Site icon Vistara News

Karnataka Budget Session 2024: ಬಿಜೆಪಿ ಬಜೆಟ್‌ಗೆ ಕಿವಿಯಲ್ಲಿ ಹೂವಿಟ್ಟುಕೊಂಡು ಬಂದಿದ್ದ ಸಿದ್ದರಾಮಯ್ಯ ಈಗ ಜನರ ಕಿವಿಗಿಟ್ಟರು: ಎಚ್‌ಡಿಕೆ

HD Kumaraswamy Slams CM Siddaramaiah

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಬಜೆಟ್ ಮಂಡನೆ ಮಾಡಿದ್ದ ವೇಳೆ ಸದನಕ್ಕೆ ಕಿವಿಗೆ ಹೂವು ಇಟ್ಟುಕೊಂಡು ಬಂದಿದ್ದ ಸಿದ್ದರಾಮಯ್ಯ ಅವರು ಈಗ ಅದೇ ಹೂವನ್ನು 7 ಕೋಟಿ ಜನರ ಕಿವಿಗೆ ಇಟ್ಟಿದ್ದಾರೆ. ಈ ಬಜೆಟ್ (Karnataka Budget Session 2024) ನೋಡಿದರೆ ‘ನಾಳೆ ಬಾ ಸರ್ಕಾರ’ದ ರೀತಿ ಕಾಣುತ್ತಿದೆ ಎಂದು ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಬಜೆಟ್‌ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ಇದು ಡಿಪಿಆರ್ ಬಜೆಟ್ ಆಗಿದೆ. ಸರ್ಕಾರದಿಂದ ಯವುದಾದರೂ ಯೋಜನೆ ಜಾರಿ ಮಾಡುವ ಮುನ್ನ ಸಮಗ್ರ ಯೋಜನಾ ವರದಿ (DPR) ಅಂತ ಮಾಡುತ್ತಾರೆ. ಆ DPR ಆದ ಮೇಲೆ ಏನೆಲ್ಲ ಆಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಬಜೆಟ್ ಕೂಡ ಹಾಗೆಯೇ ಇದೆ.‌ ಈ ಬಜೆಟ್ ಅನ್ನು ನೋಡಿದರೆ ಇದು ನಾಳೆ ಬಾ ಸರ್ಕಾರದಂತೆ ಇದೆ ಎಂದು ಟೀಕಿಸಿದರು.

ಬಜೆಟ್ ಓದುವಾಗಲೇ ನನಗೆ ಅನಿಸಿದ್ದು ಅವರಲ್ಲಿ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಅವರು ಗ್ಯಾರಂಟಿಯ ಗುಂಗಿನಿಂದ ಇನ್ನೂ ಹೊರಗೇ ಬಂದಿಲ್ಲ. 10 ತಿಂಗಳು ಕಳೆದರೂ ಇನ್ನೂ ಗ್ಯಾರಂಟಿಗಳ ಬಗ್ಗೆಯೇ ಕನವರಿಕೆ ಮಾಡುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ವಿಶ್ವಾಸ ಮೂಡುತ್ತಿಲ್ಲ

ಸಿದ್ದರಾಮಯ್ಯ ಅವರ 15ನೇ ಬಜೆಟ್ ಇದು. ರಾಜ್ಯದ ಇತಿಹಾಸದಲ್ಲಿ 15 ಬಜೆಟ್‌ಗಳನ್ನು ಮಂಡಿಸುವವರು ಮುಂದೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಆಡಳಿತದಲ್ಲಿ ಸಾಕಷ್ಟು ಅನುಭವ ಇದೆ. ಆದರೆ, ಬಜೆಟ್ ನೋಡಿದರೆ ಯಾವುದೇ ರೀತಿಯ ವಿಶ್ವಾಸ ಮೂಡುತ್ತಿಲ್ಲ ಈ ಎಂದು ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಬಜೆಟ್ ಮೂಲಕ ರಾಜ್ಯದ ವಿನಾಶಕ್ಕೆ ಬುನಾದಿ

ಸರ್ಕಾರದ ಖಜಾನೆ ಖಾಲಿ ಆಗಿದೆ ಅಂತ ನಾವು ಹೇಳಲ್ಲ. ಜನರು ಸಮೃದ್ಧಿಯಾಗಿ ಖಜಾನೆ ತುಂಬಿಸಿದ್ದಾರೆ. ಈ ಬಜೆಟ್ ನೋಡಿದರೆ ಜನರು ನಾವು ಎಷ್ಟು ತಪ್ಪು ಮಾಡಿದ್ದೇವೆ ಇವರನ್ನು ಗೆಲ್ಲಿಸಿ ಎಂದು ಜನ ಅಂದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಅಮೃತಕಾಲ ಅಂದರೆ ಸಿದ್ದರಾಮಯ್ಯ ಅವರು ವಿನಾಶಕಾಲ ಎಂದು ಹೇಳಿದರು. ಇವತ್ತಿನ ಸಿಎಂ ಬಜೆಟ್ ರಾಜ್ಯದ ವಿನಾಶಕಾಲಕ್ಕೆ ಬುನಾದಿ ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.

ಏಳು ಕೋಟಿ ಜನರ ಕಿವಿಗೆ ಹೂವು

ಕೇಂದ್ರ ಸರ್ಕಾರಕ್ಕೆ ಅವರು ನಿತ್ಯವೂ ಬೈತಾರೆ. ಆದರೆ ಅದೇ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಅನ್ನುತ್ತಾರೆ. ಬಜೆಟ್ ಪುಸ್ತಕದ ಪ್ರತಿ ಪುಟದಲ್ಲಿಯೂ ಕೇಂದ್ರ ಸರ್ಕಾರವನ್ನು ಬೈದಿದ್ದಾರೆ. ಒಂದು ಸುಳ್ಳನ್ನು ಸತ್ಯ ಮಾಡಬೇಕಾದಾರೆ ನೂರು ಬಾರಿ ಸುಳ್ಳು ಹೇಳು ಎನ್ನುವ ಮಾತಿದೆ. ಅದೇ ಕೆಲಸವನ್ನು ಈಗ ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಇಂತಹ ಕೆಟ್ಟ ಸ‌ರ್ಕಾರ ಈ ದೇಶದಲ್ಲಿ ಯಾವತ್ತೂ ಬಂದಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Budget Session 2024: ಬಿಜೆಪಿಯಿಂದ ಬಜೆಟ್‌ ಬಾಯ್ಕಾಟ್‌; ಇತಿಹಾಸದಲ್ಲೇ ಮೊದಲು ಎಂದ ಸಿದ್ದರಾಮಯ್ಯ

ಜನರ ಮೇಲೆ ಸಿಎಂಗೆ ಸಿಟ್ಟಿದೆ, ಬಜೆಟ್‌ನಲ್ಲಿ ಅದು ಕಾಣುತ್ತಿದೆ

ನಾಡಿನ ಜನರ ಮೇಲೆ ಸಿದ್ದರಾಮಯ್ಯಗೆ ಆಕ್ರೋಶ ಇದ್ದಂತೆ ಇದೆ. ಆ ಸಿಟ್ಟನ್ನು ಬಜೆಟ್‌ನಲ್ಲಿ ತೋರಿಸಿದ್ದಾರೆ. ಇಷ್ಟೇ ಈ ಬಜೆಟ್ ನ ಸಾರಾಂಶ. ಅಷ್ಟೇ ಅಲ್ಲದೆ, ಸಿದ್ದರಾಮಯ್ಯಗೆ ಜೆಡಿಎಸ್, ಬಿಜೆಪಿ, ಕೇಂದ್ರದ ಮೇಲೆ ಇಷ್ಟು ದಿನ ಆಕ್ರೋಶ ಇತ್ತು ಅಂತ ಅಂದುಕೊಂಡಿದ್ದೆ. ಆದರೆ ಈ ಬಜೆಟ್ ನೋಡಿದರೆ ಸಿದ್ದರಾಮಯ್ಯ ಅವರಿಗೆ 7 ಕೋಟಿ ಕನ್ನಡಿಗರ ಮೇಲೆ ಆಕ್ರೋಶ ಇದೆ ಅಂತ ಅರ್ಥವಾಗುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Exit mobile version