ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ 15ನೇ ಬಜೆಟ್ (Karnataka Budget Session 2024) ಅನ್ನು ಮಂಡಿಸಿದ್ದಾರೆ. ಈ ವೇಳೆ ಗ್ಯಾರಂಟಿ ಯೋಜನೆಗೆ ಅನುದಾನದ ಹೊಂದಾಣಿಕೆಗೆ ಪ್ರಯತ್ನ ಪಟ್ಟಿರುವುದು ಎದ್ದು ಕಾಣುತ್ತದೆ. ತೆರಿಗೆ ಸಂಗ್ರಹದ ಮೇಲೆ ಕಣ್ಣಿಟ್ಟಿರುವ ಸಿಎಂ ಸಿದ್ದರಾಮಯ್ಯ, ಎಲ್ಲಿ ಸಾಧ್ಯವಿದೆಯೋ ಆ ಎಲ್ಲ ಕಡೆಗಳಿಂದ ತೆರಿಗೆಯನ್ನು ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದ್ದಾರೆ. ಈಗ ಆಸ್ತಿ ತೆರಿಗೆ ಮತ್ತು ಇನ್ನಿತರೆ ಶುಲ್ಕಗಳನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡಲು ಹಾಗೂ ತೆರಿಗೆ ಸೋರಿಕೆಯನ್ನು ತಡೆಗಟ್ಟಲು ಮುಂದಾಗಿದ್ದು, 3ಡಿ ಡ್ರೋನ್ ತಂತ್ರಜ್ಞಾನ ಬಳಕೆಗೆ ಮುಂದಾಗಲಾಗಿದೆ. ಅಲ್ಲದೆ, ತೆರಿಗೆ ಹಣ ವಸೂಲಿಗೆ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆಯನ್ನು ಬಳಸಿಕೊಳ್ಳಲೂ ತೀರ್ಮಾನ ಮಾಡಲಾಗಿದೆ.
ಬಜೆಟ್ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಗರ ಪ್ರದೇಶಗಳಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗಟ್ಟಲು ಹಾಗೂ ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಇನ್ನಷ್ಟು ಸರಳೀಕರಣಗೊಳಿಸಲು, ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು. ಆಸ್ತಿ ತೆರಿಗೆ ಮತ್ತು ಇನ್ನಿತರೆ ಶುಲ್ಕಗಳನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡಲು ಹಾಗೂ ತೆರಿಗೆ ಸೋರಿಕೆಯನ್ನು ತಡೆಗಟ್ಟಲು 3ಡಿ ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವತ್ತುಗಳ ಮ್ಯಾಪಿಂಗ್ ಮತ್ತು ಮರು ಮೌಲ್ಯಮಾಪನವನ್ನು ಕೈಗೊಳ್ಳಲಾಗುವುದು. ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕವನ್ನು ಸಮರ್ಪಕವಾಗಿ ವಸೂಲು ಮಾಡಲು, ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆಯನ್ನು ಪಡೆಯಲಾಗುವುದು ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಹೇಳಿದ ಇತರೆ ಕಾರ್ಯಕ್ರಮಗಳಿವು
- ನೇರಪಾವತಿಯಡಿ ಕೆಲಸ ನಿರ್ವಹಿಸುತ್ತಿರುವ 24,005 ಪೌರಕಾರ್ಮಿಕರನ್ನು ಈಗಾಗಲೇ ಕಾಯಂಗೊಳಿಸಲು ಸರ್ಕಾರದಿಂದ ಅನುಮೋದನೆ ನೀಡಲಾಗಿದೆ. ನೇರಪಾವತಿಯಡಿಯಲ್ಲಿ ಬಾಕಿ ಉಳಿದಿರುವ ಪೌರಕಾರ್ಮಿಕರಿಗೂ ಹಂತ ಹಂತವಾಗಿ ಕಾಯಂಗೊಳಿಸಲು ಕ್ರಮವಹಿಸಲಾಗುವುದು.
- ಸಮರ್ಪಕ ಹಾಗೂ ಯೋಜಿತ ನಗರೀಕರಣಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಎಲ್ಲ ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಗಳನ್ನಾಗಿ ಉನ್ನತೀಕರಿಸಲು ಕ್ರಮ ಕೈಗೊಳ್ಳಲಾಗುವುದು.
- ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಸಭೆಗಳ ಕಾರ್ಯಕಲಾಪಗಳನ್ನು ನೇರ ಪ್ರಸಾರ ಮಾಡಲಾಗುವುದು.
- ಮೈಸೂರಿನ ಪ್ರಖ್ಯಾತ ಲ್ಯಾನ್ಸ್ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿಯೇ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು.
ಬೆಂಗಳೂರಿಗೆ ಪರ್ಯಾಯವಾಗಿ ರಾಜ್ಯದಲ್ಲಿ ಸುಸ್ಥಿರವಾದ ಮೂಲಸೌಕರ್ಯಗಳನ್ನು ಒಳಗೊಂಡ ಮತ್ತು ಉದ್ಯೋಗಾವಕಾಶಗಳನ್ನು ಸೃಜಿಸುವಂತೆ ಆಕರ್ಷಕ ನಗರಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬೆಂಗಳೂರಿನ ಮೇಲಿನ ಒತ್ತಡವನ್ನು ತಗ್ಗಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಲಿದೆ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ, ಹೇಗೆ ಮಾಡಲಾಗುವುದು ಎಂಬುದನ್ನೂ ವಿವರಿಸಿದ್ದಾರೆ.
• ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ 2.0 ಅಡಿ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 2,000 ಕೋಟಿ ರೂ. ಗಳನ್ನು ಒದಗಿಸಲಾಗುವುದು.
• ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಕೆ.ಜಿ.ಎಫ್, ತುಮಕೂರಿನ ವಸಂತನರಸಾಪುರ ಮತ್ತು ಬಳ್ಳಾರಿ ನಗರಗಳ ಸಮೀಪದಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು.
• ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ಗಳನ್ನಾಗಿ (Satellite Townships) ಅಭಿವೃದ್ಧಿಪಡಿಸಲಾಗುವುದು.
• ಬೆಂಗಳೂರಿನ BIEC ನಿಂದ ತುಮಕೂರುವರೆಗೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ಯೋಜನೆಗಳನ್ನು ಪ್ರಾರಂಭಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು.
• ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನದಟ್ಟಣೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಿಂಗ್ ರಸ್ತೆಯ ಮೇಲೆ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ಪೆರಿಫೆರಲ್ ರಿಂಗ್ ರಸ್ತೆಯನ್ನು ಪಿಪಿಪಿ ಅಥವಾ ಟೌನ್ ಪ್ಲಾನಿಂಗ್ ಮಾದರಿಯಲ್ಲಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು.
• ನಗರ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಮೃತ್ 2.0 ಕೇಂದ್ರ ಪುರಸ್ಕೃತ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರಲ್ಲಿ ರಾಜ್ಯದ ಪಾಲು 4,615 ಕೋಟಿ ರೂ. ಗಳಾಗಿದೆ. ಕಳೆದ ವರ್ಷ ಈ ಉದ್ದೇಶಕ್ಕಾಗಿ ನಾವು 320 ಕೋಟಿ ರೂ. ಅನುದಾನ ಒದಗಿಸಿದ್ದು, ಈ ವರ್ಷ 200 ಕೋಟಿ ರೂ. ಒದಗಿಸಿ, 7.5 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿದ್ದೇವೆ.
• ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ದ್ರವ ಹಾಗೂ ಘನ ತ್ಯಾಜ್ಯ ಸಂಸ್ಕರಣೆಗೆ ಕೇಂದ್ರ ಸರ್ಕಾರದ ಪಾಲು 2,185 ಕೋಟಿ ರೂ.ಗಳನ್ನು ಒಳಗೊಂಡಂತೆ 5,072 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ನಮ್ಮ ಜಲ ಮೂಲಗಳನ್ನು ಮಲಿನಗೊಳಿಸುವ ದ್ರವ ತ್ಯಾಜ್ಯಗಳ ಸಂಸ್ಕರಣೆ, ಲೆಗೆಸಿ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಆದ್ಯತೆ ನೀಡುವ ಮೂಲಕ ನಗರಗಳಲ್ಲಿ ಸ್ವಚ್ಛ ವಾತಾವರಣ ನಿರ್ಮಾಣ ಮಾಡಲು ಒತ್ತು ನೀಡಲಾಗುವುದು.
• ಸ್ಥಳೀಯ ಸಂಸ್ಥೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜಂಟಿ ಸಹಭಾಗಿತ್ವದ ಯೋಜನೆಯಾದ ಅಮೃತ್ 2.0 ಅಡಿಯಲ್ಲಿ 539 ಕೋಟಿ ರೂ. ಮೊತ್ತದಲ್ಲಿ ಕೆರೆ ಹಾಗೂ ಜಲಮೂಲಗಳ ಪುನಶ್ಚೇತನ ಮತ್ತು ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳನ್ನು ಆಯ್ದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.