ಬೆಂಗಳೂರು: ದಿನೇದಿನೆ ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರಯೋಗಶೀಲತೆಯೇ ಗೆಲುವಿನ ಸೂತ್ರ. ಅದರಲ್ಲೂ, ಕ್ಷಣಕ್ಷಣಕ್ಕೂ ವಿಕಸನಗೊಳ್ಳುತ್ತಿರುವ ಡಿಜಿಟಲ್ ಮಾಧ್ಯಮ ಜಗತ್ತಿನಲ್ಲಿ ನಿರಂತರ ಪ್ರಯೋಗಶೀಲತೆ, ಜನಕೇಂದ್ರಿತ ಆಲೋಚನೆಗಳೇ ಗೆಲುವಿನ ಆಧಾರ ಎಂದು ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಅಭಿಪ್ರಾಯಪಟ್ಟರು.
ವಿಸ್ತಾರ ನ್ಯೂಸ್ ವೆಬ್ಸೈಟ್ ಮತ್ತು ಚಾನೆಲ್ ಲೋಗೊ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ʻಭಾರತದಲ್ಲಿ ಡಿಜಿಟಲ್ ಮಾಧ್ಯಮದ ಭವಿಷ್ಯʼ ಸಂವಾದದಲ್ಲಿ ಅವರು ಮಾತನಾಡಿದರು. ಸಂವಾದದಲ್ಲಿ ಓಪನ್ ಡಾಟ್ ಮನಿ ಸಂಸ್ಥೆಯ ಸಹ ಸಂಸ್ಥಾಪಕ ಅನೀಶ್ ಅಚ್ಯುತನ್, ಕೂ ಸಾಮಾಜಿಕ ಜಾಲತಾಣದ ಸಹ ಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ, ಫ್ರೀಡಂ ಆ್ಯಪ್ನ ಸಂಸ್ಥಾಪಕರು ಹಾಗೂ ಸಿಇಒ ಸಿ.ಎಸ್. ಸುಧೀರ್ ಹಾಗೂ ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಭಾಗವಹಿಸಿದ್ದರು. ಏಮ್ ಹೈ ಕನ್ಸಲ್ಟೆನ್ಸಿ ಸರ್ವೀಸ್ನ ಸಿಇಒ ರವಿ ಶಂಕರ್ ಅವರು ಸಂವಾದವನ್ನು ನಿರ್ವಹಣೆ ಮಾಡಿದರು.
ಓಪನ್ ಡಾಟ್ ಮನಿ ಸಂಸ್ಥೆಯ ಸಹ ಸಂಸ್ಥಾಪಕ ಅನೀಶ್ ಅಚ್ಯುತನ್ ಮಾತನಾಡಿ, ಕಳೆದ ಒಂದೂವರೆ ದಶಕಗಳಿಂದ ಮಾಧ್ಯಮ ವಲಯದಲ್ಲಿ ಉಂಟಾಗಿರುವ ಡಿಜಿಟಲ್ ಕ್ರಾಂತಿ ವಿಶಿಷ್ಟವಾಗಿದೆ. ಇದರಿಂದಾಗಿ ಮಾಧ್ಯಮಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಪ್ರಭಾವ ಹೆಚ್ಚುತ್ತಿದೆ. ಇದು ಪತ್ರಿಕೆ, ಟಿ.ವಿ ವಾರ್ತಾ ವಾಹಿನಿಗಳಿಗೆ ದೊಡ್ಡ ಸವಾಲೂ ಹೌದು. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಬಿಸಿನೆಸ್ ಮಾದರಿಗೆ ಡಿಜಿಟಲ್ ಮಾಧ್ಯಮ ಕಾರಣವಾಗಿದೆ ಎಂದರು.
ಕೂ ಸಾಮಾಜಿಕ ಜಾಲತಾಣದ ಸಹ ಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ ಮಾತನಾಡಿ, ನಾನು ಮೊದಲ ಆಪ್ ಟ್ಯಾಕ್ಸಿ ಫಾರ್ ಶ್ಯೂರ್ ಮಾರಾಟ ಮಾಡಿದ ಬಳಿಕ ಮುಂದೆ ಭಾರತದಲ್ಲಿ ಯಾವ ಅಲೆ ಮೂಡಿಬರಬಹುದು ಎಂಬ ಆಲೋಚನೆ ಬಂತು. ಆಗ ಜಿಯೋ ಇನ್ನೂ ಬಂದಿರಲಿಲ್ಲ. ಆಗಿನ ಒಂದು ಪರಿಕಲ್ಪನೆ ಏನೆಂದರೆ ಮುಂದೆ ಎಲ್ಲರ ಬಳಿ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಇರುತ್ತದೆ, ಎಂಬುದು. ಆದರೆ ಆಗ ಇಂಗ್ಲಿಷ್ ಮಾತಾಡಬಲ್ಲವರು ಮಾತ್ರ ಇಂಟರ್ನೆಟ್ ಬಳಕೆ ಮಾಡುತ್ತಿದ್ದರು. ಆದರೆ ತುಂಬ ಬೇಗನೆ ಎಲ್ಲರೂ ನೆಟ್ ಬಳಕೆ ಶುರುಮಾಡಿದರು. ಆಗ ಇಂಗ್ಲಿಷ್ ಬರದಿರುವವರು ಅಂಥ ಕಡೆ ಹೋಗಲು ಸಾಧ್ಯವಾಗಲಿಲ್ಲ. ಆಪ್ಗಳ ಬಳಕೆಗೆ ಭಾಷೆ ಒಂದು ತಡೆಯಾಗಬಾರದು ಎಂದು ಎನ್ನಿಸಿತು. ಹೀಗೆ ಬಂದದ್ದು ಸ್ಥಳೀಯ ಭಾಷೆಯಲ್ಲಿ ಸೋಷಿಯಲ್ ಸೈಟ್ ನಿರ್ಮಿಸುವ ಯೋಚನೆ ಎಂದು ತಮ್ಮ ಪ್ರಯಾಣವನ್ನು ವಿವರಿಸಿದರು.
ಫ್ರೀಡಂ ಆ್ಯಪ್ನ ಸಂಸ್ಥಾಪಕರು ಹಾಗೂ ಸಿಇಒ ಸಿ.ಎಸ್. ಸುಧೀರ್ ಮಾತನಾಡಿ, ಕೃಷಿ, ಸಣ್ಣಪುಟ್ಟ ಉದ್ಯೋಗ, ವ್ಯಾಪಾರ ಮಾಡುವವರಿಗೆ ತಮ್ಮದೇ ಗುರಿ ಇರುತ್ತದೆ. ತಮ್ಮ ಆದಾಯವನ್ನು ಹೆಚ್ಚಿಸುವ ಆಶಯವನ್ನು ಹೊಂದಿರುತ್ತಾರೆ. ದೇಶದಲ್ಲಿ ಕೋಟ್ಯಂತರ ಗೃಹಿಣಿಯರಿಗೆ ತಮ್ಮ ಆದಾಯ ಗಳಿಕೆಗೆ ಒಂದು ಉತ್ತಮ ಮಾದರಿ ಬೇಕು ಎಂಬ ಹಂಬಲ ಇರುತ್ತದೆ. ಆದರೆ ಇದಕ್ಕೆ ತರಬೇತಿಯ ಅಗತ್ಯ ಇರುತ್ತದೆ. ತಂತ್ರಜ್ಞಾನದ ನೆರವು ಮತ್ತು ಕೌಶಲ ಬೇಕಾಗುತ್ತದೆ. ಇವೆಲ್ಲದಕ್ಕೂ ಮುಖಾಮುಖಿಯ ಅಗತ್ಯವನ್ನು ಡಿಜಿಟಲ್ ಮಾಧ್ಯಮ ಪರಿಣಾಮಕಾರಿಯಾಗಿ ಕಲ್ಪಿಸುತ್ತದೆ ಎಂದರು.
ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಮುದ್ರಣ ಅಥವಾ ಡಿಜಿಟಲ್ ಮಾಧ್ಯಮದಲ್ಲಿ ಯಾವುದು ಉಳಿಯುತ್ತದೆ, ಯಾವುದು ಅಳಿಯುತ್ತದೆ ಎನ್ನುವುದು, ಆ ಮಾಧ್ಯಮಗಳನ್ನು ನಿರ್ವಹಣೆ ಮಾಡುವವರ ಮೇಲೆ ಅವಲಂಬಿತವಾಗಿದೆ. ತಮ್ಮ ಅಭಿವ್ಯಕ್ತಿಯನ್ನು ಹೊರಜಗತ್ತಿಗೆ ತೆರೆದಿಡುವ ಕೆಲಸವನ್ನು ಸುಧೀರ್, ಅನೀಶ್, ಅಪ್ರಮೇಯ ಅವರಂತಹವರು ಮಾಡುತ್ತಾರೆ. ನಾವು ಮಾಧ್ಯಮದವರು ಇದೆಲ್ಲದಕ್ಕೂ ಸ್ಥಳ ನೀಡುತ್ತೇವೆ. ಒಬ್ಬ ರೈತ, ವಿಜ್ಞಾನಿ, ವಿದ್ಯಾರ್ಥಿಗೂ ನಾವು ಸ್ಪಂದಿಸಬೇಕು. ವಯಸ್ಕರ, ಪ್ರೌಢರ ನಿರೀಕ್ಷೆಗಳೇನು ಎಂಬ ಕುರಿತು ನಾವು ಸಂಶೋಧನೆ ಮಾಡಿ ಅದಕ್ಕೆ ತಕ್ಕಂತೆ ವಿಷಯಗಳನ್ನು ಒದಗಿಸಬೇಕು. ಆಗ ಮಾತ್ರ, ಉತ್ತಮ ಸಮಾಜ ನಿರ್ಮಾಣ ಮಾಡುವ ಮಾಧ್ಯಮದ ಆಶಯ ಈಡೇರುತ್ತದೆ ಎಂದರು.
ಸಂವಾದ ನಿರ್ವಹಣೆ ಮಾಡಿದ ಏಮ್ ಹೈ ಕನ್ಸಲ್ಟೆನ್ಸಿ ಸರ್ವೀಸ್ನ ಸಿಇಒ ರವಿ ಶಂಕರ್ ಮಾತನಾಡಿ, ಮಾಧ್ಯಮ ಎಂದರೆ ಮನರಂಜನೆ, ಮಾಹಿತಿ ಮತ್ತು ಶಿಕ್ಷಣ ಮೇಳೈಸಿರುವಂಥದ್ದು. ದೇಶದ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಉದ್ಯಮಶೀಲತೆ ಅತ್ಯಂತ ಮುಖ್ಯ. ಭಾರತ ೫ ಟ್ರಿಲಿಯನ್ ಡಾಲರ್ ಎಕಾನಮಿಯಾಗಲೂ ಪ್ರಯೋಗಶೀಲತೆ ಮುಖ್ಯ, ಡಿಜಿಟಲ್ ಮಾಧ್ಯಮ ವಲಯದಲ್ಲೂ ಇದು ನಡೆಯಬೇಕು ಎಂದು ಹೇಳಿದರು.
ಇದನ್ನೂ ಓದಿ | ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು