ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಂಡಿಸಿದ 2024-25ನೇ ಸಾಲಿನ ಬಜೆಟ್‌ನ್ನು (karnataka Budget 2024) ಬಿಜೆಪಿ ನಾಯಕರೆಲ್ಲ ಟೀಕೆ ಮಾಡುತ್ತಿದ್ದರೆ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ (ST Somashekhar) ಅವರು ಮಾತ್ರ ಬಜೆಟ್‌ನ್ನು ಹಾಡಿ ಹೊಗಳಿದ್ದಾರೆ. ಬೆಂಗಳೂರಿಗೆ ಸಿಎಂ ಸಿದ್ದರಾಮಯ್ಯ ಅವರು ನಂಬರ್ ಒನ್ ಬಜೆಟ್ ಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ನಾನು ಸಿಎಂ ಮತ್ತು ಡಿಸಿಎಂ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಏಕೆಂದರೆ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕಸದ ಘಟಕಗಳು ಹೊರಕ್ಕೆ ಹಾಕಿದ್ದಾರೆ ಎಂದು ಖುಷಿಯಿಂದ ಹೇಳಿದ್ದಾರೆ. ನಾನು ಅಭಿಪ್ರಾಯ ಹೇಳುತ್ತಿರುವುದು ಬೆಂಗಳೂರಿಗೆ ಸಂಬಂಧಿಸಿದಂತೆ ಮಾತ್ರ ಎಂದಿದ್ದಾರೆ ಸೋಮಶೇಖರ್.
ದೈಹಿಕವಾಗಿ ಬಿಜೆಪಿಯಲ್ಲಿದ್ದರೂ ಮಾನಸಿಕವಾಗಿ ಅದರಿಂದ ದೂರವಾಗಿ ಕಾಂಗ್ರೆಸ್ ಜತೆಗೆ ಇರುವ ಸೋಮಶೇಖರ್ ಅವರು ಬಜೆಟ್ ಪ್ರತಿಕ್ರಿಯೆ ಮೂಲಕವೂ ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿದ್ದಾರೆ. ಬಜೆಟ್ ಅಧಿವೇಶನದ ಮೊದಲ ದಿನ ಎಲ್ಲ ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿಕೊಂಡು ಬಂದಿದ್ದರೆ ಸೋಮಶೇಖರ್ ಅವರೊಬ್ಬರೇ ಶಾಲು ಹಾಕದೆ ಬಂದಿದ್ದರು. ಬಳಿಕ ನಡೆದ ಬಿಜೆಪಿ ಶಾಸಕಾಂಗ ಪಕ್ಷ ಸಭೆಯಲ್ಲೂ ಅವರು ಭಾಗವಹಿಸಿರಲಿಲ್ಲ. ಅದರ ನಡುವೆ ವಿಧಾನ ಪರಿಷತ್ ಚುನಾವಣೆಯ ಪ್ರಚಾರದಲ್ಲೂ ಬಿಜೆಪಿಯಿಂದ ದೂರವಿದ್ದು ಕಾಂಗ್ರೆಸ್ ಅಭ್ಯರ್ಥಿಯ ಜತೆ ಕಾಣಿಸಿಕೊಂಡಿದ್ದರು.
ಹೀಗೆ ಬಿಜೆಪಿ ಸಭೆಗಳಿಂದ ದೂರ ಉಳಿದು ಕಾಂಗ್ರೆಸ್ ಜತೆಗೇ ಗುರುತಿಸಿಕೊಂಡಿರುವ ಸೋಮಶೇಖರ್ ಅವರು ಬಜೆಟ್‌ನಲ್ಲೂ ಕಾಂಗ್ರೆಸ್ ಪರವೇ ನಿಂತಿದ್ದಾರೆ. ಮಾತ್ರವಲ್ಲ, ಬಿಜೆಪಿ ನಾಯಕರು ಬಜೆಟ್ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲೂ ಸೋಮಶೇಖರ್ ಭಾಗವಹಿಸಿರಲಿಲ್ಲ.
ಇದನ್ನೂ ಓದಿ: Karnataka Budget 2024 : ಮೆಟ್ರೊ 3ನೆ ಹಂತ ಸೇರಿದಂತೆ ಬೆಂಗಳೂರು ನಗರ ಸಂಚಾರ ವ್ಯವಸ್ಥೆಗೆ ಬಜೆಟ್‌ನಲ್ಲಿ ಒತ್ತು
ನಾನು ಸಂಪೂರ್ಣ ಬಜೆಟ್ ಬಗ್ಗೆ ಮಾತನಾಡುತ್ತಿಲ್ಲ. ಬೆಂಗಳೂರಿಗೆ ಸೀಮಿತವಾಗಿ ಮಾತನಾಡುತ್ತೇನೆ. ಒಂದು ಉತ್ತಮ ಬಜೆಟ್ ನೀಡಿದ್ದಕ್ಕಾಗಿ ಸಿಎಂ, ಡಿಸಿಎಂಗೆ ಅಭಿನಂಧನೆ ಹೇಳ್ತೇನೆ. ನಮ್ಮ ಯಶವಂತಪುರ ಕ್ಷೇತ್ರದಲ್ಲಿ ಐದು ಕಸದ ಘಟಕಗಳಿವೆ. ಅವುಗಳನ್ನು ಹೊರಗೆ ಭಾಗಕ್ಕೆ ಸ್ಥಳಾಂತರ ಮಾಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದಾರೆ. ನೂರತ್ತಳ್ಳಿಗೆ ಕಾವೇರಿ ನೀರಿನ ಸೌಲಭ್ಯ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸಂಚಾರ ಸಮಸ್ಯೆ ನಿವಾರಣೆ ಬಗ್ಗೆ ಅವರು ಬಜೆಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ವೈಟ್ ಟ್ಯಾಪಿಂಗ್ ವಿಚಾರದಲ್ಲೂ ಕ್ಲಿಯರ್ ಮಾಡುವುದಾಗಿ ಹೇಳಿದ್ದಾರೆ. ನನ್ನ ಕ್ಷೇತ್ರಕ್ಕೆ ಕುಡಿಯುವ ಕೊಟ್ಟಿದ್ದಾರೆ ಎಂದರು.
ಬಿಜೆಪಿ ಪ್ರತಿಭಟನೆ ಪಾಲ್ಗೊಳ್ಳದಿರುವ ಬಗ್ಗೆ ಕೇಳಿದಾಗ, ಯತ್ನಾಳ್ ಸಿಕ್ಕಿದರು. ಇಬ್ಬರೂ ಕಾಫಿ ಕುಡಿತಾ ಬೆಂಗಳೂರುಗೆ ಬಜೆಟ್ ಚೆನ್ನಾಗಿದೆ ಅಂತ ಮಾತಾಡಿದೆವು ಎಂದು ಮಾತು ಮರೆಸಿದರು.
ಈ ನಡುವೆ, ಸೋಮಶೇಖರ್ ಅವರ ಪ್ರಶಂಸೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮಶೇಖರ್ ಅಷ್ಟೇ ಅಲ್ಲ, ಬೇಕಾದಷ್ಟು ಜನ ಅಭಿನಂದನೆ ಕೊಟ್ಟಿದ್ದಾರೆ ಎಂದರು.
ಬಿಜೆಪಿ ಬಜೆಟ್ ವಿರೋಧ ಮಾಡೋದು ಸಹಜ ಎಂದ ಪ್ರಿಯಾಂಕ್ ಖರ್ಗೆ
ಬಿಜೆಪಿ ಒಂದು ಪಕ್ಷವಾಗಿ ಬಜೆಟ್‌ನ್ನು ವಿರೋಧ ಮಾಡುವುದು ಸಹಜ. ಹಿಂದೆ ನಾವು ಕೂಡಾ ವಿರೋಧ ಮಾಡಿದ್ದೆವು. ಆದರೆ, ಬಜೆಟ್‌ನ್ನು ಬಹಿಷ್ಕಾರ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ 10 ಪುಟವನ್ನೂ ಓದಿಲ್ಲ. ಆದರೆ, ಅಷ್ಟರಲ್ಲೇ ವಿರೋಧ ಮಾಡಿದ್ದಾರೆ. ಇದು ಸರಿಯೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಜ್ಯ ಹಾಗೂ ಕೇಂದ್ರದ ಅಂಕಿ ಅಂಶಗಳು ನಿಜವಾದದ್ದು. ಪ್ರಶ್ನೆ ಮಾಡಿ ರಾಜ್ಯದ ಜನರಿಗೆ ಉತ್ತರ ನೀಡಬೇಕಿತ್ತು ಎಂದು ಹೇಳಿದ್ದಾರೆ ಪ್ರಿಯಾಂಕ್ ಖರ್ಗೆ. ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕೋದು ಬಿಟ್ಟು ಜವಾಬ್ದಾರಿಯಿಂದ ಇರಲಿ ಎಂದು ಹೇಳಿದ್ದಾರೆ.