ಬೆಂಗಳೂರು: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಯ ನೇಮಕಾತಿಗೆ ಸಂಬಂಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಪರೀಕ್ಷೆಗಳನ್ನು ನಡೆಸಲಿದ್ದು, ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯ ಸ್ಥಿತಿ ಮತ್ತು ಶುಲ್ಕ ಪಾವತಿ ಸ್ಥಿತಿ ಪರಿಶೀಲಿಸಲು ಕೆಇಎ ಕೆಲವೊಂದು ಸೂಚನೆಗಳನ್ನು ನೀಡಿದೆ (Job Alert).
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಸಲ್ಲಿಸಿರುವ ಅರ್ಜಿ ಅಂಗೀಕೃತವಾಗಿರದಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಆಗಸ್ಟ್ 26ರೊಳಗೆ ಪೂರಕ ದಾಖಲೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಪೂರಕ ದಾಖಲೆಗಳಿಲ್ಲದ ಅರ್ಜಿಗಳು ತಿರಸ್ಕೃತಗೊಳ್ಳಲಿವೆ. ಹೀಗಾಗಿ ಅರ್ಜಿ, ಶುಲ್ಕ ಪಾವತಿಯ ಸ್ಟೇಟಸ್ ಪರಿಶೀಲಿಸಿ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ:
- ಸ್ಟೇಟಸ್ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ (https://cetonline.karnataka.gov.in/kea/indexnew)
- ʼನೇಮಕಾತಿʼ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ʼಗ್ರಾಮ ಆಡಳಿತಾಧಿಕಾರಿ-ಅರ್ಜಿ ಮತ್ತು ಶುಲ್ಕ ಸ್ಥಿತಿ ಲಿಂಕ್ʼ ಆಪ್ಶನ್ ಆಯ್ಕೆ ಮಾಡಿ.
- ನಂತರ ತೆರೆಯುವ ಹೊಸ ಪುಟದಲ್ಲಿ ಅಪ್ಲಿಕೇಶನ್ ನಂಬರ್, ಜನ್ಮ ದಿನಾಂಕ ಮಾಹಿತಿ, ಕ್ಯಾಪ್ಚಾ ಕೋಡ್ ನಮೂದಿಸಿ.
- ‘Search’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ಈಗ ನಿಮ್ಮ ಅರ್ಜಿ ಸ್ಥಿತಿ, ಶುಲ್ಕ ಸ್ಥಿತಿ ಕುರಿತು ಮಾಹಿತಿ ಮೂಡುತ್ತದೆ.
ಪ್ರಕಟಿತ ಲಿಂಕ್‌ನಲ್ಲಿ ಅಭ್ಯರ್ಥಿಗಳ ಅರ್ಜಿಯು ಅಂಗೀಕೃತವಾಗದಿದ್ದಲ್ಲಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ ಶುಲ್ಕ ಪಾವತಿಸಿರುವ ಬಗ್ಗೆ ಪೂರಕ ದಾಖಲೆಗಳನ್ನು ಆಗಸ್ಟ್ 26ರೊಳಗೆ ಪ್ರಾಧಿಕಾರಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಗ್ರಾಮ ಆಡಳಿತ ಹುದ್ದೆಗೆ ಅರ್ಜಿ ಸಲ್ಲಿಸಿರುವ ಎಲ್ಲ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಲೇಬೇಕು. ಸೆಪ್ಟೆಂಬರ್ 29ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದೆ. ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಿ 150 ಅಂಕಗಳಿಗೆ ಕನಿಷ್ಠ 50 ಅಂಕಗಳನ್ನು ಗಳಿಸುವುದು ಕಡ್ಡಾಯ. ಒಂದು ವೇಳೆ ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯದಿದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡಲಾಗುವುದಿಲ್ಲ.
ʼʼಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅಕ್ಟೋಬರ್ 27ರಂದು ಪತ್ರಿಕೆ- 1 ಮತ್ತು ಪತ್ರಿಕೆ-2 ಇವುಗಳನ್ನು ಒಳಗೊಂಡ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆʼʼ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ವಿವರಿಸಿದ್ದಾರೆ.
ಪರೀಕ್ಷೆಯ ವೇಳಾಪಟ್ಟಿ
29-09-2024 ಭಾನುವಾರ ಬೆಳಿಗ್ಗೆ 10-30ರಿಂದ 12-30ರವರೆಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ.
27-10-2024 ಭಾನುವಾರ ಬೆಳಿಗ್ಗೆ 10-30ರಿಂದ 12-30ರವರೆಗೆ ಪತ್ರಿಕೆ -1.
27-10-2024 ಭಾನುವಾರ ಮಧ್ಯಾಹ್ನ 2-30ರಿಂದ 04-30ರವರೆಗೆ ಪತ್ರಿಕೆ -2.
ಪರೀಕ್ಷೆ ವಿಧಾನ
ಈ ಪರೀಕ್ಷೆಯನ್ನು ಆಫ್‌ಲೈನ್-ಒಎಂಆರ್ ಮಾದರಿಯಲ್ಲಿ ನಡೆಸಲಾಗುತ್ತದೆ. ಪರೀಕ್ಷೆಗೆ 200 ಅಂಕಗಳನ್ನು ಒಳಗೊಂಡ 2 ಪತ್ರಿಕೆ ಇರುತ್ತದೆ. ಜತೆಗೆ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿದ್ದು, ಇದರಲ್ಲಿ ಕನಿಷ್ಠ 50 ಅಂಕ ಗಳಿಸಬೇಕು. ಪರೀಕ್ಷೆಗಳನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಹಿಂದೆ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಅಂಕಗಳ ಆಧಾರದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೆರಿಟ್ ಆಧಾರದಲ್ಲಿ ಹುದ್ದೆಗಳಿಗೆ ಆಯ್ಕೆ ನಡೆಯುತ್ತಿತ್ತು. ಆದರೆ ಈ ಸಲದಿಂದ ಆಯ್ಕೆ ವಿಧಾನವನ್ನು ಬದಲಾಯಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಬಳಿಕ ಅಭ್ಯರ್ಥಿಗಳ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಲಿದೆ. ನಂತರ ಜಿಲ್ಲಾವಾರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದವರನ್ನು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯೋಜನೆಗೊಳಿಸಲಾಗುತ್ತದೆ. ನಿಗದಿತ ಮೀಸಲಾತಿಯಂತೆ ಹುದ್ದೆಗಳನ್ನು ಗುರುತಿಸಿ, ಆ ಪ್ರಕಾರ ಹುದ್ದೆ ಭರ್ತಿಯಾಗಲಿವೆ.
ಇದನ್ನೂ ಓದಿ: KEA: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ; ಅರ್ಜಿ ಅಂಗೀಕೃತವಾಗಿರದಿದ್ದರೆ ದಾಖಲೆ ಸಲ್ಲಿಸಲು ಆ.26 ಕೊನೆಯ ದಿನ