ಹೊಸದಿಲ್ಲಿ: ದೇಶದ ಎರಡನೇ ಅತಿ ದೊಡ್ಡ ಐಟಿ ಕಂಪನಿ ಇನ್ಫೋಸಿಸ್‌ನಲ್ಲಿ (Infosys) ಉದ್ಯೋಗಿಗಳಿಗೆ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ನೀಡಬೇಕಿದ್ದ ವೆರಿಯೆಬಲ್ ಪೇ ಮೊತ್ತದಲ್ಲಿ ೭೦%ಕ್ಕೆ ಕಡಿತಗೊಳಿಸಲಾಗಿದೆ.
ಉದ್ಯೋಗಿಗಳ ವೇತನ ವೆಚ್ಚದಲ್ಲಿ ಏರಿಕೆಯಾಗಿರುವುದು, ಆದಾಯ ಮತ್ತು ಲಾಭಾಂಶದಲ್ಲಿ ಇಳಿಕೆ ಉಂಟಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ವಿಪ್ರೊದಲ್ಲಿ ಕೂಡ ಇದೇ ರೀತಿ ವೆರಿಯೆಬಲ್ ಪೇಯನ್ನು ತಡೆ ಹಿಡಿಯಲಾಗಿತ್ತು. ದೇಶದ ನಂ.೧ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕೂಡ ಕೆಲ ಉದ್ಯೋಗಿಗಳಿಗೆ ವೆರಿಯೆಬಲ್ ಪೇ ವಿತರಣೆಯಲ್ಲಿ ವಿಳಂಬ ಮಾಡಿದೆ.
ಮೂಲಗಳ ಪ್ರಕಾರ ಇನ್ಫೋಸಿಸ್ ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ವೆರಿಯೆಬಲ್ ಕಡಿತದ ಬಗ್ಗೆ ತಿಳಿಸಿದೆ. ಕಳೆದ ತಿಂಗಳು ಇನ್ಫೋಸಿಸ್ ಪ್ರಕಟಿಸಿದ ಏಪ್ರಿಲ್-ಜೂನ್ ತ್ರೈಮಾಸಿಕ ಫಲಿತಾಂಶದಲ್ಲಿ ನಿವ್ವಳ ಲಾಭ ೩.೨% ಇಳಿಕೆಯಾಗಿತ್ತು. ಆದರೂ ಕಂಪನಿ ವಾರ್ಷಿಕ ಬೆಳವಣಿಗೆಯ ಮುನ್ನೋಟವನ್ನು ೧೪-೧೬%ಕ್ಕೆ ನಿಗದಿಪಡಿಸಿತ್ತು.
ಉದ್ಯೋಗಿಗಳ ವಲಸೆಯನ್ನು ತಡೆಯಲು ಐಟಿ ಕಂಪನಿಗಳು ವೇತನ ಏರಿಕೆ, ವೆರಿಯೆಬಲ್ ಪೇ ಪರಿಷ್ಕರಣೆ ಇತ್ಯಾದಿಗಳನ್ನು ಮಾಡಿದ್ದವು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಆದಾಯ ಮತ್ತು ಲಾಭಾಂಶ ಇಳಿಕೆಯಾಗಿದ್ದು, ವೆರಿಯೆಬಲ್ ಪೇ ಕಡಿತಕ್ಕೆ ಐಟಿ ಕಂಪನಿಗಳು ನಿರ್ಧರಿಸಿವೆ. ಈ ಹಿಂದೆ ಮಾಡಿದ್ದ ವೇತನ ಹೆಚ್ಚಳದ ಪರಿಣಾಮ ಐಟಿ ಕಂಪನಿಗಳ ಲಾಭಾಂಶದಲ್ಲಿ ಸರಾಸರಿ ೧.೬೦% ಕಡಿತ ಉಂಟಾಗಿದೆ. ವೆರಿಯೆಬಲ್ ಪೇಯನ್ನು ಉದ್ಯೋಗಿಗಳ ದಕ್ಷತೆ, ಕಾರ್ಯವೈಖರಿಯ ಗುಣಮಟ್ಟವನ್ನು ಆಧರಿಸಿ ವಿತರಿಸಲಾಗುತ್ತದೆ.
ಇದನ್ನೂ ಓದಿ:IT Jobs | ವಿಪ್ರೊದಲ್ಲಿ ಸಂಬಳದ ಪ್ಯಾಕೇಜ್‌ಗೆ ಬಿತ್ತು ಕತ್ತರಿ, ಐಟಿ ಕಂಪನಿಗಳ ಲಾಭ ಇಳಿಕೆ?