Site icon Vistara News

UPSC Prelims 2023: ನಾಳೆ ಯುಪಿಎಸ್‌ಸಿ ಪ್ರಿಲಿಮ್ಸ್‌; ಈ ಬಾರಿಯೂ ಕನ್ನಡದಲ್ಲಿ ನಡೆಯೋಲ್ಲ ಪರೀಕ್ಷೆ

upsc prelims 2023 IAS prelims 2023

#image_title

ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಭಾರತೀಯ ನಾಗರಿಕ ಸೇವಾ ಅಧಿಕಾರಿ (ಐಎಎಸ್‌) ಮತ್ತು ಭಾರತೀಯ ಅರಣ್ಯ ಸೇವಾ ಅಧಿಕಾರಿ (ಐಎಫ್‌ಎಸ್‌) ಹುದ್ದೆಗಳ ನೇಮಕಕ್ಕೆ ಮೇ 28ರ ಭಾನುವಾರದಂದು ಪೂರ್ವಭಾವಿ ಪರೀಕ್ಷೆ (UPSC Prelims 2023) ನಡೆಸಲಿದೆ.

ರಾಜ್ಯದಲ್ಲಿ ಬೆಂಗಳೂರು, ಧಾರವಾಡ ಮತ್ತು ಮೈಸೂರಿನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪೂರ್ವ ಭಾವಿ ಪರೀಕ್ಷೆಯನ್ನು ಕನ್ನಡದಲ್ಲಿಯೂ ನಡೆಸಬೇಕೆಂಬ ಬೇಡಿಕೆಗೆ ಯುಪಿಎಸ್‌ಸಿಯು ಈ ಬಾರಿಯೂ ಮನ್ನಣೆ ನೀಡಿಲ್ಲ. ಹೀಗಾಗಿ ಅಭ್ಯರ್ಥಿಗಳು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಬಹುದಾಗಿದೆ. ʻʻದೇಶದ ಪ್ರತಿಷ್ಠಿತ ಪರೀಕ್ಷೆ ಎಂದು ಹೆಸರು ಮಾಡಿರುವ ಈ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಿದರೆ ಮಾತ್ರ ರಾಜ್ಯದ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆʼʼ ಎಂದು ಕನ್ನಡ ಪರ ಹೋರಾಟಗಾರ ಗಿರೀಶ್‌ ಮತ್ತೇರ ಒತ್ತಾಯಿಸಿದ್ದಾರೆ.

ಈಗಾಗಲೇ ಪ್ರವೇಶ ಪತ್ರವನ್ನು ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದ್ದು, ಅಭ್ಯರ್ಥಿಗಳು ಇದನ್ನು ಡೌನ್‌ಲೋಡ್‌ ಮಾಡಿ, ಪ್ರಿಂಟ್‌ ತೆಗೆದುಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಎರಡು ಶಿಫ್ಟ್‌ಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 9:30 ರಿಂದ 11:30ರ ವರೆಗೆ ಒಂದು ಶಿಫ್ಟ್‌ನ ಪರೀಕ್ಷೆ ನಡೆದರೆ ಮತ್ತೊಂದು ಶಿಫ್ಟ್‌ನ ಪರೀಕ್ಷೆಯು ಮಧ್ಯಾಹ್ನ 2:30 ರಿಂದ 4:30ರ ವರೆಗೆ ನಡೆಯಲಿದೆ. ಈ ಪರೀಕ್ಷೆಯು ಆಫ್‌ಲೈನ್‌ನಲ್ಲಿ ನಡೆಸಲಾಗುತ್ತದೆ.

ಪ್ರವೇಶ ಪತ್ರದೊಂದಿಗೆ ಫೋಟೊ ಇರುವ ಗುರುತಿನ ಚೀಟಿ ತರುವುದು ಕಡ್ಡಾಯ ಎಂದು ಯುಪಿಎಸ್‌ಸಿ ತಿಳಿಸಿದೆ. ಪರೀಕ್ಷೆ ಆರಂಭವಾಗುವುದಕ್ಕಿಂತಲೂ ಹತ್ತು ನಿಮಿಷ ಮೊದಲ ಪರೀಕ್ಷಾ ಕೇಂದ್ರದ ಬಾಗಿಲನ್ನು ಮುಚ್ಚಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಸಾಕಷ್ಟು ಮೊದಲೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕೆಂದು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದ ಬಾಗಿಲು ಮುಚ್ಚಿದ ನಂತರ ಯಾವುದೇ ಅಭ್ಯರ್ಥಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಎಚ್ಚರಿಸಲಾಗಿದೆ. ಪ್ರವೇಶ ಕೇಂದ್ರ ಮಾಹಿತಿಯನ್ನು ಪ್ರವೇಶ ಪತ್ರದಲ್ಲಿ ಒದಗಿಸಲಾಗಿರುತ್ತದೆ.

ಇದನ್ನೂ ಓದಿ : IAS prelims 2022: ಕೊನೆಯ ಕ್ಷಣದ ಸಿದ್ಧತೆ ಹೇಗಿರಬೇಕು, ಏನೇನು ಓದಬೇಕು ಗೊತ್ತೇ?

ಪರೀಕ್ಷೆಯಲ್ಲಿ ಅನುಸರಿಸಬೇಕಾಗಿರುವ ನಿಯಮಗಳನ್ನು ಪ್ರವೇಶ ಪತ್ರದಲ್ಲಿ ಒದಗಿಸಲಾಗುತ್ತದೆ. ಇದನ್ನು ಅಭ್ಯರ್ಥಿಗಳು ಓದಿಕೊಂಡೇ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ. ಪರೀಕ್ಷೆಯಲ್ಲಿ ಸರಿ ಉತ್ತರವನ್ನು ಗುರುತಿಸಲು ಕೇವಲ ಬ್ಲಾಕ್‌ ಬಾಲ್‌ ಪಾಯಿಂಟ್‌ ಪೆನ್‌ ಅನ್ನು ಮಾತ್ರ ಬಳಸುವಂತೆ ಆಯೋಗ ಕೋರಿದೆ.

ಮೊದಲಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ, ನೇಮಕ ಮಾಡಿಕೊಳ್ಳಲಾಗುತ್ತದೆ.

ಪ್ರವೇಶ ಪತ್ರ ಪಡೆಯಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಈ ಬಾರಿ ಒಟ್ಟು 1,105 ಐಎಎಸ್‌ ಮತ್ತು 150 ಐಎಫಎಸ್‌ ಹುದ್ದೆಗಳಿಗೆ ನೇಮಕ ನಡೆಯಲಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಅತಿ ಹೆಚ್ಚು ಐಎಎಸ್‌ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಕಳೆದ ವರ್ಷ ಮೊದಲಿಗೆ ಕಡಿಮೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರೂ ನಂತರ 1,011 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. 2016 ರಲ್ಲಿ 1079 ಹುದ್ದೆಗಳಿಗೆ ನೇಮಕ ನಡೆದಿತ್ತು. 2017 ರಲ್ಲಿ 980, 2018 ರಲ್ಲಿ 782, 2019 ರಲ್ಲಿ 896 ಮತ್ತು 2020 ರಲ್ಲಿ 796 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. 2021 ರಲ್ಲಿ ಕೇವಲ 712 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ಈ ಬಾರಿಯ ಹುದ್ದೆಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : UPSC Prelims 2023: ಮೇ 28ರಂದು ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದಲೇ ಮೆಟ್ರೋ ಸಂಚಾರ ಆರಂಭ

ಸಹಾಯವಾಣಿ ಸಂಖ್ಯೆ: 011-23385271 / 011-23381125 / 011-23098543
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ : https://www.upsc.gov.in/

ಇದನ್ನೂ ಓದಿ: UPSC Preparation : ವೃತ್ತಿಪರರು ಯುಪಿಎಸ್‌‌ಸಿ ಪರೀಕ್ಷೆಯಲ್ಲಿ ಸಕ್ಸೆಸ್ ಆಗಬೇಕಿದ್ದರೆ ಏನು ಮಾಡಬೇಕು?

Exit mobile version