ಬೆಂಗಳೂರು: ಗಾಂಧಿಭವನದಲ್ಲಿ ಸಭೆ ನಡೆಯುತ್ತಿರುವಾಗ ವೇದಿಕೆ ಮೇಲೇರಿ ತಮ್ಮ ಮುಖಕ್ಕೆ ಮಸಿ ಬಳಿಯುವುದರಲ್ಲಿ ರಾಜ್ಯ ಸರ್ಕಾರದ ಕೈವಾಡವಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮಾಜಿ ಮುಖಂಡ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ. ಇದೇ ವೇಳೆ, ಟಿಕಾಯತ್ ಮುಖಕ್ಕೆ ಮಸಿ ಬಳಿದ ಭರತ್ ಶೆಟ್ಟಿ ತನ್ನ ಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೊ ಹಿಡಿದದ್ದು ಕಂಡುಬಂದಿದೆ.
ಕೋಡಿಹಳ್ಳಿ ಚಂದ್ರಶೇಖರ್ ಕಿಕ್‌ಬ್ಯಾಕ್ ಆರೋಪದ ಕುರಿತು ಸ್ಪಷ್ಟನೆ ನೀಡಲು ಬಂದಿದ್ದ ಸಂದರ್ಭದಲ್ಲಿ ಭರತ್ ಶೆಟ್ಟಿ ಎಂಬಾತ ಮುಖಕ್ಕೆ ಮಸಿ ಬಳಿದಿದ್ದ. ಇವರ ಜತೆ ಬಂದಿದ್ದ ಯದುವೀರ್ ಸಿಂಗ್ ಎಂಬುವರನ್ನು ಕುರ್ಚಿಗಳಿಂದ ಹಲ್ಲೆ ನಡೆಸಲಾಗಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ಈದನ್ನೂ ಓದಿ | Rakesh Tikait | ಕೋಡಿಹಳ್ಳಿ ಕುರಿತು ಸ್ಪಷ್ಟೀಕರಣಕ್ಕೆ ಬಂದಿದ್ದ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ
ಮುಖಕ್ಕೆ ಮಸಿ ಬಳಿದ ನಂತರ ಮಾತನಾಡಿದ ಟಿಕಾಯತ್, ನಮ್ಮ ಕಾರ್ಯಕ್ರಮ ಇದೆ ಎಂಬ ಮಾಹಿತಿ ಪೊಲೀಸರಿಗೆ ಇರುತ್ತದೆ. ದಾಳಿ ಮಾಡಿದವರು ಯಾರು ಎಂದು ನಮಗೆ ತಿಳಿದಿಲ್ಲ. ಕರ್ನಾಟಕದ ಮಟ್ಟಿಗಂತೂ ನಮಗೆ ಯಾರ ಜತೆಗೂ ವೈರತ್ವ ಇಲ್ಲ. ಇಂತಹ ಘಟನೆ ಆಗದಿರುವಂತೆ ರಕ್ಷಣೆ ನೀಡಬೇಕಾದದ್ದು ಸ್ಥಳೀಯ ಪೊಲೀಸರ ಕರ್ತವ್ಯ. ಸ್ಥಳೀಯ ಪೊಲೀಸರು ರಾಜ್ಯ ಸರ್ಕಾರ ಹೇಳಿದಂತೆ ನಡೆಯುತ್ತರೆ. ಹಾಗಾಗಿ ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕೈವಾಡವಿದೆ ಎಂದು ಹೇಳಿದರು.
ಮೋದಿ ಜೈಕಾರ
ಟಿಕಾಯತ್ ಮುಖಕ್ಕೆ ಮಸಿ ಬಳಿದ ನಂತರ ಪೊಲೀಸರು ಭರತ್ ಶೆಟ್ಟಿಯನ್ನು ಬಂಧಿಸಿ ಹೊಯ್ಸಳ ವಾಹನದಲ್ಲಿ ಕರೆದೊಯ್ದರು. ಈ ಸಮಯದಲ್ಲಿ ʼನರೇಂದ್ರ ಮೋದಿ ಜೈʼ ಹಾಗೂ ʼನಕಲಿ ಹೋರಾಟಗಾರರಿಗೆ ಧಿಕ್ಕಾರʼ ಎಂದು ಘೋಷಣೆಗಳನ್ನು ಕೂಗಿದ್ದಾನೆ. ಕೈಲ್ಲಿ ಪ್ರಧಾನಿ ಮೋದಿಯವರ ಮೂರ್ನಾಲ್ಕು ಭಾವಚಿತ್ರಗಳನ್ನು ಹಿಡಿದಿದ್ದದ್ದು ಕಂಡುಬಂದಿದೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಯಕ್ರಮ ಆಯೋಜಕ ಕೆ.ಟಿ. ಗಂಗಾಧರ್, ಸಭೆ ನಡೆಯುವ ವೇಳೆ ಮೂವರು ಕಿಡಿಗೇಡಿಗಳು ನುಗ್ಗಿ ದಾಂಧಲೆ ಮಾಡಿದ್ದಾರೆ. ಮಸಿ ಬಳಿದದ್ದು ಮಾತ್ರವಲ್ಲ, ಮೈಕ್ ಮೂಲಕ ಹಲ್ಲೆ ನಡೆಸಿದ್ದಾರೆ. ಗಲಾಟೆಯಲ್ಲಿ ಹೆಣ್ಣುಮಕ್ಕಳ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಮಂಗಳವಾರ ಕಪ್ಪು ದಿನ
ಸುದ್ದಿಗೋಷ್ಠಿಯ ನಡುವೆ ಕವಿತ ಕುರ್ಗುಂಟಿ ಅವರು ಮಾತನಾಡಲು ಆರಂಭಿಸಿದರು. ಅವರು ತೆಲುಗುವಿನಲ್ಲಿ ಮಾತನಾಡಿದ್ದಕ್ಕೆ ಭರತ್ ಶೆಟ್ಟಿ ಹಾಗೂ ಇನ್ನಿಬ್ಬರು ಆಕ್ಷೇಪಿಸಿದ್ದಾರೆ. ಕೆಲ ಹೊತ್ತಿನಲ್ಲಿಯೇ ಗಲಾಟೆ ಹೆಚ್ಚಾಗಿ, ವೇದಿಕೆಗೆ ಬಂದು ಮಸಿ ಬಳಿದಿದ್ದಾರೆ ಎಂದು ಚುಕ್ಕಿ ನಂಜುಂಡಸ್ವಾಮಿ ತಿಳಿಸಿದ್ದಾರೆ. ಮಸಿ ಬಳಿದದ್ದಷ್ಟೆ ಅಲ್ಲದೆ ಮೈಕ್‌ನಿಂದ ಹಲ್ಲೆ ಮಾಡಿದ್ದಾರೆ. ರಾಕೇಶ್ ಟಿಕಾಯತ್ ಮೇಲಿನ ಹಲ್ಲೆಯನ್ನು ಖಂಡಿಸಿ ಮಂಗಳವಾರ ಕಪ್ಪು ದಿನ ಆಚರಣೆ ಮಾಡುವುದಾಗಿ ಚಿಕ್ಕಿ ನಂಜುಂಡಸ್ವಾಮಿ ತಿಳಿಸಿದ್ದಾರೆ.
ರಾಕೇಶ್ ಟಿಕಾಯತ್ ಮೇಲಿನ ಹಲ್ಲೆಯನ್ನು ಖಂಡಿಸಿದ ರೈತ ಮುಖಂಡರು ಗಾಂಧಿ ಭವನದ ಬಳಿಯಲ್ಲೇ ಅನೇಕ ಹೊತ್ತು ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಆರೋಪಿಗಳಾದ ಭರತ್ ಶೆಟ್ಟಿ, ಪ್ರದೀಪ್ ಹಾಗೂ ಶಿವಕುಮಾರ್ ಅವರುಗಳನ್ನು ಹೌಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ವಿಸ್ತಾರ Details: ಡೀಲ್ ಸುಳಿಯಲ್ಲಿ ರೈತ ನಾಯಕ ಕೋಡಿಹಳ್ಳಿ; ಆಪ್ ಈಗ ಏನು ಮಾಡಬಹುದು?