Site icon Vistara News

Karnataka Budget 2024 : ಪ್ರತಿ ಕನ್ನಡಿಗನ ತಲೆ ಮೇಲೆ ಈಗ 1 ಲಕ್ಷ ರೂ. ಸಾಲ!

Karnataka-budget-2024-Siddaramaiah-Loan1

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ ಮಂಡಿಸಿದ 2024-25ನೇ ಸಾಲಿನ ಕರ್ನಾಟಕ ರಾಜ್ಯ ‌ ಆಯವ್ಯಯದ (Karnataka Budget 2024) ಒಟ್ಟು ಗಾತ್ರವು (Budget layout) 3,71,383 ಕೋಟಿ ರೂ. ಅಂದರೆ 2023-24ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರೇ ಮಂಡಿಸಿದ ಬಜೆಟ್‌ (ಗಾತ್ರ 3.27 ಲಕ್ಷ ಕೋಟಿ ರೂ.)ಗಿಂತ ಇದು 44 ಸಾವಿರ ಕೋಟಿ ರೂ. ಹೆಚ್ಚಾಗಿದೆ. ಇಷ್ಟೊಂದು ದೊಡ್ಡ ಗಾತ್ರದ ಬಜೆಟ್‌ ಮಂಡನೆ ಮಾಡಲು ಸಿದ್ದರಾಮಯ್ಯ ಅವರು ಪಡೆಯಲು ಉದ್ದೇಶಿಸಿದ ಸಾಲದ ಮೊತ್ತ 1,05,246 ಕೋಟಿ ರೂ.

ಸಿದ್ದರಾಮಯ್ಯ ಅವರ ಈ ಬಜೆಟ್‌ನ ಬಳಿಕ ರಾಜ್ಯ ಸರ್ಕಾರದ ಮೇಲಿನ ಸಾಲದ ಹೊರೆಯ (Loan Responsibility) ಪ್ರಮಾಣ 6,65,095 ಕೋಟಿ ರೂ.ಗಳಿಗೆ ಏರಲಿದೆ. ಅಂದರೆ ರಾಜ್ಯದಲ್ಲಿನ ಪ್ರತಿಯೊಬ್ಬ ನಾಗರಿಕನ ತಲೆಯ ಮೇಲೆ ಒಂದು ಲಕ್ಷ ರೂ. ಸಾಲದ ಹೊರೆ ಇರುವಂತಾಗಿದೆ.

ಬಜೆಟ್‌ನಲ್ಲಿ ಸಿದ್ದರಾಮಯ್ಯ ನೀಡಿದ ಅಂಕಿ ಅಂಶಗಳೇನು?

ಸಿಎಂ ಸಿದ್ದರಾಮಯ್ಯ ಅವರು ಮಂಡನೆ ಮಾಡಿದ ಬಜೆಟ್‌ನ ಅಂಕಿ ಅಂಶಗಳ ಪ್ರಕಾರ, 2024-25ನೇ ಸಾಲಿಗೆ 2,63,178 ಕೋಟಿ ರೂ.ಗಳ ರಾಜಸ್ವ ಜಮೆಯನ್ನು ಅಂದಾಜು ಮಾಡಲಾಗಿದೆ. ಇದರಲ್ಲಿ ರಾಜ್ಯದ ಸ್ವಂತ ತೆರಿಗೆಯಿಂದ 1,89,893 ಕೋಟಿ ರೂ.ಗಳ ಸಂಗ್ರಹಣೆಯನ್ನು ಅಂದಾಜು ಮಾಡಲಾಗಿದೆ.

ತೆರಿಗೆಯೇತರ ರಾಜಸ್ವಗಳಿಂದ 13,500 ಕೋಟಿ ರೂ.ಗಳು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರದಿಂದ 44,485 ಕೋಟಿ ರೂ.ಗಳ ತೆರಿಗೆ ಪಾಲು ಹಾಗೂ 15,300 ಕೋಟಿ ರೂ.ಗಳ ಸಹಾಯಾನುದಾನ ಸ್ವೀಕೃತಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ರಾಜಸ್ವ ಜಮೆಗಳಿಗೆ ಪೂರಕವಾಗಿ 1,05,246 ಕೋಟಿ ರೂ.ಗಳ ಸಾಲ, 38 ಕೋಟಿ ರೂ.ಗಳ ಋಣೇತರ ಸ್ವೀಕೃತಿ ಮತ್ತು 213 ಕೋಟಿ ರೂ.ಗಳ ಸಾಲ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

2024-25ನೇ ಸಾಲಿನಲ್ಲಿ ಒಟ್ಟು 2,90,531 ಕೋಟಿ ರೂ.ಗಳ ರಾಜಸ್ವ ವೆಚ್ಚ, 55,877 ಕೋಟಿ ರೂ.ಗಳ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 24,974 ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡು, ಒಟ್ಟು ವೆಚ್ಚವು 3,71,383 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ.

6.65 ಲಕ್ಷ ಕೋಟಿ ರೂ.ಗೆ ಏರಿದ ರಾಜ್ಯದ ಒಟ್ಟು ಸಾಲ

2024-25ರಲ್ಲಿ ರಾಜಸ್ವ ಕೊರತೆ 27,354 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. ವಿತ್ತೀಯ ಕೊರತೆ 82,981 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದ್ದು, ರಾಜ್ಯದ ಜಿ.ಎಸ್.ಡಿ.ಪಿಯ ಶೇ.2.95ರಷ್ಟಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಯು 2024-25ರ ಅಂತ್ಯಕ್ಕೆ 6,65,095 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ಅಂದರೆ ಈಗ ರಾಜ್ಯ ಸರ್ಕಾರದ ಮೇಲೆ 6.65 ಲಕ್ಷ ಕೋಟಿ ರೂ. ಸಾಲ ಇದೆ. ಅಂದರೆ, ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆ ಇದೆ ಎಂದು ಇಟ್ಟುಕೊಂಡರೆ ಪ್ರತಿಯೊಬ್ಬರ ಮೇಲೆ ಒಂದೊಂದು ಲಕ್ಷ ರೂ. ಸಾಲ ಇರುವಂತಾಗಿದೆ.

ಹಾಗಂತ ಸಾಲ ಮೇರೆ ಮೀರಿಲ್ಲ

ರಾಜ್ಯದ ಸರ್ಕಾರ ಈ ಬಜೆಟ್‌ಗಾಗಿ 1.05 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಒಟ್ಟು ಸಾಲ 6.65 ಲಕ್ಷ ಕೋಟಿ ರೂ. ಇದೆ ಎಂದ ಮಾತ್ರಕ್ಕೆ ಇದು ಮೇರೆ ಮೀರಿದೆ ಎಂದಲ್ಲ. ರಾಜ್ಯದ ಒಟ್ಟು ಹೊಣೆಗಾರಿಕೆಯು ಜಿ.ಎಸ್.ಡಿ.ಪಿಯ ಶೇ. 23.68ರಷ್ಟು ತಲುಪಲಿದೆ ಎಂದು ಅಂದಾಜಿಸಲಾಗಿದೆ. 2024-25ರಲ್ಲಿ ರಾಜ್ಯದ ವಿತ್ತೀಯ ಕೊರತೆ ಹಾಗು ಒಟ್ಟು ಹೊಣೆಗಾರಿಕೆಯನ್ನು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರಲ್ಲಿ ನಿಗದಿಪಡಿಸಿರುವ ಮಿತಿಯೊಳಗೆ ಅಂದಾಜು ಮಾಡುವ ಮೂಲಕ ವಿತ್ತೀಯ ಶಿಸ್ತನ್ನು ಪಾಲನೆ ಮಾಡಲಾಗಿರುತ್ತದೆ ಎಂದು ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ 52,009 ಕೋಟಿ ರೂ. ಅನುದಾನ

ಒಟ್ಟಾರೆಯಾಗಿ ಐದೂ ಗ್ಯಾರಂಟಿಗಳಿಗೆ ಸೇರಿ 52,009 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಐದೂ ಗ್ಯಾರಂಟಿ ಯೋಜನೆಯಲ್ಲಿ ಸಿಂಹಪಾಲು ಗೃಹ ಲಕ್ಷ್ಮಿ ಯೋಜನೆಗೆ (28,608 ಕೋಟಿ ರೂ) ಖರ್ಚಾಗುತ್ತಿದ್ದರೆ, ಅತಿ ಕಡಿಮೆ ಅನುದಾನ (650 ಕೋಟಿ ರೂ.) ಯುವ ನಿಧಿಗೆ ಮೀಸಲಿಡಲಾಗಿದೆ.

ಯಾವ ಗ್ಯಾರಂಟಿಗೆ ಎಷ್ಟು?

  1. ಗೃಹ ಜ್ಯೋತಿ: 9,657 ಕೋಟಿ ರೂ.
    ಅನ್ನ ಭಾಗ್ಯ: 8,079 ಕೋಟಿ ರೂ.
    ಶಕ್ತಿ: 5,015 ಕೋಟಿ ರೂ.
    ಯುವನಿಧಿ: 650 ಕೋಟಿ ರೂ.
    ಗೃಹ ಲಕ್ಷ್ಮಿ :28,608 ಕೋಟಿ ರೂ.
    ಒಟ್ಟು: 52,009 ಕೋಟಿ ರೂ.

ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆ ಹೇಗಿದೆ?

  1. ಶಿಕ್ಷಣ- 44422 ಕೋಟಿ ರೂ.
    ಮಹಿಳಾ ಮತ್ತು ಮಕ್ಕಳ ಕಲ್ಯಾಣ- 34406 ಕೋಟಿ ರೂ.
    ಇಂಧನ- 23159 ಕೋಟಿ ರೂ.
    ಗ್ರಾಮೀಣಾಭಿವೃದ್ಧಿ- 21160 ಕೋಟಿ ರೂ.
    ಒಳಾಡಳಿತ ಸಾರಿಗೆ- 19777 ಕೋಟಿ ರೂ.
    ನೀರಾವರಿ- 19179 ಕೋಟಿ ರೂ.
    ನಗರಾಭಿವೃದ್ಧಿ – 18155 ಕೋಟಿ ರೂ.
    ಕಂದಾಯ- 16170 ಕೋಟಿ ರೂ.
    ಆರೋಗ್ಯ – 15145 ಕೋಟಿ ರೂ.
    ಸಮಾಜ ಕಲ್ಯಾಣ- 13334 ಕೋಟಿ ರೂ.
    ಲೋಕೋಪಯೋಗಿ- 10424 ಕೋಟಿ ರೂ.
    ಆಹಾರ ಮತ್ತು ನಾಗರಿಕ ಪೂರೈಕೆ- 9963 ಕೋಟಿ ರೂ.
    ಕೃಷಿ ತೋಟಗಾರಿಕೆ- 6688 ಕೋಟಿ ರೂ.
    ಪಶುಸಂಗೋಪನೆ- 3307 ಕೋಟಿ ರೂ.
    ಇತರೆ- 124593 ಕೋಟಿ ರೂಪಾಯಿ

ಅತಿಯಾದ ಸಾಲದ ಬಗ್ಗೆ ಬಿಜೆಪಿ ಟೀಕಾ ಪ್ರಹಾರ

ಈ ನಡುವೆ ಸಿದ್ದರಾಮಯ್ಯ ಅವರು ಅತಿಯಾದ ಸಾಲ ಮಾಡುವ ಮೂಲಕ ಸಾಲರಾಮಯ್ಯ ಆಗಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಸಿದ್ದರಾಮಯ್ಯ ಅವರು 2024-25ನೇ ಸಾಲಿನಲ್ಲಿ 1,05,246 ಕೋಟಿ ರೂ. ಸಾಲ ಮಾಡಿದ್ದರೆ ಕಳೆದ ಬಜೆಟ್‌ನಲ್ಲಿ 88,000 ಕೋಟಿ ರೂ. ಸಾಲ ಮಾಡಿದ್ದರು. ಅಂದರೆ ಒಂದೇ ವರ್ಷದ ಅವಧಿಯಲ್ಲಿ ಮಾಡಿದ ಸಾಲದ ಮೊತ್ತ 1,93,246 ಕೋಟಿ ರೂ. ಇದಕ್ಕೆ ರಾಜ್ಯದ ಜನಸಂಖ್ಯೆಗೆ ಹೋಲಿಸಿದರೆ ಒಬ್ಬರ ತಲೆಗೆ 28,000 ರೂ. ಸಾಲದ ಹೊರೆ ಬೀಳುತ್ತದೆ ಎಂದು ಬಿಜೆಪಿ ಹೇಳಿದೆ.

Exit mobile version