Site icon Vistara News

ಕೇಂದ್ರ ಸರ್ಕಾರ ಜಿಎಸ್‌ಟಿ ನಷ್ಟವನ್ನು ಭರಿಸುವುದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

basavaraja bommai gst compensation

ಬೆಂಗಳೂರು: ಜಿಎಸ್‌ಟಿ ಸಂಗ್ರಹದಲ್ಲಾದ ನಷ್ಟವನ್ನು ಕೇಂದ್ರ ಸರ್ಕಾರ ಇನ್ನಷ್ಟು ವರ್ಷ ಮುಂದುವರಿಸಬೇಕು ಎಂಬ ಕುರಿತು ಚರ್ಚೆಗೆ ತೆರೆ ಎಳೆದಿರುವ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.

ಚಾಮುಂಡೇಶ್ವರಿ ದರ್ಶನ ನಂತರ ಕಬಿನಿ ಮತ್ತು ಕಾವೇರಿ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಸಂದರ್ಭ ಮಾಧ್ಯಮಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಜಿಎಸ್‌ಟಿ ಸಂಗ್ರಹದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಜಿಎಸ್‌ಟಿಯಿಂದ ಸಂಗ್ರಹವಾದ ಹಣದಲ್ಲಿ ರಾಜ್ಯದ ಪಾಲು ಬರುತ್ತದೆ, ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು. ಜಿಎಸ್‌ಟಿ ಸಂಗ್ರಹದಲ್ಲಾದ ನಷ್ಟವನ್ನು ಕೇಂದ್ರ ಸರ್ಕಾರ ಭರಿಸುವ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅದು ಸಾಂವಿಧಾನಿಕ ನಿಯಮ. ಜಿಎಸ್‌ಟಿ ಜಾರಿಯಾದ ನಂತರ ಐದು ವರ್ಷದವರೆಗೆ ನಷ್ಟವನ್ನು ಭರಿಸಿಕೊಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ ಈ ನಡುವೆ ಎರಡು ವರ್ಷ ಕೋವಿಡ್‌ ಬಂದಿದ್ದರಿಂದ ಜಿಎಸ್‌ಟಿ ಸಂಗ್ರಹ ಆಗಿರಲಿಲ್ಲ, ಹೀಗಾಗಿ ಮತ್ತೆ ಎರಡು ವರ್ಷ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದೆವು. ಆದರೆ ಇದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನಮಗೆ ಬರಬೇಕಾದ ಬಾಕಿ ಹಣದಲ್ಲಿ ಇತ್ತೀಚೆಗೆ ತಾನೆ 8,800 ಕೋಟಿ ರೂ. ನೀಡಿದ್ದಾರೆ, ಅದರಲ್ಲಿ ಏನೂ ತೊಂದರೆ ಇಲ್ಲ ಎಂದು ಹೇಳಿದರು.

ಜಿಎಸ್‌ಟಿ ನಷ್ಟವನ್ನು ಇನ್ನಷ್ಟು ವರ್ಷ ಭರಿಸಿಕೊಡುವಂತೆ ಅನೇಕ ದಿನಗಳಿಂದ ಒತ್ತಡ ಕೇಳಿಬರುತ್ತಿದೆ. ಕೋವಿಡ್‌ನಿಂದಾಗಿ ರಾಜ್ಯಗಳ ಆದಾಯದಲ್ಲಿ ಕೊರತೆ ಆಗಿದ್ದು, ಇನ್ನೂ ಐದು ವರ್ಷ ಮುಂದುವರಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಆಗ್ರಹಿಸಿದ್ದರು. ಕೇಂದ್ರ ಸರ್ಕಾರ ನಷ್ಟವನ್ನು ಭರಿಸಿಕೊಡದಿದ್ದರೆ ರಾಜ್ಯ ಸರ್ಕಾರಕ್ಕೆ ಪ್ರತಿವರ್ಷ 20ಸಾವಿರ ಕೋಟಿ ರೂ. ಆದಾಯ ಕೊರತೆ ಉಂಟಾಗುತ್ತದೆ ಎಂದು ಹೇಳಿದ್ದರು.

ಶಿವಕುಮಾರ್‌ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ

ಬಿಜೆಪಿ ಸರಿಯಾಗಿ ಆಡಳಿತ ನಡೆಸುತ್ತಿಲ್ಲ ಎಂಬ ಡಿ.ಕೆ. ಶಿವಕುಮಾರ್‌ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಪಾಪ ಅವರು ಸಿಎಂ ಆಗಬೇಕು ಎಂದು ಅನೇಕ ವರ್ಷಗಳಿಂದ ಕನಸು ಕಾಣುತ್ತಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿಯೇ ಅವರಿಗೆ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಅದಕ್ಕೆ ಅಲ್ಲಿ ಅವಕಾಶ ನೀಡುತ್ತಿಲ್ಲ ಎಂದರು.

ಇದನ್ನೂ ಓದಿ | ನಾನೂ CM ಆಗುವ ಅವಕಾಶವಿದೆ: ಸಿದ್ದರಾಮಯ್ಯ ತವರಲ್ಲೆ ಡಿ.ಕೆ. ಶಿವಕುಮಾರ್‌​​​​​​ ಹೇಳಿಕೆ

ಕಾಂಗ್ರೆಸ್‌ನಲ್ಲಿ ದಿನಬೆಳಗಾದರೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ನಡುವಿನ ವಿಚಾರ ಎಲ್ಲರಿಗೂ ತಿಳಿಯುತ್ತಿದೆ. ಮೊದಲು ಅವರಲ್ಲಿರುವ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲಿ. ತಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಲಿ ಎಂದು ತಿಳಿಸಿದರು.

ಜಿಎಸ್‌ಟಿ ನಷ್ಟ ಭರಿಸುವಿಕೆ ಸ್ಥಗಿತ

ಮೈಸೂರಿನ ಪ್ರವಾಸೋದ್ಯಮ ಕೇಂದ್ರ ಎಂದು ಇನ್ನೊಂದು ವಾರದಲ್ಲಿ ಘೋಷಣೆ ಆಗುತ್ತದೆ, ಅದ್ಧೂರಿಯಾಗಿ ದಸರಾ ನಡೆಯುತ್ತದೆ. ಮೈಸೂರು ದಸರಾ ಪ್ರಾಧಿಕಾರ ರಚನೆ ಸೇರಿ ಇನ್ನಿತರ ವಿಚಾರಗಳನ್ನು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುತ್ತದೆ. ದಸರಾ ಉದ್ಘಾಟಕರ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಚರ್ಚೆ ಆಗಿದೆ, ಯಾರನ್ನು ಆಹ್ವಾನಿಸಬೇಕೆಂಬ ಅಧಿಕಾರವನ್ನು ನನಗೆ ನೀಡಿದ್ದಾರೆ. ಸದ್ಯದಲ್ಲೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ | ಸಿದ್ದರಾಮಯ್ಯ ಬಂದರೆ ಕ್ಷೇತ್ರ ಬಿಟ್ಟುಕೊಡುವೆ: ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ

Exit mobile version