡಿಸುವ ಮೊದಲ ಅಧಿಸೂಚನೆ ಎಂದರೆ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಗಳ ಅಧಿಸೂಚನೆಯಾಗಿದೆ. 2023ರಲ್ಲಿ ಫೆಬ್ರವರಿ 1ರಂದೇ ಐಎಎಸ್ ಮತ್ತು ಐಎಫ್‌ಎಸ್ ಪರೀಕ್ಷೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯದಿನವಾಗಿರುತ್ತದೆ. ಪೂರ್ವಭಾವಿ ಪರೀಕ್ಷೆಯನ್ನು (ಪ್ರಿಲಿಮ್ಸ್ ) ಮೇ 28ರಂದೇ ನಡೆಸುವುದಾಗಿ ಯುಪಿಎಸ್‌ಸಿಯು (upsc) ಪ್ರಕಟಿಸಿದೆ. ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 15ರಂದು ನಡೆಸಲಾಗುತ್ತದೆ. ಐಎಫ್‌ಎಸ್ ಮುಖ್ಯಪರೀಕ್ಷೆಯು ನವೆಂಬರ್ 26ಕ್ಕೆ ನಡೆಯಲಿದೆ.
2023ರಲ್ಲಿ ನಡೆಸಲಾಗುವ ಮೊದಲ ಬಾರಿಯ ಎನ್‌ಡಿಎ-ಎನ್‌ಎ ಪರೀಕ್ಷೆಯ ಅಧಿಸೂಚನೆಯನ್ನು ಜನವರಿಗೆ ಬದಲಾಗಿ 2022ರ ಡಿಸೆಂಬರ್ 21ರಂದೇ ಹೊರಡಿಸಲಾಗುತ್ತದೆ.
2ನೇ ಪರೀಕ್ಷೆಯ ಅಧಿಸೂಚನೆಯನ್ನು ಮೇ 17ರಂದು ಹೊರಡಿಸಲಾಗುತ್ತದೆ. ವಿಶೇಷವೆಂದರೆ ಸೇನಾಪಡೆಯ ಹುದ್ದೆಗಳಿಗೆ ನೇಮಕ ಮಾಡಲು ನಡೆಸುವ ಸಿಡಿಎಸ್ ಪರೀಕ್ಷೆಯ ಅಧಿಸೂಚನೆಯನ್ನು ಎನ್‌ಡಿಎ-ಎನ್‌ಎ ಪರೀಕ್ಷೆಯ ಅಧಿಸೂಚನೆಯೊಂದಿಗೇ ಪ್ರಕಟಿಸಲಾಗುತ್ತದೆ.
ಫೆಬ್ರವರಿಯಲ್ಲಿಯೇ ಇಎಸ್ ಪರೀಕ್ಷೆ
ಕೇಂದ್ರ ಸರ್ಕಾರದಲ್ಲಿನ ಎಂಜಿನಿಯರಿಂಗ್ ಹುದ್ದೆಗಳ ನೇಮಕಕ್ಕಾಗಿ ಯುಪಿಎಸ್‌ಸಿ (upsc) ನಡೆಸುವ ಎಂಜಿನಿಯರಿಂಗ್ ಸರ್ವೀಸ್ ಪರೀಕ್ಷೆಯನ್ನು 2023ರಲ್ಲಿ ಬಹಳ ಬೇಗನೆ ನಡೆಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆ ಫೆಬ್ರವರಿ 19ಕ್ಕೆ ನಡೆದರೆ, ಮುಖ್ಯ ಪರೀಕ್ಷೆ ಜೂನ್ 25ಕ್ಕೆ ನಡೆಯಲಿದೆ. ಇದರ ಅಧಿಸೂಚನೆಯನ್ನು 2022ರ ಸೆಪ್ಟೆಂಬರ್ 14ಕ್ಕೇ ಹೊರಡಿಸಲಾಗುತ್ತದೆ.
ವೇಳಾಪಟ್ಟಿ ಇಲ್ಲಿದೆ ನೋಡಿ
ಐಇಎಸ್/ಐಎಸ್‌ಎಸ್ ಪರೀಕ್ಷೆಗೆ ಏಪ್ರಿಲ್ 19ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಜೂನ್ 23ಕ್ಕೆ ಪರೀಕ್ಷೆ ನಡೆಸಲಾಗುತ್ತದೆ. ವೈದ್ಯಾಧಿಕಾರಿಗಳ ಹುದ್ದೆಗೆ ನಡೆಸಲಾಗುವ ಸಿಎಂಎಸ್ ಪರೀಕ್ಷೆಯನ್ನು ಜುಲೈ 16ಕ್ಕೆ ನಡೆಸಲಾಗುತ್ತದೆ. ಇದರ ಅಧಿಸೂಚನೆಯು ಏಪ್ರಿಲ್ 19ಕ್ಕೆ ಪ್ರಕಟಗೊಳ್ಳಲಿದೆ.
ಇದನ್ನೂ ಓದಿ | IAS prelims 2022: ಕೊನೆಯ ಕ್ಷಣದ ಸಿದ್ಧತೆ ಹೇಗಿರಬೇಕು, ಏನೇನು ಓದಬೇಕು ಗೊತ್ತೇ?
ಯುಪಿಎಸ್‌ಸಿಯು ಬಹುತೇಕವಾಗಿ ಈ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಸಲಿದೆ. ಕೊರೊನಾ ಕಾಲಘಟ್ಟದಲ್ಲಿ ಮಾತ್ರ ವೇಳಾಪಟ್ಟಿಯ ಪ್ರಕಾರ ಯಾವುದೇ ಪರೀಕ್ಷೆ ನಡೆದಿರಲಿಲ್ಲ. ಮೊದಲೇ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿರುವುದರಿಂದ ಅಭ್ಯರ್ಥಿಗಳಿಗೆ ತಮ್ಮದೇ ವೇಳಾಪಟ್ಟಿ ಮಾಡಿಕೊಂಡು ಅಭ್ಯಾಸ ನಡೆಸಲು ಅನುಕೂಲವಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ವೆಬ್: https://www.upsc.gov.in/