ಬೆಂಗಳೂರು: ರಾಜ್ಯ ವಿಧಾನ ಮಂಡಲದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಂಡಿಸಿದ 2024-25ನೇ ಸಾಲಿನ ಬಜೆಟ್‌ನ್ನು (Karnataka Budget 2024) ಪ್ರತಿಪಕ್ಷ ಬಿಜೆಪಿ ಬಹಿಷ್ಕರಿಸಿದೆ. ಸಿದ್ದರಾಮಯ್ಯ ಅವರು ಭಾಷಣ ಆರಂಭ ಮಾಡುತ್ತಲೇ ʻಏನಿಲ್ಲ.. ಏನಿಲ್ಲ.. ಬಜೆಟ್‌ನಲ್ಲಿ ಏನಿಲ್ಲʼ ಎಂದು ಗೇಲಿ ಮಾಡುತ್ತಾ ಬಿಜೆಪಿ ಶಾಸಕರು ಹೊರನಡೆದಿದ್ದರು. ಈ ರೀತಿ ಬಜೆಟ್ ಮಂಡನೆಯನ್ನೇ ಬಹಿಷ್ಕರಿಸಿರುವುದು ಇತಿಹಾಸದಲ್ಲೇ ಮೊದಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿದ್ದರು. ಆದರೆ, ಇದು ಇತಿಹಾಸದಲ್ಲಿ ಮೊದಲೇನಲ್ಲ. ಈ ಹಿಂದೆ ಸಿದ್ದರಾಮಯ್ಯನವರೇ ಬಜೆಟ್ ಬಹಿಷ್ಕಾರದ ಮೂಲಕ ಇತಿಹಾಸ ಬರೆದಿದ್ದರು ಎಂದು ಬಿಜೆಪಿ (Karnataka BJP) ಹೇಳಿದೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ್ (R Ashok) ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಒಂದು ಪೋಸ್ಟ್ ಹಾಕಿ, 2021ರ ಬಜೆಟನ್ನು ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬಹಿಷ್ಕಾರ ಹಾಕಿದ್ದನ್ನು ನೆನಪಿಸಿಕೊಂಡಿದ್ದಾರೆ.
ಬಿಎಸ್‌ವೈ ಬಜೆಟ್‌ನಿಂದ ವಾಕೌಟ್ ಮಾಡಿದ್ದ ಸಿದ್ದರಾಮಯ್ಯ
ʻʻಬಜೆಟ್ ಭಾಷಣ ಬಹಿಷ್ಕಾರ ಮಾಡಿದ ಘಟನೆ ನಾನು ಇತಿಹಾಸದಲ್ಲೇ ನೋಡಿಲ್ಲ, ಇದು ಸಂವಿಧಾನಕ್ಕೆ ಮಾಡಿದ ಅಪಮಾನ ಅಂತ ಬುರುಡೆ ಬಿಡುವ ಮೊದಲ ತಮ್ಮ ಹಾಗೂ ತಮ್ಮ ಕಾಂಗ್ರೆಸ್ ಕ್ಷದ ಇತಿಹಾಸ ಒಮ್ಮೆ ತೆಗೆದು ನೋಡಿ ಸಿಎಂ ಸಿದ್ದರಾಮಯ್ಯ ಅವರೇ. 2021ರಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಜೆಟ್ ಭಾಷಣವನ್ನು ಬಹಿಷ್ಕಾರ ಮಾಡಿ ಸದನದಿಂದ ವಾಕ್ ಔಟ್ ಮಾಡುವ ಮೂಲಕ ಸನ್ಮಾನ್ಯ ಯಡಿಯೂರಪ್ಪನವರಂತಹ ಮುತ್ಸದ್ದಿ , ಹಿರಿಯ ಜನ ನಾಯಕರಿಗೆ ಅವಮಾನ ಮಾಡುವಾಗ ತಮ್ಮ ಈ ಉಪದೇಶ ತಮಗೆ ನೆನಪಿರಲಿಲ್ಲವೆ? ತಾವು ಮಹಾ ಸಾಚಾ ಎನ್ನುವಂತೆ ಮಾಧ್ಯಮಗಳ ಮುಂದೆ ನಾಟಕ ಆಡುವುದರಿಂದ ಏನೂ ಪ್ರಯೋಜನವಿಲ್ಲ. ತಮ್ಮ ಆಷಾಢಭೂತಿತನ, ಎರಡು ನಾಲಿಗೆ ಬಗ್ಗೆ ಎಲ್ಲರಿಗೂ ತಿಳಿದಿದೆʼʼ ಎಂದು ಆರ್. ಆಶೋಕ್ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಬಜೆಟ್ ಭಾಷಣ ಬಹಿಷ್ಕಾರ ಮಾಡಿದ ಘಟನೆ ನಾನು ಇತಿಹಾಸದಲ್ಲೇ ನೋಡಿಲ್ಲ, ಇದು ಸಂವಿಧಾನಕ್ಕೆ ಮಾಡಿದ ಅಪಮಾನ ಅಂತ ಬುರುಡೆ ಬಿಡುವ ಮೊದಲ ತಮ್ಮ ಹಾಗೂ ತಮ್ಮ @INCKarnataka ಪಕ್ಷದ ಇತಿಹಾಸ ಒಮ್ಮೆ ತೆಗೆದು ನೋಡಿ ಸಿಎಂ @siddaramaiah ಅವರೇ.
— R. Ashoka (ಆರ್. ಅಶೋಕ) (@RAshokaBJP) February 16, 2024
2021ರಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ @BSYBJP ಅವರ ಬಜೆಟ್ ಭಾಷಣವನ್ನು ಬಹಿಷ್ಕಾರ ಮಾಡಿ ಸದನದಿಂದ ವಾಕ್… pic.twitter.com/wOFnaE1TsL
2021ರಲ್ಲಿ ಬಿಎಸ್ ಯಡಿಯೂರಪ್ಪ ಅವರು ಬಜೆಟ್ ಮಂಡನೆ ಮಾಡಿದಾಗ ಸಿದ್ದರಾಮಯ್ಯ ಅವರು ಈ ಸರ್ಕಾರಕ್ಕೆ ನೈತಿಕ ಮೌಲ್ಯಗಳಿಲ್ಲ. ಹೀಗಾಗಿ ಬಜೆಟ್ ಮಂಡನೆಗೆ ಅರ್ಹತೆ ಇಲ್ಲ ಎಂದು ಹೇಳಿ ಭಾಷಣದ ಆರಂಭದಲ್ಲೇ ಸಭಾತ್ಯಾಗ ಮಾಡಿದ್ದಕ್ಕೆ ಸಂಬಂಧಿಸಿ ಅಂದು ಪ್ರಕಟವಾಗಿದ್ದ ಮಾಧ್ಯಮಗಳ ವರದಿಗಳು ಮತ್ತು ವಾಹಿನಿಗಳ ವರದಿಗಳನ್ನು ಟ್ಯಾಗ್ ಮಾಡಿದ್ದಾರೆ.
Stop lying Mr. @siddaramaiah avare.
— R. Ashoka (ಆರ್. ಅಶೋಕ) (@RAshokaBJP) February 16, 2024
People of Karnataka have not forgotten how you insulted former CM @BSYBJP avaru in 2021 by boycotting his budget speech.
Your hypocrisy and double standards are well known to everyone. Don't bring yourself further down at the fag end of your… https://t.co/Y1kjGMM1GO pic.twitter.com/63bkxJpKHb
ಇದನ್ನೂ ಓದಿ : Karnataka Budget Session 2024: ಬಿಜೆಪಿಯಿಂದ ಬಜೆಟ್ ಬಾಯ್ಕಾಟ್; ಇತಿಹಾಸದಲ್ಲೇ ಮೊದಲು ಎಂದ ಸಿದ್ದರಾಮಯ್ಯ
ಬಿಜೆಪಿ ಸಭಾತ್ಯಾಗದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಬಿಜೆಪಿಗೆ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ: ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಬಜೆಟ್ ಓದಲು ಪ್ರಾರಂಭ ಮಾಡಿದ ಕೂಡಲೇ ಸುನೀಲ್ ಕುಮಾರ್ ಅವರು ಏನಿಲ್ಲ ಏನಿಲ್ಲ ಎಂದು ಘೋಷಣೆ ಕೂಗುತ್ತಿದ್ದರು. ಬಿಜೆಪಿಗೆ ಸಂಸದೀಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಅವರ ತಲೆ ತುಂಬ ರಾಜಕೀಯ ಮಂಜು ತುಂಬಿದೆ. ಕಾಮಾಲೆ ರೋಗಿಗಳಿಗೆ ಕಂಡಿದ್ದೆಲ್ಲ ಹಳದಿಯಂತೆ ಆಗಿದೆ. ರಾಜಕೀಯ ಹೇಳಿಕೆ ಬೇಡ ಎನ್ನುವುದಿಲ್ಲ. ಆದರೆ ಟೀಕೆಗಳು ಆರೋಗ್ಯಕರವಾಗಿರಬೇಕು. ಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡುತ್ತಾರೆ. ಪ್ಲೇಕಾರ್ಡ್ ಹಿಡಿದಿದ್ದರು. ಬಜೆಟ್ ಕೇಳಬಾರದು ಎಂದು ಯೋಚಿಸಿಕೊಂಡೇ ಬಂದಿದ್ದರು. ನಾನು ವಸ್ತುಸ್ಥಿತಿಯನ್ನು ಹೇಳಿದರೆ ಅವರಿಗೆ ಅದು ನುಂಗಲಾರದ ತುತ್ತು. ಸತ್ಯ ಹೇಳಿದರೆ ತಡೆದುಕೊಳ್ಳಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಆಕ್ಷೇಪಿಸಿದ್ದರು.